ADVERTISEMENT

ಯಾದಗಿರಿ: ಮಹಾಲಕ್ಷ್ಮಿ ಜಾತ್ರೆಯ ಅದ್ದೂರಿ ಪಲ್ಲಕ್ಕಿ ಮೆರವಣಿಗೆ, ರಥೋತ್ಸವ

ಮಹಾಲಕ್ಷ್ಮಿ ಜಾತ್ರೆ: ಸಾವಿರಾರು ಭಕ್ತರು ಭಾಗಿ, 11 ದಿನಗಳ ಸಂಭ್ರಮಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 7:13 IST
Last Updated 6 ನವೆಂಬರ್ 2025, 7:13 IST
ಯಾದಗಿರಿ ನಗರದ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಜರುಗಿದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು
ಯಾದಗಿರಿ ನಗರದ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಜರುಗಿದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು   

ಯಾದಗಿರಿ: ನಗರದ ಲಕ್ಷ್ಮಿ ಬಡಾವಣೆಯಲ್ಲಿ ಇರುವ ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಗೌರಿ ಹುಣ್ಣಿಮೆಯ ಅಂಗವಾಗಿ ಅದ್ದೂರಿ ಪಲ್ಲಕ್ಕಿ ಮೆರವಣಿಗೆ ಹಾಗೂ ರಥೋತ್ಸವ ಸಾವಿರಾರು ಭಕ್ತರ ಸಮುಖದಲ್ಲಿ ಬುಧವಾರ ಜರುಗಿತು.

ಬೆಳಿಗ್ಗೆಯಿಂದಲೇ ದೇವಸ್ಥಾನದ ಆವರಣದಲ್ಲಿ ಮಹಾಲಕ್ಷ್ಮಿ, ಮಾರುತೇಶ್ವರ, ನಂದಿಶ್ವರ, ನವಗ್ರಹ, ವಿಘ್ನೇಶ್ವರ ಮೂರ್ತಿಗಳನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಂಗಳಾರತಿ, ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ನಾಗರ ಹುತ್ತಕ್ಕೂ ಪೂಜೆ ಸಲ್ಲಿಸಲಾಯಿತು.

ಹರಕೆ ಹೊತ್ತ ಭಕ್ತರು ದೀಡ್ ನಮಸ್ಕಾರ (ದೀರ್ಘ ದಂಡ ನಮಸ್ಕಾರ) ಹಾಕಿದರು. ಮತ್ತೆ ಕೆಲವರು ತಲೆಯ ಮೇಲೆ ಕಳಸ ಹೊತ್ತು, ಸೀರೆ ಅರ್ಪಿಸಿ ಉಂಡಿ ತುಂಬಿದರು. ಕಾಯಿ ಕರ್ಪೂರ, ನೈವೇದ್ಯದ ಮೂಲಕವೂ ಭಕ್ತಿಯನ ಸಮರ್ಪಿಸಿದರು.

ADVERTISEMENT

‍ಗರ್ಭ ಗುಡಿಯಲ್ಲಿ ಪೂಜೆ ಕೈಂಕರ್ಯಗಳು, ಸಾಂಪ್ರದಾಯಿಕ ಆಚರಣೆಗಳು ಮುಗಿದ ಬಳಿಕ ಪಲ್ಲಕ್ಕಿ ಮೆರವಣಿಗೆ ಹಾಗೂ ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು. ನಾಗಪ್ಪ ಪೂಜಾರಿ ಅವರ ಮನೆಯಿಂದ ದೀವಟಿಗೆ, ದಿ.ಶಿವನಗೌಡ ಬಿಳ್ಹಾರ ಅವರ ಮನೆಯಿಂದ ಕಳಸ, ಈಶ್ವರಪ್ಪ ಅವರ ಮನೆಯಿಂದ ರಥದ ಹಗ್ಗ, ಸಂತೋಷಕ ಕುಮಾರ್ ಮಹೀಂದ್ರಕರ್ ಅವರ ಮನೆಯಿಂದ ಪಲ್ಲಕ್ಕಿಯನ್ನು ತರಲಾಯಿತು.‌ 

ಮಹಾಲಕ್ಷ್ಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಭಕ್ತರ ಜಯಘೋಷಗಳ ನಡುವೆ ಐದು ಸುತ್ತು ದೇವಸ್ಥಾನವನ್ನು ಸುತ್ತು ಹಾಕಲಾಯಿತು. ಭಕ್ತರು ಪಲ್ಲಕ್ಕಿ ಹೊತ್ತವರ ಕಾಲಿಗೆ ನೀರು ಹಾಕಿದರು. ಪುರವಂತರ ಸೇವೆಯ ಶಸ್ತ್ರ ಪ್ರಯೋಗವೂ ಜರುಗಿತು.

ಹೂಗಳಿಂದ ಅಲಂಕೃತವಾದ ರಥದಲ್ಲಿ ದೇವಸ್ಥಾನದ ಅರ್ಚಕರು ಕುಳಿತು ರಥೋತ್ಸವಕ್ಕೆ ಚಾಲನೆ ಕೊಟ್ಟರು. ಹಲಗೆ, ವಾದ್ಯಗಳ ವಾದನ, ಮಹಾಲಕ್ಷ್ಮಿ ಮಾತೆಗೆ ಜೈಕಾರ ಘೋಷಣೆಯೊಂದಿಗೆ ಭಕ್ತರು ರಥವನ್ನು ಎಳೆದರು. ನೆರೆದಿದ್ದ ಭಕ್ತರು ಕೈ ಮುಗಿದು ನಮಿಸಿದರು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

ಜಾತ್ರೆ ಅಂಗವಾಗಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ, ಪ್ರಮುಖರಾದ ಶರಣಗೋಪಾಲ ನಾಯ್ಕಲ್, ನಾಗರತ್ನ ಕುಪ್ಪಿ ಸೇರಿದಂತೆ ಹಲವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಭಕ್ತರಿಗೆ ಇಡೀ ದಿನ ಗೋಧಿ ಹುಗ್ಗಿ, ಅನ್ನ ಮತ್ತು ಸಾಂಬಾರ್‌ನ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಅಂಗಡಿ ಮುಂಗಟ್ಟುಗಳಲ್ಲಿ ತೆಂಗು, ಹಾರ ತುರಾಯಿ, ಕರ್ಪೂರದಂತಹ ಸಾಮಾನುಗಳ ಮಾರಾಟ ಜೋರಾಗಿತ್ತು.

ಪೊಲೀಸ್ ಬಂದೋ ಬಸ್ತ್‌ ವ್ಯವಸ್ಥೆ ಮಾಡಿ, ದೇವಸ್ಥಾನ ಪಕ್ಕದ ಕಾಡ್ಲೂರ್ ಪೆಟ್ರೋಲ್‌ ಬಂಕ್‌ನಿಂದ ಹಳೇ ಕೋರ್ಟ್‌ ಮುಂಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಜಾತ್ರೆಯ ಕಾರ್ಯಕ್ರಮಗಳಲ್ಲಿ ಪ್ರಧಾನ ಅರ್ಚಕರಾದ ಶರಣಯ್ಯ ಸ್ವಾಮಿ, ಸೂಗುರಯ್ಯ ಸ್ವಾಮಿ, ಲಕ್ಷ್ಮಿ ಮಾರುತಿ ಸೇವಾ ಸಮಿತಿಯ ಅಧ್ಯಕ್ಷ ಸದಾಶಿವಪ್ಪ ಚಂದನಕೇರಾ, ಉಪಾಧ್ಯಕ್ಷ ಶಂಕರಪ್ಪಗೌಡ ಬೆಳಗುಂದಿ, ಕಾರ್ಯದರ್ಶಿ ಚಂದ್ರಶೇಖರ ಸ್ವಾಮಿ, ಪ್ರಮುಖರಾದ ಚಂದ್ರಶೇಖರ ಮೋಟನಳ್ಳಿ, ಚನ್ನಬಸವರೆಡ್ಡಿ ಗೌಡ ಗುರುಸುಣಗಿ, ಚನ್ನಪ್ಪ ಮಾಸ್ತರ್, ಮೋಹನ್ ರೆಡ್ಡಿ, ಈಶ್ವರಪ‍್ಪ, ಶರಣಪ್ಪ ಬೆನಕನಳ್ಳಿ, ಸಿದ್ದರಾಮರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾದಗಿರಿ ನಗರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ದೇವರ ದರ್ಶನ ಪಡೆದರು
ಅಲಂಕೃತ ಮಹಾಲಕ್ಷ್ಮಿ ದೇವಿಯ ಮೂರ್ತಿ
ಯಾದಗಿರಿ ನಗರದ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಪಲ್ಲಕ್ಕಿ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.