ADVERTISEMENT

ಯಾದಗಿರಿ | 'ಜಿಲ್ಲೆಯಾದ್ಯಂತ ದುಡಿಯೋಣು ಬಾ ಅಭಿಯಾನ'

ನರೇಗಾ ಯೋಜನೆಯಡಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:38 IST
Last Updated 13 ಮೇ 2025, 15:38 IST
ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ದುಡಿಯೋಣು ಬಾ ಅಭಿಯಾನ ನಡೆಯಿತು
ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ದುಡಿಯೋಣು ಬಾ ಅಭಿಯಾನ ನಡೆಯಿತು   

ಯಾದಗಿರಿ: ಕೂಲಿಕಾರ್ಮಿಕರು ನರೇಗಾ ಯೋಜನೆಯ ಕೆಲಸದಲ್ಲಿ ಭಾಗವಹಿಸಲು ಪ್ರಚಾರ ಕೈಗೊಂಡಿದ್ದು, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಶೇಕಡ 50 ರಷ್ಟು ರಿಯಾಯಿತಿ ಇದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ ಹೇಳಿದರು.

ತಾಲ್ಲೂಕಿನ ರಾಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ದುಡಿಯೋಣು ಬಾ ಅಭಿಯಾನದಲ್ಲಿ ಭಾರತ ಮತ್ತು ಪಾಕಿಸ್ತಾನ ಆಪರೇಷನ್ ಸಿಂಧೂರ ಯುದ್ದದಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಪ ನಮನ ಹಾಗೂ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ಜಿಲ್ಲೆಯಾದ್ಯಂತ ದುಡಿಯೋಣು ಬಾ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರಲ್ಲಿ ನರೇಗಾ ಯೋಜನೆಯ ಅರಿವು ಮೂಡಿಸಲಾಗುವುದು ಎಂದರು.

ADVERTISEMENT

ನರೇಗಾ ಯೋಜನೆಯಡಿಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಕ್ಷೇತ್ರ ಬದು, ಕೃಷಿ ಹೊಂಡ, ಮತ್ತು ತೋಟಗಾರಿಕೆ ಇಲಾಖೆಯಿಂದ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಂಡು ತಮ್ಮ ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದ ನರೇಗಾ ಕೂಲಿಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹಾದೇವ ಬಬಲಗಿ ಸಲಹೆ ನೀಡಿದರು.

ಬೇಸಿಗೆ ಕಾಲದಲ್ಲಿ ಕೆಲಸವಿಲ್ಲದೆ ಪ್ರಯುಕ್ತ ಬಡ ಕೂಲಿ ಕಾರ್ಮಿಕರು ಮಹಾ ನಗರಗಳಿಗೆ ವಲಸೆ ಹೋಗದಂತೆ ತಡೆಯಲು ದುಡಿಯೋಣು ಬಾ ಎಂಬ ಅಭಿಯಾನದ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದ್ದು, ಪ್ರತಿ ಕೂಲಿಕಾರ್ಮಿಕರಿಗೆ ಹೆಣ್ಣು ಮತ್ತು ಗಂಡು ಸಮನಾಗಿ ₹370 ನರೇಗಾ ಯೋಜನೆಯಡಿಯಲ್ಲಿ ಕೂಲಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆಯಲು ಸಾರ್ವಜನಿಕರು ನಮೂನೆ-6 ರಲ್ಲಿ ಕೆಲಸಕ್ಕಾಗಿ ಬೇಡಿಕೆ ಅರ್ಜಿಯನ್ನು ಸಲ್ಲಿಸಿ ಕೂಲಿ ಕೆಲಸ ಪಡೆಯತಕ್ಕದ್ದು. ಅರ್ಜಿ ಸಲ್ಲಿಸಿದ 15 ದಿನದೊಳಗೆ ಕೆಲಸ ನೀಡಬೇಕು. ಇಲ್ಲದಿದ್ದಲ್ಲಿ ನಿರುದ್ಯೋಗ ಭತ್ಯೆಗೆ ಅರ್ಹರಾಗುತ್ತಾರೆಂದು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಿದರು. ಕೂಲಿಕಾರ್ಮಿಕರಿಗೆ ಏನಾದರು ಸಮಸ್ಯೆ ಅನಿಸಿದಾಗ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆ ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿಯಲ್ಲಿ 100 ದಿನ ಕೂಲಿ ಕೆಲಸ ಮಾಡಿದ ಕುಟುಂಬಗಳಿಗೆ ಅಧಿಕಾರಿಗಳು ಗೌರವಿಸಿ ಸನ್ಮಾನಿಸಿದರು.

ಈ ವೇಳೆ ಯಾದಗಿರಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಲ್ಲಣ್ಣ ಸಂಕನೂರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆನಂದಮ್ಮ ಮಲ್ಲಿಕಾರ್ಜನ ಜಲ್ಲಪ್ಪನೋರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಣುಕಮ್ಮ ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು, ಕೂಲಿಕಾರ್ಮಿಕರು, ಐಇಸಿ ಭೀಮರೆಡ್ಡಿ ವಡೀಗೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.