ADVERTISEMENT

ಸೈದಾಪುರ: ಸೋರುತಿಹುದು ಶಾಲೆ ಮಾಳಿಗೆ

ಸೈದಾಪುರ: ದುರಸ್ತಿ ಕಾಣದ ಶಿಥಿಲಗೊಂಡ ಸರ್ಕಾರಿ ಶಾಲಾ ಕಟ್ಟಡ

ಮಲ್ಲಿಕಾರ್ಜುನ ಅರಿಕೇರಕರ್
Published 4 ಡಿಸೆಂಬರ್ 2021, 19:30 IST
Last Updated 4 ಡಿಸೆಂಬರ್ 2021, 19:30 IST
ಸೈದಾಪುರ ಪಟ್ಟಣದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಹೊರ ನೋಟ
ಸೈದಾಪುರ ಪಟ್ಟಣದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಹೊರ ನೋಟ   

ಸೈದಾಪುರ: ಜೋರು ಮಳೆ ಬಂದರೆ ಸೋರುವ ಸೂರು, ಶಿಥಿಲಗೊಂಡಿರುವ ಕೊಠಡಿಯಲ್ಲಿ ಮಳೆ ನೀರು, ಮಳೆ ನಿಲ್ಲುವವರೆಗೆ ಮಕ್ಕಳು ಕೈಯಲ್ಲಿ ಪುಸ್ತಕದ ಚೀಲಗಳನ್ನು ಹಿಡಿದುಕೊಂಡು ಜೀವ ಭಯದಲ್ಲಿ ಪಾಠ ಕೇಳುವ ಮಕ್ಕಳು.

ಇದು ಪಟ್ಟಣದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಸ್ಥಿತಿಗತಿ. ಶಾಲೆಯ 15 ಕೋಣೆಗಳು ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದಿನ ನಿತ್ಯ ಭೀತಿ ಎದುರಿಸುವಂತಾಗಿದೆ.

1959ರಲ್ಲಿ ಸುಮಾರು 11,826 ಚದರ ಅಡಿ ವಿಸ್ತಾರದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 237 ವಿದ್ಯಾರ್ಥಿಗಳಿದ್ದಾರೆ. ಶಾಲಾ ಕಟ್ಟಡವು 62 ವರ್ಷಗಳ ಹಳೆಯದಾದ ಕಾರಣ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿದ್ದು, ಸ್ವಲ್ಪ ಮಳೆ ಬಂದರೂ ತರಗತಿ ಕೋಣೆಗಳು ಸೋರುತ್ತವೆ. ಗೋಡೆಗಳ ಮತ್ತು ಮೇಲ್ಚಾವಣಿಯ ಸಿಮೆಂಟ್ ಪದರು ಕೆಲವೊಮ್ಮೆ ಶಾಲಾವಧಿಯಲ್ಲಿಯೇ ಉದುರಿ ಬೀಳುತ್ತಿದೆ. ಅಲ್ಲದೇ ಕಬ್ಬಿಣದ ಕಂಬಿಗಳು ಹೊರಗಡೆ ಕಾಣುತ್ತಿವೆ. 15 ಕೋಣೆಗಳಲ್ಲಿ 4 ಕೋಣೆಗಳು ಸ್ವಲ್ಪ ಉತ್ತಮವಾಗಿವೆ. ಉಳಿದ 8 ಕೋಣೆಗಳು ಶಿಥಿಲಗೊಂಡಿವೆ. ಅದರಲ್ಲಿ 3 ಕೋಣೆಗಳು ಸಂಪೂರ್ಣ ಶಿಥಿಲಗೊಂಡು ತರಗತಿ ನಡೆಸಲು ಯೋಗ್ಯವಾಗಿರದೆ ಇರುವುದರಿಂದ ಅವುಗಳನ್ನು ಮುಚ್ಚಲಾಗಿದೆ.

ADVERTISEMENT

ಮಳೆಗಾಲದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ತರಗತಿಯಲ್ಲಿ ನೀರು ಸೋರುತ್ತದೆ. ಮಳೆ ನಿಲ್ಲುವವರೆಗೆ ಅಲ್ಪ-ಸ್ವಲ್ಪ ಸೋರದೆ ಇರುವ ಕೋಣೆಯ ಯಾವುದಾದರೊಂದು ಮೂಲೆಯಲ್ಲಿ ಮಕ್ಕಳು ಪುಸ್ತಕ, ಚೀಲಗಳನ್ನು ಹಿಡಿದು ನಿಲ್ಲುಬೇಕಾಗಿದೆ.

ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅದೇ ಶಾಲೆಯ ಪರಿಸ್ಥಿತಿ ಗಮನಿಸಿದರೆ ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿ ವರ್ಷವು ಶಾಲೆಯ ಮುಖ್ಯಶಿಕ್ಷಕರು ಈ ಸಮಸ್ಯೆಯನ್ನು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಮನವಿ ನೀಡಿದರೂ ಪ್ರಯೋಜನವಾಗಿಲ್ಲ.

ಶಾಲೆಯ ಜಾಗಕ್ಕೆ ಅಧಿಕೃತ ದಾಖಲೆಗಳಿಲ್ಲ: 1959 ರಲ್ಲಿ ಆರಂಭವಾದ ಶಾಲೆಗೆ ಗ್ರಾಮದ ಮುಖಂಡರು ಭೂದಾನ ಮಾಡಿದ್ದಾರೆ. ಆದರೆ, ಅದು ಸರ್ಕಾರದ ಆಸ್ತಿ ಎಂದು ದಾಖಲೆಗಳಲ್ಲಿ ಇನ್ನು ಸೇರ್ಪಡೆಗೊಂಡಿಲ್ಲ. ಇದರಿಂದ ಮರು ನಿರ್ಮಾಣಗೊಳಿಸಲು ಕಟ್ಟಡವನ್ನು ನೆಲಸಮಗೊಳಿಸಿದರೆ ಜಾಗದ ಮೂಲದವರು ಅಡೆತಡೆಗೊಳಿಸಿ ಸಮಸ್ಯೆ ಉಂಟಾಗಬಹುದು ಎಂಬ ಭಯದಲ್ಲಿ ಯಾವೊಬ್ಬ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಅಭಿಪ್ರಾಯವಾಗಿದೆ.

ಆಟದ ಮೈದಾನವಿಲ್ಲ: ಈ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದರೂ ಮಕ್ಕಳಿಗೆ ಆಟವಾಡಲು ಆಟದ ಮೈದಾನವಿಲ್ಲ. ಇದೇ ಶಾಲೆಯಲ್ಲಿ ಹಿಂದೆ ಅಕ್ಕ-ಪಕ್ಕದ ಖಾಲಿ ಜಾಗದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದರು.

*ಶಿಥಿಲಗೊಂಡ ಶಾಲೆಯ ಕಟ್ಟಡ ನೆಲಸಮಗೊಳಿಸಿ ಪ್ರಸ್ತುತ ಇರುವ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಬೇಕು. ಇದಕ್ಕೆ ಗ್ರಾಮದ ಮುಖಂಡರು, ಜನಪ್ರತಿನಿಧಿಗಳು ಸಹಕಾರ ನೀಡುವುದರೊಂದಿಗೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೂಕೂಲ ಮಾಡಿಕೊಡಬೇಕು
– ಬಸವರಾಜ ನಾಯಕ ಸೈದಾಪುರ, ಎಸ್‌ಡಿಎಂಸಿ ಅಧ್ಯಕ್ಷ

*ಈ ಶಾಲೆಯ ಸಮಸ್ಯೆ ಕುರಿತು ಕ್ಷೇತ್ರ ಶಿಕ್ಷಾಣಾಧಿಕಾರಿಗಳೊಂದಿಗೆ ಮತ್ತು ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಲು ಪ್ರಯತ್ನಿಸುತ್ತೇನೆ
– ಶಾಂತಗೌಡ ಪಾಟೀಲ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ ಯಾದಗಿರಿ

*ಈ ಭಾಗದಲ್ಲಿ ಮಾದರಿ ಶಾಲೆ ಎಂಬ ಖ್ಯಾತಿ ಪಡೆದುಕೊಂಡ ಶಾಲೆ ಶಿಥಿಲಾವಸ್ಥೆ ತಲುಪಿರುವುದು ರ್ದುದೈವದ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾಮದ ಮುಖಂಡರು ನೂತನ ಕಟ್ಟಡ ನಿರ್ಮಿಸಲು ಸಹಾಯ ಸಹಕಾರ ನೀಡಬೇಕು
– ಶಿವರಾಜಪ್ಪ, ಮುಖ್ಯಶಿಕ್ಷಕ ಸೈದಾಪುರ

*ಸ್ವಲ್ಪ ಮಳೆ ಬಂದರೂ ತರಗತಿ ಕೋಣೆಗಳು ಸೋರುತ್ತವೆ. ಅಲ್ಲದೇ ಮೇಲ್ಛಾವಣಿಯ ಸಿಮೆಂಟ್ ಆಗಾಗ ಉದುರಿಕೊಂಡು ಬೀಳುತ್ತದೆ. ಇದರಿಂದ ಕೆಲವೊಮ್ಮೆ ನಮಗೆ ಭಯವಾಗುತ್ತದೆ
– ರೂಪಾ ಸೈದಾಪುರ, 7ನೇ ತರಗತಿ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.