
ಸುರಪುರ: ‘ಕುಷ್ಠ ರೋಗವನ್ನು ಗುಣಪಡಿಸಬಹುದಾಗಿದೆ ಮತ್ತು ಆರಂಭಿಕ ಹಂತಗಳ ಚಿಕಿತ್ಸೆಯಿಂದ ಅಂಗವಿಕಲತೆಯನ್ನು ತಡೆಯಬಹುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸ್ಪರ್ಶ ಕುಷ್ಠ ಅರಿವು ಕಾರ್ಯಕ್ರಮದ ನಿಮಿತ್ತವಾಗಿ ಪೋಸ್ಟರ್ ಬಿಡುಗಡೆ ಮಾಡಿ, ಪ್ರತಿಜ್ಞೆ ಬೋಧಿಸಿ ಅವರು ಮಾತನಾಡಿದರು.
‘ಕುಷ್ಠ ರೋಗವು ಮಾನವ ಕುಲಕ್ಕೆ ತಿಳಿದಿರುವ ಅತ್ಯಂತ ಹಳೆಯ ಕಾಯಿಲೆಯಾಗಿದೆ. ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ’ ಎಂದು ಹೇಳಿದರು.
‘ಚರ್ಮದ ಮೇಲೆ ಗಂಟುಗಳು, ಕಣ್ಣಿನ ರೆಪ್ಪೆಗಳು ಮುಚ್ಚುವಲ್ಲಿ ತೊಂದರೆ, ಕೈ-ಕಾಲುಗಳಲ್ಲಿ ಬಹುದಿನದ ಗಾಯ, ಕೈ-ಕಾಲುಗಳಲ್ಲಿ ಬೆರಳು ಮಡಚಿ ಕೊಂಡಿರುವುದು, ನಡೆಯುವಾಗ ಕಾಲು ಎಳೆಯುವುದು, ಕಾ-ಕಾಲು ಜುಮ್ಮು ಎನಿಸುವಿಕೆ, ಅಂಗೈ ಅಥವಾ ಬಲಹೀನತೆ ಇವುಗಳೆಲ್ಲವೂ ಕುಷ್ಠ ರೋಗದ ಲಕ್ಷಣಗಳಾಗಿವೆ’ ಎಂದು ಮಾಹಿತಿ ನೀಡಿದರು.
‘ಪ್ರತಿ ವರ್ಷ ಜನವರಿ 30 ರಂದು ಕುಷ್ಠ ರೋಗ ನಿರ್ಮೂಲನಾ ದಿನವನ್ನು ವಿಶಿಷ್ಟ ಧ್ಯೆಯದೊಂದಿಗೆ ಆಚರಿಸಲಾಗುತ್ತದೆ. ನಿಜವಾದ ಸವಾಲು, ಕಳಂಕ 2026 ರ ಕುಷ್ಠ ರೋಗ ದಿನಾಚರಣೆಯ ಘೋಷ ವಾಕ್ಯವಾಗಿದೆ’ ಎಂದರು.
‘ಕುಷ್ಠ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಲು ಪ್ರೇರೇಪಿಸುವುದು. ಕಾಯಿಲೆಯ ಕುರಿತಾದ ಭಯ ಮತ್ತು ತಾರತಮ್ಯವನ್ನು ತೊಡೆದುಹಾಕುವುದು. ಕುಷ್ಠರೋಗ ಬಾಧಿತರು ಸಮಾಜದಲ್ಲಿ ಗೌರವದಿಂದ ಬದುಕಲು ಸಹಕರಿಸುವುದು ಪ್ರಮುಖ ಉದ್ದೇಶವಾಗಿದೆ’ ಎಂದರು.
‘ಕುಷ್ಠ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.