ADVERTISEMENT

ಲಾಕ್‌ಡೌನ್: ಕಾರ್ಮಿಕರ ಹೊತ್ತಿನ ಊಟಕ್ಕೂ ಕೊಕ್ಕೆ

ಹುಣಸಗಿ: ಸಂಕಷ್ಟಕ್ಕೆ ಸಿಲುಕಿದ ಕಲೆಗಾರ, ದಾಸರ, ಬೋವಿ ಸಮುದಾಯಗಳ ಜನರು

ಭೀಮಶೇನರಾವ ಕುಲಕರ್ಣಿ
Published 17 ಮೇ 2021, 3:06 IST
Last Updated 17 ಮೇ 2021, 3:06 IST
ಹುಣಸಗಿ ಪಟ್ಟಣದ ಎಪಿಎಂಸಿ ಬಳಿ ರಸ್ತೆಯ ಪಕ್ಕದಲ್ಲಿರುವ ಶೆಡ್‌ಗಳ ಮುಂದೆ ಕುಳಿತಿರುವ ಮಹಿಳೆಯರು
ಹುಣಸಗಿ ಪಟ್ಟಣದ ಎಪಿಎಂಸಿ ಬಳಿ ರಸ್ತೆಯ ಪಕ್ಕದಲ್ಲಿರುವ ಶೆಡ್‌ಗಳ ಮುಂದೆ ಕುಳಿತಿರುವ ಮಹಿಳೆಯರು   

ಹುಣಸಗಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಅಲೆಮಾರಿ ಸಮುದಾಯಗಳು ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಪಟ್ಟಣದ ವಿವಿಧೆಡೆ ಗುಡಿಸಲು ಕಟ್ಟಿಕೊಂಡು ಕೊಡ ದುರಸ್ತಿ, ಬಂಬೂಗಳ ಮಾರಾಟ ಸೇರಿದಂತೆ ಹಲವು ಕಾರ್ಯಗಳಲ್ಲಿ ನಿರತರಾಗಿದ್ದ ಕಲೆಗಾರ, ದಾಸರ ಮತ್ತು ಬೋವಿ ಕುಟುಂಬಗಳು ಲಾಕ್‌ಡೌನ್‌ನಿಂದಾಗಿ ದುಡಿಮೆಯಿಲ್ಲದೆ ಕಂಗಾಲಾಗಿವೆ.

ಪಟ್ಟಣದ ಎಪಿಎಂಸಿ ಹತ್ತಿರ ಗುಡಿಸಲು ಕಟ್ಟಿಕೊಂಡು ಕೂಲಿ ಹಾಗೂ ಕೊಡ ದುರಸ್ತಿ ಮಾಡುವ ಕಲಾಯಿಗಾರ ಕುಟುಂಗಳಿದ್ದು, ಕೆಲಸ ಸಿಗದೆ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ADVERTISEMENT

‘ಇಲ್ಲಿ ಕೆಲಸವೂ ಇಲ್ಲ. ಬೇರೆ ಗ್ರಾಮಗಳಿಗೆ ತೆರಳುವಂತಿಲ್ಲ. ಮಕ್ಕಳಿಗೆ ಊಟ ನೀಡಲು ಸಹ ಸಾಧ್ಯವಾಗುತ್ತಿಲ್ಲ. ನಮ್ಮ ಬದುಕು ತೊಂದರೆಯಲ್ಲಿದ್ದು ಸ್ಥಳಿಯ ಜನಪ್ರತಿನಿಧಿಗಳು ಹಾಗೂ ದಾನಿಗಳ ಸಹಾಯಕ್ಕಾಗಿ ಮುಖ ನೋಡುವಂತಾಗಿದೆ’ ಎಂದು ಸೈಫನ್ ಕಲೆಗಾರ ಹಾಗೂ ರಾಜೇಸಾಬ ಬೇಸರ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ತೊಲಗಿಸುವ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಆದರೆ ಕೆಲಸವಿಲ್ಲದೆ ನಮ್ಮಂಥ ಬಡುವರು ಹೇಗೆ ಜೀವನ ನಡೆಸಬೇಕು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ನಮ್ಮ ಹೊಟ್ಟೆಗೆ ಏನಾದರೂ ಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ’ ಎಂದು ರೇಣುಕಾ ಹಾಗೂ ರಾಜಮ್ಮ ಹೇಳಿದರು.

ಮೂರು ದಶಕಗಳಿಂದಲೂ ಈ ಕುಟುಂಬಗಳು ಇಲ್ಲಿಯೇ ದೇವಪುರ ಮನಗೂಳಿ ರಾಜ್ಯಹೆದ್ದಾರಿಯ ಪಕ್ಕದ ರಸ್ತೆಯಲ್ಲಿಯೇ ಶೆಡ್ ಹಾಗೂ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿವೆ. ಇವರಲ್ಲಿ ಕೆಲವು ಜನರ ಬಳಿ ಬಿಪಿಎಲ್‌ ಕಾರ್ಡ್‌ಗಳಿವೆ. ಉಳಿದವರ ಬಳಿ ಇಲ್ಲ. ಹೀಗಾಗಿ ಪಡಿತರವೂ ಇಲ್ಲದೆ ಹಸಿವಿನಿಂದ ಬಳಲುವ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ಹಲವಾರು ಸಂಘಟ ನೆಗಳು ಊಟ ನೀಡುವ ಮೂಲಕ ನೆರವಿಗೆ ನಿಂತಿದ್ದವು. ಈ ವರ್ಷ ಅದೂ ಇಲ್ಲ. ಸ್ಥಳೀಯ ಜನಪ್ರತಿನಿಧಿಗಳು, ದಾನಿಗಳು, ಸಂಘಟನೆಗಳು ನೆರವಿಗೆ ಬರಬೇಕು ಎಂದು ಇಲ್ಲಿನ ಕಾರ್ಮಿಕರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.