ಯಾದಗಿರಿ: ಮೇ 5 ರಿಂದ ಮೂರು ಹಂತಗಳಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿಗಳ 101 ಉಪ ಜಾತಿಗಳ ಸಮಗ್ರ ಸಮೀಕ್ಷೆ ವೇಳೆ ಜಿಲ್ಲೆಯ ಮಾದಿಗ ಸಮಾಜದ ಜನರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 61 ರಲ್ಲಿ ‘ಮಾದಿಗ’ ಎಂದೇ ಕಡ್ಡಾಯವಾಗಿ ಬರೆಯಿಸಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್‌ಎಚ್‌ಎಸ್) ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 5ರಿಂದ 17 ವರೆಗೆ ಗಣತಿವಾರು ಮನೆ, ಮನೆಗೆ ತೆರಳಿ ದತ್ತಾಂಶಗಳ ಸಂಗ್ರಹಣೆ ನಡೆಯುತ್ತದೆ. 2ನೇ ಹಂತದಲ್ಲಿ ಮೇ 19ರಿಂದ 21ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಏರ್ಪಡಿಸಿ ಮಾಹಿತಿ ನೀಡಲು ಅವಕಾಶ ನೀಡಲಾಗಿದೆ ಮತ್ತು ಈ ಎರಡು ಹಂತಗಳಲ್ಲಿ ಭಾಗಿಯಾಗಲು ಸಾಧ್ಯವಾಗದವರು 3ನೇ ಹಂತದ ಮೇ 19 ರಿಂದ 24 ರವರೆಗೆ ಆನ್ ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ನೀಡಲಾಗಿದೆ. ಸ್ವಯಂ ಘೋಷಣೆಗೆ ಆಧಾರ್ ನಂಬರ್ ಮತ್ತು ಜಾತಿ ಪ್ರಮಾಣ ಪತ್ರದ ಆರ್.ಡಿ.ಸಂಖ್ಯೆ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಈ ಮಹತ್ವದ ಅವಕಾಶ ತಪ್ಪಿಸಿಕೊಂಡವರು ಸರ್ಕಾರದ ಬಹುತೇಕ ಮಹತ್ವದ ಸೌಲಭ್ಯಗಳಿಂದ ವಂಚಿತರಾಗುವುದು ಖಂಡಿತ. ಕಾರಣ, ಸಮೀಕ್ಷೆಗಾಗಿ ಮಾಡಿರುವ ನಿಯಮಗಳ ಪ್ರಕಾರ ಪ್ರತಿಯೊಬ್ಬರು ಸೂಕ್ತ ದಾಖಲೆಗಳನ್ನು ಹೊಂದಿ ಕೇಳುವ ಎಲ್ಲ ಮಾಹಿತಿಯನ್ನು ನೀಡುವ ಮೂಲಕ ಕಡ್ಡಾಯವಾಗಿ ಮಾದಿಗ ಎಂದು ಬರೆಯಿಸಬೇಕು ಎಂದು ಮನವಿ ಮಾಡಿದರು.
ಕಾರಣ ಮಾದಿಗ ಸಮಾಜದವರು ಎಲ್ಲೆ ಇದ್ದರೂ ಈ ವೇಳೆ ತಮ್ಮ,ತಮ್ಮ ಊರುಗಳಿಗೆ ಬಂದು ಈ ಅವಕಾಶದ ಉಪಯೋಗ ಮಾಡಿಕೊಳ್ಳಬೇಕೆಂದು ಅವರು ಮಾಡಿದ್ದಾರೆ.
ಸಮಾಜದ ಮುಖಂಡರಾದ ಮಲ್ಲಣ್ಣ ದಾಸನಕೇರಿ, ಶಾಂತರಾಜ ಮೋಟನಳ್ಳಿ, ಎಂ.ಕೆ.ಬೀರನೂರ, ಗೋಪಾಲ್ ದಾಸನಕೇರಿ, ನಿಂಗಪ್ಪ ವಡ್ಡನಳ್ಳಿ, ಹಣಮಂತ ಲಿಂಗೇರಿ, ಸ್ವಾಮಿದೇವ ದಾಸನಕೇರಿ, ಯಲ್ಲಪ್ಪ ಮಾಳಿಕೇರಿ, ಮಲ್ಲು ಕುರಕುಂದಾ, ಮಾರುತಿ ಪಸಪುಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.