ADVERTISEMENT

ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ: ಅಧಿಕಾರ ಸ್ವೀಕಾರಕ್ಕೆ ಮರಿಗೌಡ ಹಿಂದೇಟು

ಕಾಡಾ ನೀಡುವಂತೆ ಬೇಡಿಕೆ ಇಟ್ಟ ಮುಖಂಡ

ಟಿ.ನಾಗೇಂದ್ರ
Published 12 ಮಾರ್ಚ್ 2024, 5:45 IST
Last Updated 12 ಮಾರ್ಚ್ 2024, 5:45 IST
<div class="paragraphs"><p>ಮರಿಗೌಡ ಹುಲಕಲ್</p></div>

ಮರಿಗೌಡ ಹುಲಕಲ್

   

ಶಹಾಪುರ: ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಹತ್ತು ದಿನಗಳ ಹಿಂದೆ ಸರ್ಕಾರ ಶಹಾಪುರದ ಮರಿಗೌಡ ಹುಲಕಲ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಅಧಿಕಾರ ಸ್ವೀಕಾರಕ್ಕೆ ಹಿಂದೇಟು ಹಾಕುತ್ತಿರುವ ಅವರು ಪ್ರಮುಖ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಮರಿಗೌಡ ಹುಲಕಲ್ ಹಿಂದೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಕೃಷ್ಣಾ ಕಾಡಾದ ಅಧ್ಯಕ್ಷರಾಗಿದ್ದರು. ಈ ಬಾರಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಅದನ್ನು ನಿರಾಕರಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕೇವಲ ಕಲಬುರಗಿಗೆ ಸೀಮಿತವಾಗುತ್ತದೆ. ಅಷ್ಟೊಂದು ಲಾಭದಾಯಕ ಅಲ್ಲ. ಅಭಿವೃದ್ಧಿ ಕೆಲಸ ಮಾಡಲು ಹಾಗೂ ಅನುದಾನ ಬಳಸಿಕೊಳ್ಳಲು ಅವಕಾಶ ಕಡಿಮೆ. ಇದಕ್ಕಿಂತ ಉತ್ತಮವಾಗಿರುವುದು ಕೃಷ್ಣಾ ಕಾಡಾ ಅಧ್ಯಕ್ಷ ಸ್ಥಾನ.

ADVERTISEMENT

ಆ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ. ಮತ್ತೊಮ್ಮೆ ಅವಕಾಶ ಕೊಡಿ ಎಂಬ ಬೇಡಿಕೆಯನ್ನು ಪಕ್ಷದ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ತಿಳಿಸಿದರು. ಮರಿಗೌಡ ಹುಲಕಲ್ ಅವರನ್ನು ನೇಮಕ ಮಾಡಿರುವುದಕ್ಕೆ ಮುಸ್ಲಿಂ, ಕಬ್ಬಲಿಗ, ವಾಲ್ಮೀಕಿ, ಪರಿಶಿಷ್ಟ ಜಾತಿ ಹೀಗೆ ಹಲವಾರು ಹಿಂದುಳಿದ ಸಮಾಜಗಳ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿ ನಮಗೂ ಅವಕಾಶ ನೀಡಬೇಕು ಎಂದು ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕಿದ್ದರು. ಇದು ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ‘ಮುಸ್ಲಿಂ ಸಮುದಾಯದವರು ಚುನಾವಣೆ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದೇವೆ. ನಮಗೂ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇವೆ’ ಎಂದು ಕಾಂಗ್ರೆಸ್‌ ಮುಖಂಡ ಖಾಜಾ ಮೈನುದ್ದೀನ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿರುವ ಮರಿಗೌಡ ಹುಲಕಲ್ ಮತ್ತೆ ಪ್ರಭಾವ ಬಳಸಿಕೊಂಡು ಬೇರೆ ಮಂಡಳಿಯ ಅಧ್ಯಕ್ಷ ಸ್ಥಾನ ಗಿಟ್ಟಿಸುತ್ತಾರೋ, ಇಲ್ಲ ಮೌನಕ್ಕೆ ಶರಣಾಗುತ್ತಾರೋ ಕಾದು ನೋಡಬೇಕು.

ಮರಿಗೌಡ ಹುಲಕಲ್

Quote -

ಇನ್ನೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಸ್ವೀಕರಿಸಿಲ್ಲ. ಕಾದು ನೋಡಬೇಕು

ಮರಿಗೌಡ ಹುಲಕಲ್ ನಿಯೋಜಿತ ಅಧ್ಯಕ್ಷ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.