ADVERTISEMENT

ಯಾದಗಿರಿ: ಕೆಆರ್‌ಎಸ್‌ ಪಕ್ಷದಿಂದ ಎದ್ದೇಳು ಕನ್ನಡಿಗ ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:40 IST
Last Updated 18 ಅಕ್ಟೋಬರ್ 2025, 6:40 IST
ಯಾದಗಿರಿಯಲ್ಲಿ ಸೋಮವಾರ ಕೆಆರ್‌ಎಸ್‌ ಪಕ್ಷದ ವತಿಯಿಂದ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ ನಡೆಸಿದರು
ಯಾದಗಿರಿಯಲ್ಲಿ ಸೋಮವಾರ ಕೆಆರ್‌ಎಸ್‌ ಪಕ್ಷದ ವತಿಯಿಂದ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ ನಡೆಸಿದರು   

ಯಾದಗಿರಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನವನ್ನು ಸೋಮವಾರ ನಡೆಸಲಾಯಿತು.

ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹೊರಟ ಅಭಿಯಾನವು ಶಾಸ್ತ್ರಿ ವೃತ್ತ, ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತದವರೆಗೆ ಸಾಗಿತು. ಅಭಿಯಾನದ ಕುರಿತು ಜನ ಜಾಗೃತಿ ಹಾಗೂ ಪಕ್ಷದ ಸದಸ್ಯತ್ವ ಮಾಡುವ ಮೂಲಕ ದೇಣಿಗೆ ಸಂಗ್ರಹಿಸಲಾಯಿತು.

ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ, ‘ಇತ್ತೀಚಿನ ದಿನಗಳಲ್ಲಿ ಕನ್ನಡಿಗರು ಅನುಭವಿಸುತ್ತಿರುವ ನೋವುಗಳಿಗೆ ನಮ್ಮನ್ನು ಆಳುತ್ತಿರುವ ಎಲ್ಲಾ ರಾಜಕೀಯ ಪಕ್ಷಗಳೇ ಕಾರಣ. ಅವರವರ ಸ್ವಾರ್ಥ ಮತ್ತು ಕುಟುಂಬ ರಾಜಕಾರಣದಲ್ಲಿ ರಾಜ್ಯದ ಮತದಾರರನ್ನು ಮೂರ್ಖರನ್ನಾಗಿ ಮಾಡಿ, ಜನರನ್ನು ವಂಚಿಸುತ್ತಿದ್ದಾರೆ’ ಎಂದರು.

ADVERTISEMENT

‘ಜನಪರವಾದ ಆಡಳಿತ ನಡೆಸಬೇಕಾದ ಪಕ್ಷಗಳು ಜಾತಿ ರಾಜಕಾರಣ, ಹಣಬಲದ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ. ಹೀಗಾಗಿ, ನಮ್ಮ ಪಕ್ಷವು ಕನ್ನಡ ನಾಡಿನ ನೆಲ, ಜಲ, ಗಡಿ ಭಾಷೆಯ ಉಳಿವಿಗೆ ಶ್ರಮಿಸಲಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಲು ಒತ್ತಾಯಿಸಿ ನವಂಬರ್ ತಿಂಗಳಲ್ಲಿ ದೊಡ್ಡ ಸಮಾವೇಶ ಆಯೋಜನೆ ಮಾಡಲಾಗುವುದು’ ಎಂದರು.

ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ.ಗೋಮರ್ಸಿ ಮಾತನಾಡಿದರು. ಪಕ್ಷದ ಪದಾಧಿಕಾರಿಗಳಾದ ಆನಂದ್, ಪ್ರಸನ್ನ ಕುಮಾರ್, ಶಿವರಾಜ್ ಕಪಗಲ್, ಜಗನ್ನಾಥ, ನಿಜಲಿಂಗಪ್ಪ, ಬಸವರಾಜ, ಶಾಂತಕುಮಾರ್, ಜಯವಂತ, ಸೋಮನಗೌಡ, ಹನುಮಂತ, ಬಸಲಿಂಗಪ್ಪ ದುಪ್ಪಳ್ಳಿ, ಹನುಮಂತ ಸುರಪುರ, ನರಸಿಂಹ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.