ಯಾದಗಿರಿ: ‘ಜಿಲ್ಲೆಯಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಶಿಶುಗಳ ಮರಣ ಪ್ರಮಾಣ ತಡೆಯಲು ಪರಿಣಾಮಕಾರಿ ಆರೋಗ್ಯ ತಪಾಸಣೆ, ನಿವಾರಣಾ ಕ್ರಮಕೈಗೊಳ್ಳಬೇಕು’ ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಅವರು ಮಾತನಾಡಿದರು.
‘ಬಾಲ್ಯ ವಿವಾಹ ತಡೆ ಸವಾಲಾಗಿ ಸ್ವೀಕರಿಸಿ ಸೂಕ್ತ ಕ್ರಮವಹಿಸಬೇಕು. ಸಾಮಾಜಿಕ ಕಳಕಳಿ, ಮಾನವೀಯ ನೆಲೆಯಲ್ಲಿ ಕ್ರಮಕೈಗೊಂಡಾಗ ಮಾತ್ರ ಈ ಸಮಸ್ಯೆ ಮತ್ತು ಶಿಶು–ತಾಯಿಂದಿರ ಮರಣ ಪ್ರಮಾಣ ತಡೆಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
‘ಜಿಲ್ಲೆಯಲ್ಲಿನ ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಆದ್ಯತೆ ಮೇಲೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸಿ, ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.
‘ಯೂರಿಯಾ ಹಾಗೂ ಡಿಎಪಿಗೆ ಪರ್ಯಾಯವಾಗಿ ನೀಡಲಾಗುವ ನ್ಯಾನೋ ರಸಗೊಬ್ಬರ ಬಳಕೆ ಬಗ್ಗೆ ಜಿಲ್ಲೆಯ ರೈತರಿಗೆ ಸೂಕ್ತ ಜಾಗೃತಿ ಮೂಡಿಸಬೇಕು. ಸ್ಪ್ರಿಂಕ್ಲರ್, ಮಣ್ಣು ಪರೀಕ್ಷೆ, ಮಣ್ಣು ಪರೀಕ್ಷೆ ಕಾರ್ಡ್ ವಿತರಣೆ ಕುರಿತಂತೆ ಅವಶ್ಯಕ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯಿಂದ ಹಿಡಿದು ಸುಮಾರು 11 ಮಹತ್ವದ ಇಲಾಖೆಗಳ ಪ್ರಗತಿ ನೋಟವನ್ನು ಅಧಿಕಾರಿಗಳು ಮಂಡಿಸುವಾಗ ಅದನ್ನು ಕೇಳಿದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ‘ಸಂಸದರು ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದವರಿದ್ದಾರೆ. ಅವರ ಮುಂದೇ ಕಾಗಕ್ಕ– ಗುಬ್ಬಕ್ಕ ಕತೆ ಹೇಳಬೇಡಿ. ಜಿಲ್ಲೆಯಲ್ಲಿ ಶಿಶುಗಳು, ತಾಯಿಂದಿರ ಮರಣ ಪ್ರಮಾಣ ತಡೆಯಲು ಪರಿಣಾಮಕಾರಿ ಆರೋಗ್ಯ ತಪಾಸಣೆ, ನಿವಾರಣಾ ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹ ತಡೆ ಸವಾಲಾಗಿ ಸ್ವೀಕರಿಸಬೇಕು’ ಎಂದರು.
ಸಂಸದ ಕುಮಾರನಾಯಕ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 662 ಮಕ್ಕಳು ಶಾಲೆಯಿಂದ ಹೊರಗುಳಿದ ಬಗ್ಗೆ ಆರ್‌ಡಿಪಿಆರ್ ಇಲಾಖೆಯಿಂದ ಸಮೀಕ್ಷೆ ಅನ್ವಯ ಗುರಿ ನೀಡಿದ್ದು, ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರೊಂದಿಗೆ ಸಮನ್ವಯ ಸಾಧಿಸಿ ಸ್ಯಾಟ್ಸ್ ಆಧಾರದಲ್ಲಿ ಪತ್ತೆ ಹಚ್ಚಿ ಶಾಲೆಗೆ ಸೇರಿಸಬೇಕು’ ಎಂದು ನಿರ್ದೇಶನ ನೀಡಿದರು.
ಕಡೇಚೂರ-ಬಾಡಿಯಾಳ ಸಮೀಪದ ರೈಲ್ವೆ ಬೋಗಿ ಕಾರ್ಖಾನೆಗೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿಯಡಿ ನೀರಿನ ಪೈಪ್‌ಲೈನ್ ಅಳವಡಿಕೆ ಸಮಸ್ಯೆಯನ್ನು ಕೆಐಎಡಿಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮನ್ವಯತೆದಿಂದ ಪರಿಹರಿಸಬೇಕು. ಯಾದಗಿರಿ ರೈಲ್ವೆ ನಿಲ್ದಾಣ ಕಾಮಗಾರಿಗಳು ಚುರುಕುಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಶುಪಾಲನೆ ಇಲಾಖೆಯಿಂದ ಸರ್ಕಾರದ ನಿಯಮಾವಳಿಗಳ ಅನ್ವಯ ಅವಶ್ಯಕ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನಬದ್ಧವಾಗಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ವಿಪುಲ ಅವಕಾಶಗಳಿವೆ. ಅವಶ್ಯಕ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಜಿಲ್ಲೆಯಲ್ಲಿ ತಾಯಿ-ಶಿಶುಮರಣ ಪ್ರಮಾಣ ಹೆಚ್ಚಲು ಕಾರಣ, ರೈಲ್ವೆ ಬೋಗಿ ಕಾರ್ಖಾನೆಗೆ ನೀರು, ವಿದ್ಯುತ್ ಪೂರೈಕೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ಅಕ್ಕ ಕೆಫೆ ಹಾಗೂ ಇಂದಿರಾ ಕಾಂಟೀನ್‌ಗಳಿಗೆ ಸ್ಥಳ ಗುರುತಿಸುವ ಮುನ್ನ ಆಯಾ ಶಾಸಕರ ಗಮನಕ್ಕೆ ತರಲು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಂಸದರ ಗಮನಕ್ಕೆ ತಂದರು.
ಜಿಲ್ಲೆಯ ಯಾದಗಿರಿ ಬೈಪಾಸ್ ರಸ್ತೆ, ಶಹಾಪುರ ಬೈಪಾಸ್ ರಸ್ತೆ, ರಾಮಸಮುದ್ರ ಹತ್ತಿರದಿಂದ ಗುರುಮಠಕಲ್- ಹೈದರಾಬಾದ್ ರಸ್ತೆ, ಸೂರತ್- ಚೆನ್ನೈ ರಸ್ತೆಗಳ ವ್ಯಾಪ್ತಿಯ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮಸ್ಯೆ ಪರಿಹರಿಸಬೇಕು. ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು ಎಂದರು.
ಸಂಸದ ಕುಮಾರ ನಾಯಕ ಮಾತನಾಡಿ, ಅಧಿಕಾರಿಗಳ ಕಾರ್ಯವೈಖರಿ, ಮಾಹಿತಿ, ಬಳಸುವ ಭಾಷೆ ಬಗ್ಗೆ ಸೂಚ್ಯವಾಗಿ ತಿವಿದರು. ‘ಮುಂದಿನ ಸಭೆಗೆ ಎಲ್ಲವೂ ಸರಿಪಡಿಸಿಕೊಂಡು, ಅಪ್‌ಡೇಟ್ ಆಗಿ ಬನ್ನಿ’ ಎಂದರು.
ಜಲಜೀವನ್ ಮಿಷನ್, ಶಾಲಾ ಶಿಕ್ಷಣ ಇಲಾಖೆ, ನರೇಗಾ, ಪಶು ಇಲಾಖೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆಯೇ ವಿವಿಧ ಇಲಾಖೆಗಳ ಪ್ರಗತಿ ಕುರಿತು ಅಧಿಕಾರಿಗಳು ಹೇಳಿದಾಗ ಶಾಸಕರು, ಎಲ್ಲದಕ್ಕೂ ವಿವರಣೆಯೊಂದಿಗೆ ಪರಿಹಾರ ಸೂಚಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಬೋಗಿ ಕಾರ್ಖಾನೆಗೆ ನೀರು, ವಿದ್ಯುತ್ ಸಮಸ್ಯೆ, ಜಲಜೀವನ್ ಮಿಷನ್ ಅಡಿಯ ಸಮಸ್ಯೆ ಪರಿಹರಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.
ಸುರಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಬಹುತೇಕ ಇಲಾಖೆಗಳ ಕಾಮಗಾರಿಗಳು ಸರಿಯಾಗಿ ಆಗುತ್ತಿಲ್ಲ. ಅದರಲ್ಲೂ ಜೆಜೆಎಂ ಕಾಮಗಾರಿ ಕಳಪೆಯಿಂದ ಕೂಡಿದೆ-ರಾಜಾ ವೇಣುಗೋಪಾಲ ನಾಯಕ, ಶಾಸಕ
ಜಿಲ್ಲೆ ಸೇರಿದಂತೆಯೇ ರಾಜ್ಯದ ಬಹುತೇಕ ಎಲ್ಲೆಡೆ ಹಾವು ಮತ್ತು ನಾಯಿ ಕಡಿತಕ್ಕೆ ಔಷಧವೇ ಇಲ್ಲ. ಇದು ಗಂಭೀರ ಸಮಸ್ಯೆ ಇದೆ. ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು-ಶರಣಗೌಡ ಕಂದಕೂರ, ಗುರುಮಠಕಲ್ ಶಾಸಕ
ಜಿಲ್ಲೆಯಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಸರ್ಕಾರದ ಕಾರ್ಯಕ್ರಮಗಳು ಅನುಷ್ಠಾನಗೊಂಡು ಜನರನ್ನು ತಲುಪುವುದಿಲ್ಲ- ಜಿ.ಕುಮಾರ ನಾಯಕ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.