ಯಾದಗಿರಿ: ‘ತಾಯಿ ಮತ್ತು ಶಿಶು ಮರಣವನ್ನು ತಪ್ಪಿಸಲು ಗಂಭೀರ ಸಮಸ್ಯೆ ಇರುವ ಗರ್ಭಿಣಿಯರು ಮತ್ತು ಮಕ್ಕಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ, ಅವರಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು. ಆಶಾ ಕಾರ್ಯಕರ್ತರು ಸಹ ನಿರಂತರವಾಗಿ ಅವರ ಮನೆ– ಮನೆಗೆ ಭೇಟಿ ಕೊಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವಿಶ್ ಓರಡಿಯಾ ಅವರು ಸೂಚಿಸಿದರು.
ಇಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಗುರುವಾರ ನಡೆದ ಶಿಶು ಮರಣ ತಡೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
‘ಆರ್‌ಸಿಎಚ್ ಪೋರ್ಟಲ್‌ನಲ್ಲಿ ಗರ್ಭಿಣಿಯರ ಹೆಸರು ದಾಖಲು ಮಾಡಿಕೊಂಡ ಬಳಿಕ ಅವರ ಚಿಕಿತ್ಸೆಯ ಹಿನ್ನೆಲೆಯೂ ಸಿಗುತ್ತದೆ. ಹೈರಿಸ್ಕ್ ಇರುವವರನ್ನು ಆದ್ಯತೆಯ ಮೇಲೆ ತೆಗೆದುಕೊಂಡು ಚಿಕಿತ್ಸೆ ಕೊಡಿಸಬೇಕು. ಯಾರು ನಿಯಮಿತವಾಗಿ ತಪಾಸಣೆಗೆ ಬರುತ್ತಿಲ್ಲ ಎಂಬುದನ್ನು ಪತ್ತೆ ಮಾಡಿ, ಅವರ ಮನೆಗೆ ಆಶಾ ಕಾರ್ಯಕರ್ತರನ್ನು ಕಳುಹಿಸಬೇಕು’ ಎಂದರು.
‘ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಆಧಾರ ಸ್ತಂಬ ಇದ್ದಂತೆ. ಜನರ ಆರೋಗ್ಯ ಕಾಪಾಡುವಲ್ಲಿ ಅವರ ಪಾತ್ರ ಮಹತ್ವದು. ಆದರೆ, ಗರ್ಭಿಣಿಯರ ತಪಾಸಣೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ತಾಯಿ ಮತ್ತು ಮರಣ ತಪ್ಪಿಸುವಲ್ಲಿ ನಿರೀಕ್ಷಿತ ಮಟ್ಟದ ಕೆಲಸವೂ ಆಗುತ್ತಿಲ್ಲ. ಗರ್ಭಿಣಿಯರ ಮನೆ ಮನೆಗೂ ತೆರಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಗೌರವಧನದ ಮೊತ್ತವು ಸರ್ಕಾರಕ್ಕೆ ವಾಪಸ್ ಹೋಗದ ಮಟ್ಟಿಗೆ ಕೆಲಸ ಮಾಡಿ, ತಾಯಿ ಮತ್ತು ಶಿಶು ಮರಣವನ್ನು ತಪ್ಪಿಸುವಂತೆ ಗೌರವ ಪೂರ್ವಕವಾಗಿ ಮನವಿ ಮಾಡುತ್ತೇನೆ. ಗಂಭೀರವಾದ ಪ್ರಕರಣಗಳ ಬಗ್ಗೆ ಮುಂಚಿತವಾಗಿ ತಿಳಿಸಿದರೆ ತಾಯಿ– ಮಗುವಿನ ಜೀವವನ್ನು ಉಳಿಸಬಹುದು’ ಎಂದರು.
ಅರ್ಧದಷ್ಟು ಪ್ರಕರಣ ಇಳಿಕೆ: ‘ಕಳೆದ ಒಂದು ವರ್ಷದಿಂದ ನಿರಂತರವಾಗಿ ಸಭೆ ಮಾಡಿ, ಮೇಲ್ವಿಚಾರಣೆ ಮಾಡಿದ್ದರಿಂದ ಶಿಶು ಮರಣ ಪ್ರಮಾಣದಲ್ಲಿ ಅರ್ಧದಷ್ಟು ಇಳಿಕೆಯಾಗಿದೆ. ಆದರೆ, ಇದರಲ್ಲಿ ನಾವು ಅಂದುಕೊಂಡಿದ್ದರ ಗುರಿಯನ್ನು ಇನ್ನೂ ಮುಟ್ಟಿಲ್ಲ. ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ’ ಎಂದು ಹೇಳಿದರು.
‘ತಾಲ್ಲೂಕು ಆರೋಗ್ಯ ಅಧಿಕಾರಿಗಳು ತಾಯಿ ಮತ್ತು ಶಿಶು ಮರಣ ತಡೆಯುವುದರ ಮುಂದಾಳತ್ವ ತೆಗೆದುಕೊಳ್ಳಬೇಕು. ಪ್ರತಿ ವಾರ ಸಭೆ ಮಾಡಿ, ಆರ್‌ಸಿಎಚ್ ಪೋರ್ಟಲ್‌ನಲ್ಲಿರುವ ಪ್ರಕರಣಗಳನ್ನು ಗಮನಿಸಬೇಕು. ಆದ್ಯತೆಯ ಮೇಲೆ ಯಾವ ಪ್ರಕರಣಗಳನ್ನು ಉಳಿದಿದೆ ಎಂಬುದನ್ನು ಪ್ರತಿ ತಿಂಗಳು ಪತ್ತೆ ಮಾಡಬೇಕು’ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಡಿಎಚ್‌ಒ ಡಾ.ಮಹೇಶ ಬಿರಾದಾರ, ಡಿಎಲ್‌ಒ ಡಾ.ಪದ್ಮಾನಂದ ಗಾಯಕವಾಡ, ಡಿಎಂಒ ಡಾ.ಸಾಜಿದ್, ಮಕ್ಕಳ ತಜ್ಞ ಡಾ.ಕುಮಾರ ಅಂಗಡಿ ಸೇರಿದಂತೆ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಪಿಎಚ್‌ಸಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಡಿಸ್ಚಾರ್ಜ್ ವೇಳೆ ನರ್ಸ್‌ಗಳು ಮಗುವಿನ ಆರೈಕೆ ಬಗ್ಗೆ ಪೋಷಕರಿಗೆ ತಿಳಿಸಬೇಕು. ಆಶಾ ಕಾರ್ಯಕರ್ತೆಯರು ಮನೆ– ಮನೆಗೆ ಹೋಗಿ ಮಗುವಿನ ಆರೈಕೆಯ ಬಗ್ಗೆ ಜಾಗೃತಿ ಮೂಡಿಸಬೇಕುಡಾ.ಕುಮಾರ ಅಂಗಡಿ ಮಕ್ಕಳ ತಜ್ಞ
ಜಿಲ್ಲಾ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿಶ್ರಾಂತಿಗಾಗಿ ಪ್ರತ್ಯೇಕವಾದ ಕೊಣೆಯ ವ್ಯವಸ್ಥೆಯನ್ನು ಮಾಡಿಕೊಡಲಾಗುವುದುಡಾ.ಮಲ್ಲಪ್ಪ ನೈಕಲ್ ಆರ್‌ಸಿಎಚ್ಒ
‘ಕಂದಕೂರ ಪಿಎಚ್‌ಸಿ ಅಧಿಕಾರಿಗೆ ನೋಟಿಸ್ ನೀಡಿ’:
‘ಗುರುಮಠಕಲ್ ತಾಲ್ಲೂಕಿನ ಕಂದಕೂರ ಪಿಎಚ್‌ಸಿಗೆ ಏಕಾಏಕಿ ಭೇಟಿ ನೀಡಿದ್ದಾಗ ಪಿಎಚ್‌ಸಿ ಅಧಿಕಾರಿ ಗೈರಾಗಿದ್ದರು. ಅವರ ವರ್ತನೆಲ್ಲಿಯೂ ಸುಧಾರಣೆ ಕಂಡಿಲ್ಲ. ಎರಡು ಶಿಶುಗಳು ಸಾವನ್ನಪ್ಪಿದ್ದು ಸರಿಯಾದ ಮಾಹಿತಿಯೂ ನೀಡಿಲ್ಲ. ಹೀಗಾಗಿ ಅವರಿಗೆ ನೋಟಿಸ್ ಕೊಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವಿಶ್ ಓರಡಿಯಾ ಅವರು ಡಿಎಚ್‌ಒಗೆ ಸೂಚಿಸಿದರು. ‘ಮಧ್ಯರಾತ್ರಿ 2 ಗಂಟೆಗೆ ಫೋನ್ ಕರೆಗಳು ಬಂದರೂ ಆಂಬುಲೆನ್ಸ್ ಚಾಲಕ ಕರ್ತವ್ಯಕ್ಕೆ ಹಾಜರಾಗಬೇಕು. ಆಂಬುಲೆನ್ಸ್ ಚಾಲಕ ಇಲ್ಲ ಎಂಬ ಕಾರಣಕ್ಕೆ ರೋಗಿಯು ಚಿಕಿತ್ಸೆಯಿಂದ ವಂಚಿತ ಆಗಬಾರದು. ಆಂಬುಲೆನ್ಸ್‌ಗಳಿಗೆ ಸ್ಥಳೀಯ ಚಾಲಕರನ್ನೇ ನೇಮಕ ಮಾಡಿಕೊಳ್ಳಬೇಕು’ ಎಂದು ಟಿಎಚ್‌ಒಗಳಿಗೆ ತಾಕೀತು ಮಾಡಿದರು.
‘ಹಣಕ್ಕಾಗಿ ಖಾಸಗಿ ಆಸ್ಪತ್ರೆಗಳ ಜತೆ ಒಪ್ಪಂದ’:
‘ಕೆಲವು ಆಶಾ ಕಾರ್ಯಕರ್ತೆಯರು ಖಾಸಗಿ ಆಸ್ಪತ್ರೆಗಳಿಂದ ₹ 5 ಸಾವಿರದಿಂದ ₹10 ಸಾವಿರ ಪಡೆದು ಸಿಸೇರಿಯನ್ ಹೆರಿಗೆಗೆ ಗರ್ಭಿಣಿಯರನ್ನು ಕಳುಹಿಸುತ್ತಿದ್ದಾರೆ’ ಎಂದು ವೈದ್ಯಾಧಿಕಾರಿಯೊಬ್ಬರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಆಕ್ಷೇಪಿಸಿದ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷೆ ಉಮಾದೇವಿ ‘ಆಶಾ ಕಾರ್ಯಕರ್ತೆಯರು ಹಣ ತೆಗೆದುಕೊಳ್ಳುವುದನ್ನು ಒಪ್ಪಬಹುದು. ಇದಕ್ಕೆ ವೈದ್ಯ ಅಧಿಕಾರಿಗಳು ಆರೋಗ್ಯ ಇಲಾಖೆಯೇ ಕಾರಣ. ಕೆಲವು ಸರ್ಕಾರಿ ವೈದ್ಯರೇ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಅದನ್ನು ತನಿಖೆಯಿಂದೆ ನೀವೆ ಪತ್ತೆಮಾಡಿ. ಹಣ ಪಡೆದು ಕಳುಹಿಸುವುದು ಯಾದಗಿರಿ ಮಾತ್ರವಲ್ಲ. ಎಲ್ಲಾ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ’ ಎಂದರು. ಸಾಮಾನ್ಯ ವಿಷಯಗಳನ್ನು ಇಂತಹ ಸಭೆಯಲ್ಲಿ ಪ್ರಸ್ತಾಪಿಸದಂತೆ ಸಿಇಒ ತಾಕೀತು ಮಾಡಿದಾಗ ವಾಗ್ವಾದಕ್ಕೆ ತೆರೆ ಬಿತ್ತು.
‘ಪರಸ್ಪರ ಖಾಲಿ ಇರುವ ಹುದ್ದೆಗಳಿಗೆ ವರ್ಗಾವಣೆ ಮಾಡಿ’:
‘ಆರೋಗ್ಯ ಇಲಾಖೆಯ ಗುತ್ತಿಗೆ ಹೊರಗುತ್ತಿಗೆ ನೌಕರರನ್ನು ಪರಸ್ಪರ ಹಾಗೂ ಖಾಲಿ ಇರುವ ಹುದ್ದೆಗಳಿಗೆ ವರ್ಗಾವಣೆ ಮಾಡಬೇಕು’ ಎಂದು ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ರಾಚಣ್ಣಗೌಡ ಕರಡ್ಡಿ ಮನವಿ ಮಾಡಿದರು. ಕರ್ತವ್ಯದ ಪಾಳಿಯನ್ನು ಎಲ್ಲಾ ಸಿಬ್ಬಂದಿಗೆ ಸಮಾನ ರೀತಿಯಲ್ಲಿ ಹಾಕಬೇಕು. ಸಿಬ್ಬಂದಿಯ ಭವಿಷ್ಯನಿಧಿ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು. ಬಾಕಿ ವೇತನ ಪಾವತಿಸಬೇಕು’ ಎಂದರು. ಆರ್‌ಸಿಎಚ್ ಪೋರ್ಟಲ್ ಹಣ ಸರಿಯಾಗಿ ಬರುತ್ತಿಲ್ಲ. ಎನ್‌ಸಿಡಿ ಹಣವನ್ನು ಬಿಡುಗಡೆ ಮಾಡಬೇಕು. ಡಿಲೀಟ್ ಆಗುತ್ತಿರುವ ಕಾರ್ಯಕರ್ತೆಯರ ಐಡಿಗಳನ್ನು ನಿಲ್ಲಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಸಹ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.