ADVERTISEMENT

ಕಾನೂನು ಸೇವೆಗಳು ಅರ್ಹರಿಗೆ ತಲುಪಿಸಿ: ನ್ಯಾಯಮೂರ್ತಿ ಎಚ್.ಶಶಿಧರ್ ಶೆಟ್ಟಿ

ಕಾನೂನು ಸೇವಾ ಪ್ರಾಧಿಕಾರದ ಅರೆಕಾಲಿಕ ಸ್ವಯಂ ಸೇವಕರ ನೇಮಕ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:56 IST
Last Updated 24 ಸೆಪ್ಟೆಂಬರ್ 2025, 2:56 IST
   

ಯಾದಗಿರಿ: ‘ಗ್ರಾಮೀಣ ಭಾಗದಲ್ಲಿನ ಶೋಷಿತ ಹಾಗೂ ತುಳಿತಕ್ಕೊಳಗಾದ ಜನರಿಗೆ ಕಾನೂನು ಸೇವಾ ಪ್ರಾಧಿಕಾರದ ಸೇವೆಗಳನ್ನು, ಕಾನೂನಿನ ಬಗೆಗಿನ ಮಾಹಿತಿಯನ್ನು ಅರ್ಪಣಾ ಮನೋಭಾವದಿಂದ ತಲುಪಿಸಲು ಸಿದ್ಧರಿರುವ ಅರೆಕಾಲಿಕ ಸ್ವಯಂ ಸೇವಕರು ಮುಂದೆ ಬರಬೇಕು’ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ನ್ಯಾಯಮೂರ್ತಿ ಎಚ್.ಶಶಿಧರ್ ಶೆಟ್ಟಿ ಹೇಳಿದರು. 

ಬೆಂಗಳೂರಿನಿಂದ ಮಂಗಳವಾರ ಎಲ್ಲ ಜಿಲ್ಲಾ ಕೇಂದ್ರಗಳ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನಡೆಸಿದ ವಿಡಿಯೊ ಕಾನ್ಫರೆನ್ಸ್‌ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿನ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲು ಅರೆಕಾಲಿಕ ಸ್ವಯಂ ಸೇವಕರುಗಳನ್ನು ಭರ್ತಿ ಮಾಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸ್ವಪ್ರೇರಿತ ಕಾನೂನು ಸಹಾಯಕರು ಯಾವುದೇ ಶುಲ್ಕ, ಸಂಭಾವನೆ ಅಥವಾ ಸಂಬಳವನ್ನು ನಿರೀಕ್ಷಿಸದೆ ತಮ್ಮ ಸುತ್ತಲಿನ ಪ್ರದೇಶಗಳಲ್ಲಿ ಕಾನೂನು ಸಂಬಂಧಿತ ಜನರ ಸೇವೆಗಳನ್ನು ಮಾಡಲು ಸಜ್ಜಾಗಿರಬೇಕು’ ಎಂದರು.

ADVERTISEMENT

ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಮಾತನಾಡಿ, ‘ಆಯ್ಕೆಯಾಗುವದ ಅಭ್ಯರ್ಥಿಗಳು ಪ್ರಾಧಿಕಾರ ವಹಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಅನ್ಯಾಯಕ್ಕೆ ಒಳಗಾದವರಿಗೆ ನೆರವಾಗಬೇಕು. ಕೆಲಸ ಮಾಡಿದ ದಿನದ ಗೌರವ ಧನವನ್ನು ನೀಡಲಾಗುವುದು. ತಮ್ಮ ವ್ಯಾಪ್ತಿಯಲ್ಲಿನ ನಾನಾ ಬಗೆಯ ಪ್ರಕರಣಗಳು ಸೇರಿದಂತೆ ಪ್ರಾಧಿಕಾರ ವಹಿಸುವ ಕೆಲಸವನ್ನು ನಿರ್ವಹಿಸಬೇಕು’ ಎಂದರು.

ನೇಮಕಾತಿಗೆ ಅರ್ಜಿ ಆಹ್ವಾನ

ಯಾದಗಿರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶಹಾಪುರ ಮತ್ತು ಸುರಪುರದಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾನೂನು ನೆರವು ನೀಡಲು ಬದ್ಧತೆಯಿಂದ ಕೆಲಸ ಮಾಡುವ ಆಸಕ್ತರು https:districts. ecourts.gov.in/yadgir ವೆಬ್‌ಸೈಟ್‌ನಲ್ಲಿ ಸೆಪ್ಟೆಂಬರ್ 30ರ ಒಳಗಾಗಿ ಅರ್ಜಿ ಸಲ್ಲಿಸಬಹುದು.

ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾ ನ್ಯಾಯಾಲಯ ಆವರಣ ಶಹಾಪುರ ಮತ್ತು ಸುರಪುರ ಕಚೇರಿಗಳಲ್ಲಿ ಸೇವೆ ಸಲ್ಲಿಸಬೇಕು. ಆಸಕ್ತರು ತಮ್ಮ ಹೆಸರು ಪೂರ್ಣ ವಿಳಾಸ ದೂರವಾಣಿ ಸಂಖ್ಯೆ ಇ-ಮೇಲ್ ವಿದ್ಯಾರ್ಹತೆ ಜಾತಿ ಅನುಭವದ ವಿವರಗಳೊಂದಿಗೆ ಒಪ್ಪಿಗೆ ಪತ್ರದ ಜೊತೆಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಳಿದ್ದಾರೆ. ಮಾಹಿತಿಗೆ ದೂರವಾಣಿ 08473 253243 ಮೊಬೈಲ್ ಸಂಖ್ಯೆ 90356 86662 (ಯಾದಗಿರಿ) 95914 64967 (ಸುರಪುರ) 88610 94962ಗೆ (ಶಹಾಪುರ) ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.