ADVERTISEMENT

ಸಾಮೂಹಿಕ ವಿವಾಹಗಳ ಸಂತ ಬಸವರಾಜಪ್ಪ ಮುತ್ಯಾ

​ಪ್ರಜಾವಾಣಿ ವಾರ್ತೆ
Published 16 ಮೇ 2025, 6:31 IST
Last Updated 16 ಮೇ 2025, 6:31 IST
ಕಕ್ಕೇರಾ ಪಟ್ಟಣದಲ್ಲಿ ಶುಕ್ರವಾರ ನಡೆಯಲಿರುವ ಸಾಮೂಹಿಕ ವಿವಾಹದ ಪೋಸ್ಟರ್‌ ಬಿಡುಗಡೆ ಮಾಡಿದ ಶರಣಜೀವಿ ಬಸವರಾಜಪ್ಪ ಮುತ್ಯಾ
ಕಕ್ಕೇರಾ ಪಟ್ಟಣದಲ್ಲಿ ಶುಕ್ರವಾರ ನಡೆಯಲಿರುವ ಸಾಮೂಹಿಕ ವಿವಾಹದ ಪೋಸ್ಟರ್‌ ಬಿಡುಗಡೆ ಮಾಡಿದ ಶರಣಜೀವಿ ಬಸವರಾಜಪ್ಪ ಮುತ್ಯಾ   

ಕಕ್ಕೇರಾ: ಪಟ್ಟಣದ ಹೃದಯ ಭಾಗದಲ್ಲಿರುವ ಯುಕೆಪಿ ಕ್ಯಾಂಪ್‌ನಲ್ಲೀಗ ಮದುವೆ ಸಂಭ್ರಮ ಕಳೆಗಟ್ಟಿದೆ. ಸೋಮನಾಥ ಗದ್ದಿಗಿಯಲ್ಲಿ ಮಾ16ರ ಶುಕ್ರವಾರದಂದು 41 ಜೋಡಿಗಳು ಹಸೆಮಣೆ ಏರಲಿದ್ದಾರೆ.

20 ವರ್ಷಗಳಿಂದ ಸತತವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಸವರಾಜಪ್ಪ ಮುತ್ಯಾ ಅವರೇ ಸಾಮೂಹಿಕ ವಿವಾಹದ ರೂವಾರಿ. ಅವರನ್ನು ಸಾಮೂಹಿಕ ವಿವಾಹಗಳ ಸಂತ ಎಂದೇ ಇಲ್ಲಿನ ಜನ ಬಣ್ಣಿಸತೊಡಗದ್ದಾರೆ.

ಬಸವರಾಜಪ್ಪ ಮುತ್ಯಾ ಓದಿದ್ದು ಕೇವಲ 5ನೇ ಕ್ಲಾಸ್. ಆದರೆ, ಅವರು ನಾಟಕ, ಕಥೆ, ಕಾದಂಬರಿ, ಇನ್ನಿತರ ಲೇಖನಿಗಳಲ್ಲಿ ನಿಸ್ಸೀಮರು. ಮಾತು ಕಡಿಮೆ, ಕಾಯಕಯೋಗಿ. 18ನೇ ವಯಸ್ಸಿನಲ್ಲಿಯೇ ಪಟ್ಟಣದಲ್ಲಿ ನಾಟಕ ಕಂಪನಿ ಪ್ರಾರಂಭಿಸಿದ್ದರು. ಅಂದಾಜು ₹10 ಲಕ್ಷ ವೆಚ್ಚ ಮಾಡಿದ ಹಣ ಮರಳಿ ಬಾರದ ಪ್ರಯುಕ್ತ ಏನು ಮಾಡುವುದು ಎಂದು ತಿಳಿಯದೇ ನಮ್ಮ ತಾಲ್ಲೂಕಿನಲ್ಲಿಯೇ ಪ್ರಥಮ ಭಾರಿಗೆ ಸಾಮೂಹಿಕ ವಿವಾಹ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ADVERTISEMENT

’ಚಿಕ್ಕವನಿರುವಾಗ ಹಿರೇಹಳ್ಳದ ಶಾಲೆಗೆ ಬಸವರಾಜ ಬರುತ್ತಿದ್ದ. ಓದಿನಲ್ಲಿ ಜಾಣನಿದ್ದ. ಆದರೆ ನಾವು ನೀಡುವ ಚಡಿಏಟಿಗೆ ಗದ್ಯಗಳನ್ನು ಕಂಠಪಾಠ ಮಾಡುತ್ತಿದ್ದ. ಚಿಕ್ಕವನಿರುವಾಗಲೇ ನನ್ನ ಬಗ್ಗೆಯೇ 5 ಪುಟ ಬರೆದಿದ್ದ. ನಂತರ ಸಮಾಜಸೇವೆಗೆ ಮುಂದಾದ. ಸತತವಾಗಿ 20 ವರ್ಷಗಳ ಕಾಲ ಸಾಮೂಹಿಕ ಮದುವೆ ಮಾಡುವುದು ಸುಲಭವಲ್ಲ, ಆತನಿಗೆ ಇನ್ನು ಹೆಚ್ಚಿನ ಶಕ್ತಿಯನ್ನು ಬಸವಾದಿ ಶರಣರು ಕರುಣಿಸಲಿ’ ಎನ್ನುತ್ತಾರೆ ಚನ್ನಪ್ಪ ಹಿರೇಹಳ್ಳ ಮಾಸ್ತರ್‌.

’ನಮ್ಮ ಭಾಗದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಜನ ಸಾಕಷ್ಟಿದ್ದಾರೆ. ನಮ್ಮ ಕುಟುಂಬದಲ್ಲಿಯೇ ಒಬ್ಬರ ಮದುವೆ ಮಾಡಬೇಕು. ಆಗ ಹೊಳೆದಿದ್ದೇ ಸಾಮೂಹಿಕ ವಿವಾಹದ ಪರಿಕಲ್ಪನೆ. ನಮ್ಮ ಕುಟುಂಬ, ನೆರೆ ಹೊರೆಯವರು, ಗಣ್ಯರು, ದಾನಿಗಳ ಶ್ರಮದಿಂದ ಇಂತಹ ಕಾರ್ಯಕ್ರಮ ಮಾಡಲು ಸಾಧ್ಯವಾಯಿತು. ನನ್ನದೇನು ಇಲ್ಲ ಎಲ್ಲಾ ಅವರದೇ. ಕರಿಮಡ್ಡಿ ಸೋಮನಾಥನ ಕೃಪೆ’ ಎಂದರು ಬಸವರಾಜಪ್ಪ ಮುತ್ಯಾ.

’2004ರಲ್ಲಿ ಬಸವಸಾಗರ ಶಿಕ್ಷಣ ಸಂಸ್ಥೆ ಯುಕೆಪಿ ಕ್ಯಾಂಪಿನಲ್ಲಿ ಪ್ರಥಮಬಾರಿಗೆ ಸಾಮೂಹಿಕ ವಿವಾಹ ಆರಂಭದಲ್ಲಿ ಬಸವರಾಜಪ್ಪ ಮುತ್ಯಾ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದರು. ಹೀಗಾಗಿ ನಾವು ಸೇರಿದಂತೆ ಅನೇಕರ ಸಹಕಾರದಿಂದ ಸಾಮೂಹಿಕ ವಿವಾಹ ಮಾಡುತ್ತಿರುವುದು ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಬಸವಸಾಗರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರಸಂಗಪ್ಪ.

ಕಕ್ಕೇರಾ ಪಟ್ಟಣದ ಶರಣಜೀವಿ ಬಸವರಾಜಪ್ಪ ಮುತ್ಯಾ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.