ಸುರಪುರ: ‘ಜುಲೈ 12ರಂದು ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ಗಿಗೆ ಬ್ಯಾಂಕ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು. ಇನ್ಶೂರನ್ಸ್ ಕಂಪನಿಯ ವ್ಯವಸ್ಥಾಪಕರು, ಕೆಎಸ್‍ಆರ್‌ಟಿಸಿ ಅಧಿಕಾರಿಗಳು, ವಕೀಲರು, ಅನುಷ್ಠಾನ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳುಸಿದ್ಧರಾಧ್ಯ ಹೇಳಿದರು.
ನ್ಯಾಯಾಲಯದ ಪ್ರಾಂಗಣದಲ್ಲಿ ಶುಕ್ರವಾರ ನಡೆದ ಲೋಕ್ ಅದಾಲತ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಲೋಕಅದಾಲತ್ ಕುರಿತು ಹೆಚ್ಚು ಪ್ರಚಾರದ ಅಗತ್ಯವಿದೆ. ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ಅಟೋ, ಟಂಟಂಗಳ ಮೂಲಕ ಹೆಚ್ಚಿನ ಪ್ರಚಾರ ಮಾಡಿಸಬೇಕು. ಗ್ರಾಮೀಣ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಮಾತನಾಡಿ, ‘ವ್ಯಾಜ್ಯ ಪೂರ್ವ ಮತ್ತು ರಾಜಿಯಾಗಬಲ್ಲಂತಹ ಪ್ರಕರಣಗಳನ್ನು ಅದಾಲತ್‍ನಲ್ಲಿ ಕೈಗೆತ್ತಿಕೊಳ್ಳಲಾಗುವುದು. ಕಕ್ಷಿದಾರರಿಗೆ ರಾಜೀ ಸಂಧಾನಕ್ಕೆ ಒಪ್ಪಿಸಿ, ನ್ಯಾಯಾಲಯಕ್ಕೆ ಕರೆ ತರಬೇಕು’ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರೆಪ್ಪ ಮಾತನಾಡಿ, ‘ರಾಜೀ ಸಂಧಾನದಿಂದ ಯಾರಿಗೂ ಅನ್ಯಾಯ ಆಗಲ್ಲ. ಇಬ್ಬರಿಗೂ ನ್ಯಾಯ ಸರಿಯಾದ ನ್ಯಾಯ ಲಭಿಸುತ್ತದೆ. ಅನಾವಶ್ಯ ಕೋರ್ಟ್‍ಗೆ ಅಲೆಯುವುದು ತಪ್ಪಿ, ಹಣ ಮತ್ತು ಶ್ರಮ ಎರಡು ಉಳಿತಾಯ ಆಗುತ್ತದೆ. ಶಾಂತಿ ಸೌಹಾರ್ದ ವಾತಾವರಣ ಕಲ್ಪಿಸಿದಂತಾಗುತ್ತದೆ’ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಫಕೀರವ್ವ ಕೆಳಗೇರಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ, ಎಪಿಪಿಗಳಾದ ಸುರೇಶ ಪಾಟೀಲ, ವೆಂಕೋಬ ದೇಸಾಯಿ, ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಹಾಜರಿದ್ದರು.
ವಕೀಲರು, ಬ್ಯಾಂಕ್ ವ್ಯವಸ್ಥಾಪಕರು, ಇನ್ಶೂರನ್ಸ್ ಕಂಪನಿ ವ್ಯವಸ್ಥಾಪಕರು, ಹುಣಸಗಿ ಮತ್ತು ಸುರಪುರ ತಾಲ್ಲೂಕಿನ ಪೊಲೀಸ್ ಇಲಾಖೆ ಅಧಿಕಾರಿಗಳು, ಕೆಎಸ್‍ಆರ್‌ಟಿಸಿ ವ್ಯವಸ್ಥಾಪಕರು, ಅನುಷ್ಠಾನ ಅಧಿಕಾರಿಗಳು ಭಾಗವಹಿಸಿದ್ದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಂದಕುಮಾರ ಕನ್ನೆಳ್ಳಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.