ಶಹಾಪುರ: ‘ಪತಿಯ ಮನೆಯ ಕುಟುಂಬದ ಸದಸ್ಯರು ಹಿಂಸೆ ನೀಡಿದ್ದಾರೆ ಹಾಗೂ ನನ್ನ ಹಾಗೂ ಮಕ್ಕಳಿಗೆ ಜೀವನಾಂಶ ನೀಡಬೇಕು’ ಎಂದು ಪತಿಯ ವಿರುದ್ಧ ಅರ್ಜಿ ಸಲ್ಲಿಸಿದ್ದ ಮಹಿಳೆ ಹಾಗೂ ಅವರ ಪತಿಯಲ್ಲಿ ನ್ಯಾಯಾಧೀಶರು ವಿಶ್ವಾಸ ಮೂಡಿಸಿ ಮತ್ತೆ ದಾಂಪತ್ಯಕ್ಕೆ ಅಣಿ ಮಾಡಿದರು.
ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳಾ ಸಂರಕ್ಷಣಾ ಅಧಿನಿಯಮ-2005 ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಸುಖಾಂತ್ಯಗೊಳಿಸಿದರು.
ಮೂರು ವರ್ಷದ ಹಿಂದೆ ಚಿತ್ತಾಪುರ ತಾಲ್ಲೂಕಿನ ಯಾಗಾಪುರ ಫತ್ತು ನಾಯಕ ತಾಂಡಾದ ಗುರುನಾಥ ಚವ್ಹಾಣ ಜತೆ ಶಹಾಪುರ ತಾಲ್ಲೂಕಿನ ಉಳ್ಳೆಸೂಗೂರ ತಾಂಡಾದ ಅನ್ನುಬಾಯಿ ಮದುವೆ ಆಗಿತ್ತು. ಇಬ್ಬರು ಮಕ್ಕಳು ಇದ್ದಾರೆ. ಪತಿಯ ಮನೆಯ ಕುಟುಂಬದ ಸದಸ್ಯರು ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಪತಿಯ ಜೊತೆ ಜೀವನ ಮುಂದುವರಿಸಲು ಸಾಧ್ಯವಿಲ್ಲ ಎಂದು ಅನ್ನುಬಾಯಿ 2022ರಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಆಗ ರಾಜಿ ಸಂಧಾನ ನಡೆದಾಗ ₹9 ಲಕ್ಷ ಪರಿಹಾರ ನೀಡಿದರೆ ಇಬ್ಬರು ಪರಸ್ಪರ ವಿಚ್ಛೇದನ ಮಾಡಿಕೊಳ್ಳಲು ಸಹಮತ ನೀಡಿದ್ದರು.
ಈಗ ನ್ಯಾಯಾಧೀಶರು ಬುದ್ಧಿಮಾತು ಹೇಳಿ, ಕಳೆದುಹೋದ ವಿಷಮ ಘಳಿಗೆಗಳನ್ನು ಮರೆತು ಸುಖ ಸಂಸಾರ ನಡೆಸುವಂತೆ ಸೂಚಿಸಿದಾಗ ₹9ಲಕ್ಷ ಜೀವನಾಂಶ ಹಣ ನಿರಾಕರಿಸಿ ಇಬ್ಬರು ಪರಸ್ಪರ ಒಂದಾಗಿ ಬಾಳುವುದಾಗಿ ಒಪ್ಪಿಕೊಂಡರು.
ಅರ್ಜಿದಾರರ ಪರ ವಕೀಲೆ ಸತ್ಯಮ್ಮ ಹೊಸಮನಿ ಹಾಗೂ ಎದುರುದಾರ ಪರ ಸಿ.ಟಿ.ಜಾಧವ ಅವರು ದಂಪತಿ ಒಂದಾಗಲು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
ಶಹಾಪುರ ಲೋಕ ಅದಾಲತ್: 2196 ಪ್ರಕರಣ ಇತ್ಯರ್ಥ
ಶಹಾಪುರ: ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಶನಿವಾರ ಶಹಾಪುರ ಮೂರು ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ಪರಸ್ಪರ ರಾಜಿ ಸಂಧಾನದ ಮೂಲಕ 2196 ಪ್ರಕರಣ ಹಾಗೂ ₹1.7ಕೋಟಿ ಹಣ ಸಂದಾಯದ ಬಗ್ಗೆ ಇತ್ಯರ್ಥಪಡಿಸಿದೆ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ನ್ಯಾಯಾಧೀಶರಾದ ಸಿದ್ದರಾಮ ಟಿ.ಪಿ ತಿಳಿಸಿದ್ದಾರೆ.
ಅದರಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಿವಿಧ ಸ್ವರೂಪದ 357 ಪ್ರಕರಣ ಹಾಗೂ ₹73.1 ಲಕ್ಷ ಹಣ ಸಂದಾಯದ ಮೂಲಕ ಬಗೆಹರಿಸಿದೆ. ಅದರಂತೆ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ ಅವರು 1032 ಪ್ರಕರಣ ಹಾಗೂ ₹32.6 ಲಕ್ಷ ಹಣ ಸಂದಾಯ ಮಾಡಿಸಿದ್ದಾರೆ. ಅದರಂತೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಅವರು 807 ಪ್ರಕರಣ ಹಾಗೂ ₹1.82ಲಕ್ಷ ಹಣ ಸಂದಾಯ ಮಾಡಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.