ಗುರುಮಠಕಲ್ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಗುಡ್ಲಗುಂಟಾ ಗ್ರಾಮದ ಜಮೀನಿನ ವಾರಸತ್ವ ಬದಲಾವಣೆಗೆ ಸಂಬಂಧಿಸಿದಂತೆ ಬುಧವಾರ ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ನೀಡಲು ಬಂದಿದ್ದ ಮಾದಿಗ ದಂಡೋರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ ಹಾಗೂ ಕಾರ್ಯಕರ್ತರಿಗೆ ತಹಶೀಲ್ದಾರ್ ದುಂಡಪ್ಪ ಅವರೊಂದಿಗೆ ವಾಗ್ವಾದ ಜರುಗಿತು.
ತಾಲ್ಲೂಕಿನ ಗುಡ್ಲಗುಂಟ ಗ್ರಾಮದ ತಾಯಪ್ಪ ಹರಿಜನ ಅವರ ಸ.ನಂ. 105 ರ 30 ಗುಂಟೆ ಜಮೀನನ್ನು ಅದೇ ಗ್ರಾಮದ ಸಾಬಮ್ಮ ತಾಯಪ್ಪ ಕಬ್ಬಲಿಗ ಅವರ ಹೆಸರಿಗೆ 2022ರಲ್ಲಿ ವಾರಸಾ ಬದಲಾವಣೆ ಮಾಡಲಾಗಿತ್ತು. ಆದರೆ, ತಾಯಪ್ಪ ಹರಿಜನ ಅವರ ಪುತ್ರ ಭೀಮರಾಯ ಹಲವು ಬಾರಿ ಕಚೇರಿಗಳಿಗೆ ಅಲೆದಾಡಿದ್ದು, ಈ ಮಧ್ಯೆ ಸಾಬಮ್ಮ ಅವರು ಅದೇ ಜಮೀನಿನ ಮೇಲೆ ಬ್ಯಾಂಕಿನಲ್ಲಿ ₹3 ಲಕ್ಷ ಸಾಲವನ್ನು ಪಡೆದಿದ್ದಾರೆ. ಈ ಎಲ್ಲಾ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ 'ಮನವಿ ಪತ್ರ ನೀಡಲು ಬಂದಾಗ ತಹಶೀಲ್ದಾರ್ ಅವರ ದರ್ಪದ ಮಾತು'ಗಳಾಡಿದ್ದಾರೆ ಎನ್ನುವುದು ದಂಡೋರಾದ ಕಾರ್ಯಕರ್ತರ ದೂರಾಗಿದೆ.
ತಹಶೀಲ್ದಾರ್ ದುಂಡಪ್ಪ ಅವರ ವಿರುದ್ಧ ದಂಡೋರಾದ ಕಾರ್ಯಕರ್ತರು ಘೋಷಣೆ ಕೂಗುತ್ತಾ, ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿ ಬಂದರೆ ಮಾತ್ರ ಮನವಿ ಸಲ್ಲಿಸುವುದಾಗಿ ಮತ್ತು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಮುತ್ತಿಗೆ ಮುಂದುವರಿಸುವುದಾಗಿ ಪಟ್ಟುಹಿಡಿದರು.
ಪೊಲೀಸ್‌ರೊಂದಿಗೆ ಮಾತುಕತೆ:
ದಂಡೋರಾದ ರಾಜ್ಯ ಘಟಕ ಅಧ್ಯಕ್ಷ ನರಸಪ್ಪ ಹಾಗೂ ಕಾರ್ಯಕರ್ತರೊಂದಿಗೆ ಪೊಲೀಸ್ ಇಲಾಖೆಯು ಮಾತುಕತೆ ನಡೆಸಿತಾದರೂ, 'ತಹಶೀಲ್ದಾರ್ ಕ್ಷಮೆ ಕೇಳಿದ ನಂತರವೇ ಉಳಿದದ್ದು ಮಾತಾಡೋಣ' ಎಂದು ದಂಡೋರಾದ ಕಾರ್ಯಕರ್ತರು ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.