ADVERTISEMENT

ಆಗ ಲುಂಬಿನಿ ವನ, ಈಗ ಅಧ್ವಾನ

ಮೂಲ ಸ್ವರೂಪ ಕಳೆದುಕೊಂಡ ನಗರದ ಹೃದಯಭಾಗದಲ್ಲಿರುವ ಉದ್ಯಾನ

ಬಿ.ಜಿ.ಪ್ರವೀಣಕುಮಾರ
Published 22 ಸೆಪ್ಟೆಂಬರ್ 2020, 1:22 IST
Last Updated 22 ಸೆಪ್ಟೆಂಬರ್ 2020, 1:22 IST
ಯಾದಗಿರಿಯ ಮಧ್ಯ ಭಾಗದಲ್ಲಿರುವ ಲುಂಬಿನ ವನದಲ್ಲಿ ಮಕ್ಕಳ ಅಟಿಕೆಗಳು ನೀರಿನಲ್ಲಿ ಮುಳುಗಿವೆ
ಯಾದಗಿರಿಯ ಮಧ್ಯ ಭಾಗದಲ್ಲಿರುವ ಲುಂಬಿನ ವನದಲ್ಲಿ ಮಕ್ಕಳ ಅಟಿಕೆಗಳು ನೀರಿನಲ್ಲಿ ಮುಳುಗಿವೆ   

ಯಾದಗಿರಿ:ನಗರದ ಏಕೈಕ ಸುಂದರ ಉದ್ಯಾನ ಈಗ ಮೂಲ ಸ್ವರೂಪವನ್ನೇಕಳೆದುಕೊಂಡು ಅಧ್ವಾನವಾಗಿದೆ‌. ನಗರದ ಮಧ್ಯ ಭಾಗದಲ್ಲಿ ಉದ್ಯಾನ ನಿರ್ಮಾಣವಾಗಿದ್ದು, ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಿದ್ದ ಉದ್ಯಾನ ಈಗ ಅಯೋಮಯವಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಉದ್ಯಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಲಾಕ್‌ಡೌನ್‌ ತೆರವು ಆದ ನಂತರ ಸಾರ್ವಜನಿಕರ ಭೇಟಿ ತೀರಾ ಕಡಿಮೆಯಾಗಿದೆ. ಕಾರಣ ಉದ್ಯಾನದಲ್ಲಿ ನೀರು ನಿಂತು ಪರಿಸರ ಮಲೀನಗೊಂಡಿದೆ.

ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದು ಲುಂಬಿನಿ ವನದ ಸಣ್ಣ ಕೆರೆ ತುಂಬಿ ಉದ್ಯಾನ ಹಾಳಾಗಿದೆ. ಇದನ್ನು ಸರಿಪಡಿಸುವ ಗೋಜಿಗೆ ಪ್ರವಾಸೋದ್ಯಮ ಇಲಾಖೆ ಮುಂದಾಗಿಲ್ಲ. ಕೆರೆಯ ನೀರು ಹೊರ ಹೋಗಲು ಜಾಗವಿಲ್ಲ. ಇದರಿಂದ ತಗ್ಗು ಪ್ರದೇಶದಲ್ಲಿರುವ ಉದ್ಯಾನಕ್ಕೆ ನೀರು ನುಗ್ಗಿದೆ.ನಿರ್ವಹಣೆ ಇಲ್ಲದೆ ಹುಲ್ಲು ಬೆಳೆದಿದೆ. ಮಕ್ಕಳ ಆಟಿಕೆಗಳು ನೀರಿನಲ್ಲಿ ಮುಳುಗಿವೆ. ಅವು ಮತ್ತೆ ಮೊದಲಿನಂತಾಗಲು ಇನ್ನೂ ಎಷ್ಟು ತಿಂಗಳು ಕಾಯಬೇಕು ಎನ್ನುವ ಪ್ರಶ್ನೆ ಸಾರ್ವಜನಿಕರದ್ದು.

ADVERTISEMENT

ವನದ ಸೌಂದರ್ಯ ಹಾಳು: ಕೆರೆಯ ಸೌಂದರ್ಯ ಸವಿಯಲು ಹಲವಾರು ಜನರು ಉದ್ಯಾನಕ್ಕೆ ಭೇಟಿ ನೀಡುತ್ತಿದ್ದರು. ಈಗ ಕೆರೆಯ ಒಳಗೆ ತೆರಳಲು ಆಗುವುದಿಲ್ಲ. ಎಲ್ಲ ಕಡೆ ನೀರು ನಿಂತು ಅಲಂಕಾರಿಕ ಸಸಿ, ಗಿಡಗಳು ನೀರಿನಲ್ಲಿ ಮುಳುಗಿವೆ. ಇದರಿಂದವನದ ಸೌಂದರ್ಯ ಹಾಳಾಗಿದೆ. ಸತ್ತ ಮೀನುಗಳು ಕೆರೆಯಲ್ಲಿ ತೇಲಿ ಬರುತ್ತಿವೆ. ಕೆರೆಯ ಹಿನ್ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು.

ಇಳಿಕೆಯಾದ ಜನರ ಭೇಟಿ: ಶನಿವಾರ, ಭಾನುವಾರ, ರಜಾ ದಿನಗಳಲ್ಲಿ ಸಾವಿರಾರು ಜನರು ಉದ್ಯಾನಕ್ಕೆ ಭೇಟಿ ನೀಡುತ್ತಿದ್ದರು. ಸಾವಿರಾರು ರೂಪಾಯಿ ಟಿಕೆಟ್‌ನಿಂದ ಆದಾಯ ಸಂಗ್ರಹವಾಗುತ್ತಿತ್ತು. ಈಗ ದಿನಕ್ಕೆ 80ರಿಂದ 90 ಜನ ಮಾತ್ರ ಭೇಟಿ ನೀಡುತ್ತಿದ್ದಾರೆ. ಆದಾಯವೂ ಇಳಿಕೆಯಾಗಿದೆ ಎಂದು ಅಲ್ಲಿಯ ಪ್ರವಾಸಿ ಮಿತ್ರರೊಬ್ಬರು ಹೇಳಿದರು.

ಗೌರವ ಧನ ನೀಡಲು ಆದಾಯವಿಲ್ಲ: ಉದ್ಯಾನದಲ್ಲಿ 10ರಿಂದ 12 ಜನ ವಿವಿಧ ಕಾರ್ಯನಿರ್ವಹಣೆಗೆ ನಿಯೋಜನೆಗೊಂಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿದ್ದರೂ ಇವರು ನಿರ್ವಹಣೆಗಾಗಿ ಬಂದಿದ್ದಾರೆ. ಆದರೆ, ಅವರಿಗೆ ಗೌರವ ಧನ ನೀಡಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು‌.

ಬೋಟಿಂಗ್‌ ಮಾತೇ ಇಲ್ಲ: ಸಣ್ಣ ಕೆರೆಯಲ್ಲಿ ನೀರು ಬಂದಿದ್ದರಿಂದ ಬೋಟಿಂಗ್‌ ಮಾಡಲು ಅವಕಾಶವಿದೆ. ಆದರೆ, ಟೆಂಡರ್‌ ಪ್ರಕ್ರಿಯೆ ಮುಗಿದರೂ ಸಂಬಂಧಿಸಿದವರು ಇನ್ನೂ ಬೋಟಿಂಗ್‌ ಆರಂಭಿಸಿಲ್ಲ.

‘ಮಾರ್ಚ್‌ 3ರಂದು ಬೋಟಿಂಗ್‌ ಟೆಂಡರ್‌ ಆಗಿದೆ. ಏಪ್ರಿಲ್‌ 1ರಂದು ಟೆಂಡರ್‌ ಓಪನ್‌ ಆಗಿದೆ. ಆದರೆ, ಟೆಂಡರ್‌ದಾರರು ಬಂದಿಲ್ಲ. ಅಲ್ಲದೆ ಉದ್ಯಾನ ವನ ಹಾಳಾಗಿ ಉದ್ಯಾನ ಸುತ್ತಮುತ್ತ ಆಪು ಹುಲ್ಲು ಬೆಳೆದಿದೆ. ಅದನ್ನು ತೆರವುಗೊಳಿಸಲು ನಗರಸಭೆಗೆ ಮನವಿ ಮಾಡಲಾಗಿದೆ. ಆದರೂ ಇನ್ನೂ ಕಾರ್ಯಗತಗೊಂಡಿಲ್ಲ. ಇದನ್ನು ಶೀಘ್ರ ನಿರ್ವಹಣೆ ಮಾಡಲಾಗುವುದುಎನ್ನುತ್ತಾರೆ’ ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಭೀಮರಾಯ ಮಸಾಲಿ ಅವರು.

‘ಈಗ ವಿವಿಧ ಕಾಮಗಾರಿಗೆ ₹50 ಲಕ್ಷ ಮಂಜೂರು ಆಗಿದೆ. ಶೀಘ್ರದಲ್ಲೇ ವಿವಿಧ ಕಾಮಗಾರಿ ಕೈಗೊಳ್ಳಲಾಗುವುದು. ಸಾರ್ವಜನಿಕರ ಭೇಟಿ ಕಡಿಮೆಯಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.