ADVERTISEMENT

ಸಿದ್ದಾಪುರ, ಮಾಚಗುಂಡಾಳದಲ್ಲಿ ಚಿರತೆ ಭೀತಿ: ಗ್ರಾಮಸ್ಥರಲ್ಲಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 7:20 IST
Last Updated 12 ಮಾರ್ಚ್ 2024, 7:20 IST
ಸುರಪುರದ ದೇವರಗೋನಾಲ ಗ್ರಾಮದಲ್ಲಿ ಚಿರತೆ ಕಂಡು ಬಂದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಕರ ಪತ್ರ ಹಂಚಿದರು
ಸುರಪುರದ ದೇವರಗೋನಾಲ ಗ್ರಾಮದಲ್ಲಿ ಚಿರತೆ ಕಂಡು ಬಂದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಕರ ಪತ್ರ ಹಂಚಿದರು   

ಸುರಪುರ: ಕಳೆದ ನಾಲ್ಕೈದು ದಿನಗಳ ಹಿಂದೆ ತಾಲ್ಲೂಕಿನ ಸಿದ್ದಾಪುರ ಹಾಗೂ ಮಾಚಗುಂಡಾಳ ಪ್ರದೇಶದಲ್ಲಿ ಕಾಣಿಸಿಕೊಂಡು ಭೀತಿ ಸೃಷ್ಟಿಸಿರುವ ಚಿರತೆಯ ಶೋಧ ಕಾರ್ಯ ಸೋಮವಾರವೂ ಮುಂದುವರೆದಿದ್ದು, ಇದುವರೆಗೂ ಚಿರತೆಯ ಯಾವ ಕುರುಹುಗಳು ಕಂಡು ಬಂದಿಲ್ಲ. 

ಚಿರತೆ ನಾಯಿ ತಿಂದು ಹಾಕಿದ ಮಾಚಗುಂಡಾಳ ಪ್ರದೇಶದಲ್ಲಿ ಬೋನ್ ಇಡಲಾಗಿದೆ. ಕ್ಯಾಮೆರಾ ಟ್ರಾಪ್ ಅಳವಡಿಸಲಾಗಿದೆ. ಅರಣ್ಯ ಇಲಾಖೆ ಹಗಲೂ ರಾತ್ರಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಸೋಮವಾರ ಮತ್ತೆ ನಾಲ್ಕು ಕ್ಯಾಮೆರಾಗಳನ್ನು ತರಿಸಲಾಗಿದ್ದು ಅವುಗಳನ್ನು ಅಲ್ಲಲ್ಲಿ ಅಳವಡಿಸುವ ಕಾರ್ಯ ನಡೆದಿದೆ. ಜಿಲ್ಲಾಧಿಕಾರಿ ಡಾ. ಸುಶೀಲ ಅವರ ಸೂಚನೆಯ ಮೇರೆಗೆ ತಹಶೀಲ್ದಾರ್ ಕೆ. ವಿಜಯಕುಮಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ADVERTISEMENT

ಅರಣ್ಯ ಇಲಾಖೆ ಚಿರತೆ ಕಂಡು ಬಂದಾಗ ಪಾಲಿಸಬೇಕಾದ ಅಂಶಗಳ ಕುರಿತು ದೇವರಗೋನಾಲ, ಸಿದ್ದಾಪುರ, ಬೊಮ್ಮನಳ್ಳಿ, ಜಾಲಿಬೆಂಚಿ ಇತರ ಗ್ರಾಮಗಳಲ್ಲಿ ಕರಪತ್ರ ಹಂಚಿದರು.

ವಲಯ ಅರಣ್ಯಾಧಿಕಾರಿ ಬುರಾನುದ್ದೀನ್ ಜನರಲ್ಲಿ ಜಾಗೃತಿ ಮೂಡಿಸಿ, ‘ಚಿರತೆ ಕಂಡು ಬಂದಲ್ಲಿ ತಕ್ಷಣ ಸಹಾಯವಾಣಿ 94819 93303 ಗೆ ಕರೆ ಮಾಡಿ, ಸ್ಥಳದ ಲೊಕೇಶನ್ ಕಳುಹಿಸಿ. ನಸುಕು ಮತ್ತು ರಾತ್ರಿ ಸಮಯದಲ್ಲಿ ಗ್ರಾಮಸ್ಥರು ಎಚ್ಚರದಿಂದ ಇರಬೇಕು’ ಎಂದು ತಿಳಿಸಿದರು.

‘ಮನೆಗಳ ಸುತ್ತಮುತ್ತ ಬೆಳೆದಿರುವ ಪೊದೆಗಳನ್ನು ತೆಗೆಯಬೇಕು. ಸಂಜೆಯ ನಂತರ ಸಾಕು ಪ್ರಾಣಿ, ದನಕರುಗಳನ್ನು ಒಳಗೆ ಕಟ್ಟಬೇಕು. ರೈತರು ಕೈಯಲ್ಲಿ ಕುಡುಗೋಲಿ ಅಥವಾ ದೊಣ್ಣೆ ಹಿಡಿದು ತಿರುಗಾಡಬೇಕು’ ಎಂದು ಸಲಹೆ ನೀಡಿದರು.

‘ಮಕ್ಕಳು ಒಬ್ಬಂಟಿಯಾಗಿ ಓಡಾಡಲು ಬಿಡಬಾರದು. ಬಯಲು ಬಹಿರ್ದೆಸೆಗೆ ಹೋಗಬಾರದು. ಚಿರತೆ ಕಂಡುಬಂದಲ್ಲಿ ವಿಡಿಯೊ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡಬಾರದು. ಅನಾವಶ್ಯಕವಾಗಿ ಸ್ಪೋಟಕ ವಸ್ತು ಸಿಡಿಸಬಾರದು’ ಎಂದು ತಿಳಿಸಿದರು.

ದನ ಕರು ಮೇಯಿಸುವಾಗಿ ಹಠಾತ್ತಾಗಿ ಚಿರತೆ ದಾಳಿ ಮಾಡಿದಲ್ಲಿ ಪ್ರತಿರೋಧ ಮಾಡದೆ ದೂರ ಸರಿಯಬೇಕು. ಜಾನುವಾರಗಳನ್ನು ಚಿರತೆ ಕೊಂದಲ್ಲಿ ಕಳೇಬರವನ್ನು ಮುಟ್ಟಬಾರದು. ಚಿತ್ರದಲ್ಲಿ ತೋರಿಸಿದಂತೆ ಚಿರತೆ ತಿರುಗಾಡಿದ ಸ್ಥಳದಲ್ಲಿ ಅದರ ಹೆಜ್ಜೆ ಗುರುತು ಮೂಡುತ್ತವೆ. ಅದನ್ನು ಅಳಿಸದೆ ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು. ಚಿರತೆ ಕುರಿತಂತೆ ಯಾವುದೆ ಸುಳ್ಳು ಸುದ್ದಿ, ವದಂತಿ ಹರಡಬೇಡಿ’ ಎಂದು ಮನವಿ ಮಾಡಿದರು.

ಉಪ ವಲಯ ಅರಣ್ಯಾಧಿಕಾರಿ ಶರಣಪ್ಪ ಕುಂಬಾರ, ಅರಣ್ಯ ಗಸ್ತುದಾರರಾದ ಮಲ್ಲಪ್ಪ ಚೌಧರಿ, ಬಸವರಾಜ ನಾಯಕ, ದುರ್ಗಣ್ಣ, ಸಿದ್ದಣ್ಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.