ADVERTISEMENT

ಅಧಿಕಾರಿಗಳ ನಿರ್ಲಕ್ಷಕ್ಕೆ ಶಾಸಕರ ಗರಂ

ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಶಾಸಕರ ತುರ್ತು ಸಭೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 10:18 IST
Last Updated 16 ಆಗಸ್ಟ್ 2019, 10:18 IST
ಯಾದಗಿರಿಯ ಶಾಸಕರ ಕಚೇರಿಯಲ್ಲಿ ವೆಂಕಟರೆಡ್ಡಿ ಮುದ್ನಾಳ ಕೆಬಿಜೆಎನ್‌ಎಲ್ ಅಧಿಕಾರಿಗಳ ಸಭೆ ನಡೆಸಿದರು
ಯಾದಗಿರಿಯ ಶಾಸಕರ ಕಚೇರಿಯಲ್ಲಿ ವೆಂಕಟರೆಡ್ಡಿ ಮುದ್ನಾಳ ಕೆಬಿಜೆಎನ್‌ಎಲ್ ಅಧಿಕಾರಿಗಳ ಸಭೆ ನಡೆಸಿದರು   

ಯಾದಗಿರಿ: ಗುಲಸರಂ ಬ್ಯಾರೇಜ್‍ಗಿಂತ ಜೋಳದಡಗಿ ಬ್ಯಾರೇಜ್‍ನ ನೀರಿನ ಸಾಮರ್ಥ್ಯ ಹೆಚ್ಚಿದೆ. 0.916 ಸಾಮರ್ಥ್ಯ ಹೊಂದಿರುವ ಈ ಬ್ಯಾರೇಜ್‍ನ ಗೇಟ್‍ಗಳನ್ನು ಎತ್ತದ ಪರಿಣಾಮ ಜೋಳದಡಗಿ ಬ್ಯಾರೇಜ್ ವ್ಯಾಪ್ತಿಯಲ್ಲಿ ಅನಾಹುತ ಸಂಭವಿಸಿದೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಸೋಮವಾರ ನಗರದ ಶಾಸಕರ ಕಚೇರಿಯಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ನಡೆಸಿದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಮಹಾರಾಷ್ಟ್ರದ ಉಜನಿ ಮತ್ತು ವೀರ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಲಾಗುವುದು ಎಂದು ಸೂಚನೆ ಬಂದರೂ ಜೋಳದಡಗಿ ಬ್ಯಾರೇಜ್‍ ಗೇಟ್‍ಗಳನ್ನು ತೆರೆಯದೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

ADVERTISEMENT

ತಪ್ಪಾದ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಂಡರೆ ಯಾವುದೇ ಪ್ರಯೋಜವಾಗುವುದಿಲ್ಲ. ಜೋಳದಡಗಿ ಬ್ಯಾರೇಜ್ ಭರ್ತಿಯಾದ ಕಾರಣ ಕೋಟ್ಯಂತರ ರೂಪಾಯಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿದ ನಂತರವಷ್ಟೇ ಸಮಗ್ರ ಮಾಹಿತಿ ಸಿಗಲಿದೆ ಎಂದರು.

ಕೆಬಿಜೆಎನ್‌ಎಲ್ ಎಇಇ ಬಸವಣ್ಣಪ್ಪ ಮಾತನಾಡಿ, ಬ್ಯಾರೇಜ್‍ನಲ್ಲಿ ಅಳವಡಿಸಲಾದ ಗೇಟ್‍ಗಳು ತುಕ್ಕು ಹಿಡಿದಿದ್ದರಿಂದ ತೆಗೆಯಲು ತೊಂದರೆಯಾಗಿದೆ. ಶೇಕಡ 40 ರಷ್ಟು ಗೇಟ್‍ಗಳನ್ನು ತೆಗೆಯಲಾಗಿತ್ತು. ಉಳಿದ ಗೇಟ್‍ಗಳು ತೆಗೆಯುವ ಕಾರ್ಯ ಮುಂದುವರೆದಿತ್ತು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದ ಪರಿಣಾಮ ಉಳಿದ ಗೇಟ್‍ಗಳು ತೆಗೆಯಲಾಗಲಿಲ್ಲ ಎಂದು ತಿಳಿಸಿದರು.

ಎಲ್ಲ ಗೇಟ್‍ಗಳನ್ನು ತೆರೆಯದಿದ್ದರೆ ಹೂಳು ಕೂಡ ನದಿಗೆ ಹರಿಯುತ್ತಿತ್ತು. ಈ ರೀತಿ ಸಮಸ್ಯೆಯಾಗುತ್ತದೆ ಎಂದು ನಿಮಗೆ ಗೊತ್ತಿರಬೇಕಲ್ಲವೆ? ಈಗಾಗಿರುವ ತಪ್ಪಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಧಿಕಾರಿಗಳಾದ ಎ.ಬಿ.ರಡ್ಡಿ, ಪ್ರವೀಣಕುಮಾರ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಲ್ಲನಗೌಡ ಪಾಟೀಲ ಹತ್ತಿಕುಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.