ADVERTISEMENT

ಸೆ.1ರಂದು ಕೋಲಿ ಸಮಾಜದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 7:36 IST
Last Updated 25 ಆಗಸ್ಟ್ 2025, 7:36 IST
ಮಲ್ಲಿಕಾರ್ಜನ ಗೋಸಿ
ಮಲ್ಲಿಕಾರ್ಜನ ಗೋಸಿ   

ಯಾದಗಿರಿ: ‘ಕೋಲಿ, ಕಬ್ಬಲಿಗೆ ಸಮಾಜದ ಗುರು ಹಾಗೂ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದವರ ಬಂಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 1ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜನ ಗೋಸಿ ಹೇಳಿದರು.

‘ಅಂದು ಬೆಳಿಗ್ಗೆ 11ಕ್ಕೆ ತಹಶೀಲ್ದಾರ್ ಕಚೇರಿ ಮುಂಭಾಗದಿಂದ ಸುಭಾಷ್ ವೃತ್ತದವರೆಗೆ ಪ್ರತಿಭಟನೆ ನಡೆಸಿ, ವೃತ್ತದಲ್ಲಿ ಬಹಿರಂಗ ಸಭೆ ಮಾಡಲಾಗುವುದು. ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಪತ್ರೆ ಪಡೆಯದೆ ಇದ್ದರೆ, ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ಮೆರವಣಿಗೆ ನಡೆಸುತ್ತೇವೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈಚೆಗೆ ವಾಲ್ಮೀಕಿ ನಾಯಕ ಸಮಾಜದವರು ನಕಲಿ ಎಸ್‌ಟಿ ಜಾತಿ ಪ್ರಮಾಣಪತ್ರ ವಿತರಣೆ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ವೇಳೆ ಕೆಲವರು ನಮ್ಮ ಸಮಾಜ ಹಾಗೂ ಸಮಾಜದ ಗುರುಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಆರೋಪಿಗಳನ್ನು ಬಂಧಿಸಬೇಕು’ ಎಂದರು. 

ADVERTISEMENT

‘ನಕಲಿ ಜಾತಿ ಪ್ರಮಾಣಪತ್ರ ಪಡೆಯುವುದನ್ನು ನಾವೂ ವಿರೋಧಿಸುತ್ತೇವೆ. ಕೋಲಿ, ಕಬ್ಬಲಿಗ ಸಮಾಜದವರು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿಲ್ಲ. ಸರ್ಕಾರದ ಆದೇಶದಂತೆ ತಳವಾರರು ಎಸ್‌ಟಿ ಪ್ರಮಾಣಪತ್ರ ಪಡೆಯುತ್ತಿದ್ದು, ಯಾವುದೇ ಅಡ್ಡಿಪಡಿಸದೆ ಜಾತಿ ಪ್ರಮಾಣಪತ್ರ ನೀಡಬೇಕು. ಕೋಲಿ, ಕಬ್ಬಲಿಗ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗರತ್ನ ಅನಪುರ, ತಾಲ್ಲೂಕು ಅಧ್ಯಕ್ಷ ಲಿಂಗಪ್ಪ ಜಾಲಗಾರ, ಯುವ ಘಟಕದ ಜಿಲ್ಲಾಧ್ಯಕ್ಷ ಮಲ್ಲು ಪೂಜಾರಿ, ಪದಾಧಿಕಾರಿಗಳಾದ ಭೀಮರಡ್ಡಿ ಯರಗೋಳ, ರಾಜು ಸೈದಾಪುರ, ಖಂಡಪ್ಪ ಹೊಸುರ, ದೇವೇಂದ್ರಪ್ಪ ಪಸಪುಲ್, ಬಸವರಾಜ ಕೊಳ್ಳೂರ, ರಾಯಪ್ಪ ಶಹಾಪುರ, ಮಹೇಶಕುಮಾರ ಬಾಡಿಯಾಳ, ದೇವೇಂದ್ರಗೌಡ, ವೆಂಕಟೇಶ ಬಂದಳ್ಲಿ, ಮರೆಪ್ಪ ಸುಣಗಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.