ADVERTISEMENT

ವಿಜೃಂಭಣೆಯ ಮಲ್ಲಯ್ಯನ ಪಲ್ಲಕ್ಕಿ ಉತ್ಸವ

ಮೈಲಾಪುರ: ಭಕ್ತಿ ಪರವಶತೆಯಲ್ಲಿ ಮೈಮರೆತ ಲಕ್ಷಾಂತರ ಜನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 19:43 IST
Last Updated 14 ಜನವರಿ 2020, 19:43 IST
ಮೈಲಾಪುರದ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ಜಾತ್ರೆಗೆ ಬಂದಿದ್ದ ಅಪಾರ ಜನಸ್ತೋಮ
ಮೈಲಾಪುರದ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ಜಾತ್ರೆಗೆ ಬಂದಿದ್ದ ಅಪಾರ ಜನಸ್ತೋಮ   

ಯಾದಗಿರಿ: ಭಂಡಾರದೊಡೆಯ ಮೈಲಾಪುರದ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ಮಂಗಳವಾರ ಅಪಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನಡೆಯಿತು.

ಮೈಲಾರಲಿಂಗೇಶ್ವರನ ದೇವಸ್ಥಾನ ಹಲವು ವೈಶಿಷ್ಟ್ಯಗಳನ್ನು ಹೊಂದಿದ ಗುಹಾಂತರ ದೇವಾಲಯವಾಗಿದೆ. ಮೂರು ಬಂಡೆಗಳನ್ನು ಒಳಗೊಂಡಂತೆ ದೇವಸ್ಥಾನ ನಿರ್ಮಾಣವಾಗಿದೆ.

ಅಕ್ಕಪಕ್ಕದ ಜಿಲ್ಲೆಗಳಿಂದಷ್ಟೇ ಅಲ್ಲದೆ ನೆರೆಯ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.ಎಲ್ಲಿ ನೋಡಿದರೂ ಭಂಡಾರ, ಭಕ್ತಿ ಪರವಶತೆಯಲ್ಲಿ ಮೈಮರೆತ ಜನ. ಮಧ್ಯಾಹ್ನ 1 ಗಂಟೆಗೆ ಹೊನ್ನಕೆರೆಗೆ ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಲವಾದ್ಯಗಳೊಂದಿಗೆ ದೇವರನ್ನು ತೆಗೆದುಕೊಂಡು ಹೋಗಲಾಯಿತು. ಸುಮಾರು ಒಂದೂವರೆ ಗಂಟೆ ನಂತರ ಪಲ್ಲಕ್ಕಿ ಉತ್ಸವ ದೇವಸ್ಥಾನಕ್ಕೆ ಮರಳಿತು.

ADVERTISEMENT

ಸರಪಳಿ ಹರಿಯುವುದು: ನಂತರ ಮಧ್ಯಾಹ್ನ 2.50ರ ವೇಳೆಗೆ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ಜರಗಿತು. ದೇವಸ್ಥಾನದ ಮುಖ್ಯ ಪೂಜಾರಿ ಸರಪಳಿ ಹರಿದರು.

ಕುರಿಮರಿ ಹಾರಿಸಿದ ಭಕ್ತರು: ಜಿಲ್ಲಾಡಳಿತದ ಕಣ್ತಪ್ಪಿಸಿ ಭಕ್ತರು ಮೂರು ಕುರಿ ಮರಿಗಳನ್ನು ಪಲ್ಲಕ್ಕಿಯ ಮೇಲೆ ಹಾರಿಸಿದರು. ಕೆಲವರು ತಂದಿದ್ದ ಹರಕೆ ಕುರಿ ಮರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ– 1960ರಂತೆ ಕುರಿಮರಿ ಹಾರಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಹಾರಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಧ್ವನಿವರ್ಧಕದಲ್ಲಿ ಆಗಾಗ ಸಾರುತ್ತಿದ್ದರು.

ಜಾತ್ರೆಯಲ್ಲಿ ಮಂಡಕ್ಕಿ, ಸಿಹಿ ತಿನಿಸುಗಳನ್ನು ಮಾರಾಟ ಜೋರಾಗಿತ್ತು. ಭಕ್ತರು ಮಲ್ಲಯ್ಯನ ಭಂಡಾರ ಖರೀದಿಸಿದರು. ಚಿಕ್ಕಮಕ್ಕಳು ಆಟಿಕೆಗಳನ್ನುಖರೀದಿಸಿ ಪೀಪಿ ಊದುತ್ತಾ, ಜೋಕಾಲಿಗಳಲ್ಲಿ ಕುಳಿತು ಸಂಭ್ರಮಿಸುತ್ತಿರುವುದು ಕಂಡುಬಂತು.

ದೇವಸ್ಥಾನದ ಮುಂಭಾಗದಲ್ಲಿ ಪೊಲೀಸರು ಬ್ಯಾರಿಕೇಡ್‌ ಆಳವಡಿಸಿದ್ದರು. ದೇವಸ್ಥಾನ ಪ್ರವೇಶಿಸಲು ₹200 ನಿಗದಿಪಡಿಸಿದ್ದರು. ತೆಂಗಿನಕಾಯಿ ಒಡೆಯಲು ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಭಕ್ತರು ಸಿಕ್ಕಸಿಕ್ಕಲ್ಲಿ ತೆಂಗಿನಕಾಯಿ ಒಡೆಯುತ್ತಿದ್ದರು. ತೆಂಗಿನಕಾಯಿ ನೀರಿನಿಂದ ರಸ್ತೆಯೆಲ್ಲ ಕೊಳಕುಮಯವಾಗಿತ್ತು.

ಭಕ್ತರು ಮೆರವಣಿಗೆ ವೇಳೆ ಬಂಡೆ ಮೇಲೆ ಒಂದು, ಎರಡು, ಐದು ರೂಪಾಯಿ ನಾಣ್ಯಗಳನ್ನು ನಿಲ್ಲಿಸುವ ಪ್ರಯತ್ನ ಮಾಡಿದರು. ಭಕ್ತಿ ಇದ್ದರೆ ನಾಣ್ಯ ನಿಲ್ಲುತ್ತದೆ ಎಂಬುದು ನಂಬಿಕೆಯಾಗಿದ್ದು, ಹಲವರು ತಮ್ಮ ಭಕ್ತಿ ಪ್ರದರ್ಶನ ಮಾಡಿದರು.

ಎಲ್ಲೆಲ್ಲೂ ಭಂಡಾರ: ಪಲ್ಲಕ್ಕಿ ಮೆರವಣಿಗೆಯ ದಾರಿಯುದ್ದಕ್ಕೂ ಭಂಡಾರ ಎಸೆಯುತ್ತಿರುವ ದೃಶ್ಯ ಕಾಣಿಸುತ್ತಿತ್ತು. ಮನೆ ದೇವರನ್ನು ಹೊನ್ನಕೇರಿಗೆ ಗಂಗಾಸ್ನಾನಕ್ಕೆ ತೆಗೆದುಕೊಂಡು ಹೋಗುತ್ತಿರುವ ವೇಳೆ ಮನೆ ಮಹಡಿ ಮೇಲೆ ನಿಂತ ಭಕ್ತರು ಭಂಡಾರ ಎಸೆದು ಭಕ್ತಿ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.