ADVERTISEMENT

ಶಹಾಪುರ: ಕೃಷ್ಣಾ ಪ್ರವಾಹ ನಲುಗುವ ಗ್ರಾಮಗಳು

ಟಿ.ನಾಗೇಂದ್ರ
Published 23 ಆಗಸ್ಟ್ 2025, 5:09 IST
Last Updated 23 ಆಗಸ್ಟ್ 2025, 5:09 IST
22ಎಸ್ಎಚ್ಪಿ 2 ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಶುಕ್ರವಾರ ಸಹ ಪ್ರವಾಹದ ನೀರು ಮುಂದುವರೆದಿದೆ
22ಎಸ್ಎಚ್ಪಿ 2 ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ಶುಕ್ರವಾರ ಸಹ ಪ್ರವಾಹದ ನೀರು ಮುಂದುವರೆದಿದೆ   

ಶಹಾಪುರ: ಕೃಷ್ಣೆಯು ಉಕ್ಕಿಹರಿದರೆ, ನದಿಯ ಪಾತ್ರದಲ್ಲಿರುವ ಗ್ರಾಮಗಳು ಪ್ರವಾಹದ ಭೀತಿಯಿಂದ ನಲುಗುತ್ತವೆ. ಅದೇ ಕೃಷ್ಣೆಯು ಬೇಸಿಗೆಯಲ್ಲಿ ಬದುಕಿಗೆ ಜೀವ ತುಂಬಿದರೆ, ಪ್ರವಾಹವು ಬದುಕನ್ನು ಕಸಿದು ಬೆತ್ತಲೆಯಾಗಿಸುತ್ತದೆ. ಆದರೆ ಸರ್ಕಾರದ ಸಹಾಯ, ನೆರವು ಮಾತ್ರ ಶೂನ್ಯ...ಇವು ಕೃಷ್ಣಾ ನದಿಯ ಪಾತ್ರದಲ್ಲಿರುವ ಗ್ರಾಮಗಳ ನಿವಾಸಿಗಳ ಅಸಹಾಯಕತೆಯ ನೋವಿನ ಅಳಲು.

ಸದ್ಯ ಮಳೆ ತಗ್ಗಿದೆ, ಆದರೆ ಕೃಷ್ಣೆ ಪ್ರವಾಹ ಮಾತ್ರ ಮುಂದುವರಿದಿದೆ. ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಪ್ರತಿ ಬಾರಿಯೂ ಪ್ರವಾಹ ಬಂದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಗೋಳು ಕೇಳುವುದಿಲ್ಲ. ಪ್ರವಾಹ ಬಂದರೆ ದಾಖಲೆಗಳನ್ನು ಹಿಡಿದು ಪ್ರತ್ಯಕ್ಷವಾಗುವ ಅಧಿಕಾರಿಗಳು, ಶಾಶ್ವತ ಪರಿಹಾರಕ್ಕೆ ಮುಂದಾಗುವುದಿಲ್ಲ ಎಂಬುದು ನದಿ ಪಾತ್ರದಲ್ಲಿರುವ ನಿವಾಸಿಗಳ ಆರೋಪ.

ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿಯ ಸೇತುವೆ ಎತ್ತರಿಸುವಂತೆ ಹಲವಾರು ವರ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸುತ್ತ ಬಂದಿದ್ದಾರೆ. ಪರಿಹಾರ ಈವರೆಗೂ ಸಿಕ್ಕಿಲ್ಲ. ಸಚಿವರು ಭೇಟಿ ನೀಡಿ, ಸೇತುವೆ ಎತ್ತರಿಸಲು ಅಂದಾಜುಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದೇವೆ ಎಂದು ಹೇಳಿಕೆ ನೀಡಿ ಮಾಯವಾಗುತ್ತಾರೆ. ಮತ್ತೆ ನೆನೆಪಾಗುವುದು ಪ್ರವಾಹ ಬಂದಾಗ ಎನ್ನುತ್ತಾರೆ ಕೊಳ್ಳೂರ(ಎಂ) ಗ್ರಾಮದ ನಿವಾಸಿ ನಾಗಪ್ಪ.

ADVERTISEMENT

ಪ್ರವಾಹದ ಸೆಳೆತಕ್ಕೆ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತದೆ. ಆದರೆ ಪ್ರವಾಹ ಬರುವ ಮುಂಚೆ ಹಾಗೂ ನಂತರ ನಾವು ಕೆಲ ದಿನ ವಿದ್ಯುತ್ ಸಂಪರ್ಕ ಇಲ್ಲದೆ ಬೆಳೆಗಳು ಒಣಗುತ್ತವೆ. ಆಗ ರೈತರು ಪರಿಹಾರ ನೀಡಿ ಎಂಬ ಬೇಡಿಕೆಯನ್ನು ಮಂಡಿಸಿದಾಗ ನೈಸರ್ಗಿಕ ವಿಕೋಪದ ಅಡಿಯಲ್ಲಿ ಕೇವಲ ನೀರು ನಿಲುಗಡೆಯಿಂದ ಹಾನಿಯಾದ ಬೆಳೆಗೆ ಪರಿಹಾರ ಒದಗಿಸುವಂತೆ ಕೃಷಿ ಅಧಿಕಾರಿಗಳು ಶಿಫಾರಸು ಮಾಡುತ್ತಾರೆ. ಇದು ನಮಗೆ ಸಾಕಷ್ಟು ಹಾನಿ ಉಂಟು ಮಾಡುತ್ತಲಿದೆ ಎಂದು ನದಿ ಪಾತ್ರದ ರೈತರ ಆರೋಪವಾಗಿದೆ.

ಪ್ರವಾಹದಿಂದ ನದಿ ಪಾತ್ರದ ಜನರಿಗೆ ರೋಗದ ಭೀತಿಯು ಸದಾ ಕಾಡುತ್ತಲಿರುತ್ತದೆ. ಜಾನುವಾರಿಗೆ ಮೇವಿನ ಬರ ಹಾಗೂ ಕುಡಿಯುವ ನೀರಿಗೂ ಸಮಸ್ಯೆ, ನದಿಗೆ ಮೀನುಗಾರರು ಬಲೆ ಎಸೆಯುವಂತೆ ಇಲ್ಲ. ಹೀಗೆ ಹಲವಾರು ಸಮಸ್ಯೆಗಳ ನಡುವೆ ನಾವು ಪ್ರವಾಹ ಎದುರಿಸುತ್ತೇವೆ. ನಮಗೆ ಪ್ರವಾಹ ಬಂದರೆ ಸಂಕಷ್ಟ, ಆತಂಕ ಹಾಗೂ ದುಗುಡ ತಂದೊಡ್ಡುತ್ತದೆ ಎನ್ನುತ್ತಾರೆ ನದಿ ಪಾತ್ರದ ಗ್ರಾಮಸ್ಥರು.

 ನದಿ ದಂಡೆಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ

ಕೃಷ್ಣಾ ನದಿಯ ಸೇತುವೆ ಮೇಲೆ ಶುಕ್ರವಾರವು ಪ್ರವಾಹದ ನೀರು ಮುಂದುವರಿದಿದೆ. ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬೆಳೆ ಸಮೀಕ್ಷೆ ಕಾರ್ಯ ಆರಂಭಿಸಿದ್ದೇವೆ
ಸಿದ್ದರೂಢ ಬನ್ನಿಕೊಪ್ಪ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.