ADVERTISEMENT

ಯಾದಗಿರಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಕೋಟ್ಯಂತರ ಅವ್ಯವಹಾರ: ಆರೋಪ

ಅಧಿಕಾರಿಗಳ ವಿರುದ್ಧ ಡಾ.ಸೂರ್ಯಪ್ರಕಾಶ ಕಂದಕೂರ ಆರೋಪ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 16:33 IST
Last Updated 21 ಆಗಸ್ಟ್ 2021, 16:33 IST
ಡಾ.ಸೂರ್ಯಪ್ರಕಾಶ ಕಂದಕೂರ
ಡಾ.ಸೂರ್ಯಪ್ರಕಾಶ ಕಂದಕೂರ   

ಯಾದಗಿರಿ: ‘ಜಿಲ್ಲಾ ಆರೋಗ್ಯಧಿಕಾರಿ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ, ಜಿಲ್ಲಾ ಮಲೇರಿಯಾ ಅಧಿಕಾರಿ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದು, ಕೂಡಲೇ ಇವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು’ ಎಂದು ಡಾ.ಸೂರ್ಯಪ್ರಕಾಶ ಕಂದಕೂರ ಆಗ್ರಹಿಸಿದರು.

‘ನಾನು ಇದೇ ಜಿಲ್ಲೆಯವನಾಗಿದ್ದರಿಂದ ಕಳಕಳಿಯಿಂದ ಈ ಮಾತು ಹೇಳುತ್ತಿದ್ದೇನೆ. ಇವರಿಂದ ಜಿಲ್ಲೆಗೆ ಅನ್ಯಾಯವಾಗಿದ್ದು, ಕೂಡಲೇ ಸಂಬಂಧಿಸಿದವರು ವರ್ಗಾವಣೆ ಮಾಡಿ ಜಿಲ್ಲೆಯಲ್ಲಿ ಭ್ರಷ್ಟಾಚಾರದಿಂದ ಮುಕ್ತ ಮಾಡಬೇಕು’ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸೇರಿದಂತೆ ಸುಮಾರು 450 ರಿಂದ 500 ಸಿಬ್ಬಂದಿ ಇಪಿಎಫ್‌ ಪ್ರತಿ ತಿಂಗಳು ತುಂಬದೇ ಬಾಕಿ ಉಳಿಸಿಕೊಂಡಿದ್ದರಿಂದ ರಾಯಚೂರಿನ ಪ್ರಾದೇಶಿಕ ಇಪಿಎಫ್‌ ಆಯುಕ್ತರು ₹60.98 ಲಕ್ಷ ದಂಡ ವಿಧಿಸಿದ್ದಾರೆ. ನಾನು ಬಂದ ಮೇಲೆ ಇವರಿಗೆ ಮೊದಲ ಹಂತದಲ್ಲಿ ₹1.22 ಕೋಟಿ ಬಿಡುಗಡೆ ಮಾಡಿದ್ದೇನೆ. ಇದಕ್ಕೆ ಡಿಎಚ್‌ಒ ಅವರು ಶೇ 12ರಷ್ಟು ಕಮಿಷನ್‌ ಕೊಡುವಂತೆ ಒತ್ತಾಯಿಸಿದ್ದಾರೆ. ನಾನು ಕೊಡಲು ಒಪ್ಪದಿದ್ದರೆ ನನ್ನ ಮೇಲೆ ಇಲ್ಲದ ಸಲ್ಲದ ಆರೋಪಗಳನ್ನು ಮಾಡಿ ರಜೆಯಲ್ಲಿದ್ದಾಗ ಆರ್‌ಸಿಎಚ್‌ಒ ಹುದ್ದೆಯಿಂದ ಬದಲಾಯಿಸಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

9 ತಿಂಗಳಿಂದ ವೇತನ ಇಲ್ಲ:‘ಅಧಿಕಾರಿಗಳು ಮೊದಲ ಮತ್ತು ಎರಡನೇ ಹಂತದಲ್ಲಿ ಹಣವನ್ನು ಕೇಳಿದ್ದರು. ನಾನು ಕೊಡದೆ ಇದ್ದ ಕಾರಣ ನನ್ನ ಬಗ್ಗೆ ಸುಳ್ಳು ವರದಿ ಮಾಡಿದ್ದಾರೆ. ಮಾನಸಿಕ, ದೈಹಿಕ, ಆರ್ಥಿಕವಾಗಿ ನನಗೆ ಕಿರುಕುಳ ನೀಡಿದ್ದಾರೆ. ಕಳೆದ 9 ತಿಂಗಳಿಂದ ವೇತನ ತಡೆ ಹಿಡಿದು ನನಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಸಕ್ರಮ ಕಡತಗಳಿಗೆ ಸಹಿ ಹಾಕದೇ ಡಿಎಚ್‌ಒ ಕೊರೊನಾ ಸಂದರ್ಭದಲ್ಲಿ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದ್ದಾರೆ’ ಎಂದರು.

‘ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಕರ್ನಾಟಕ ಲೋಕಾಯುಕ್ತ, ಜಿಲ್ಲೆಯ ಲೋಕಾಯುಕ್ತ, ಎಸಿಬಿ ದೂರು ನೀಡಿದ್ದೇನೆ. ಈ ಅಧಿಕಾರಿಗಳು ಹಣ ದುರುಪಯೋಗ, ಅಧಿಕಾರ ದುರುಪಯೋಗ ಮಾಡಿಕೊಂಡು ಮೇಲ್ಜಾತಿಯ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸುತ್ತೇನೆ ಎಂದು ಕೆಲವು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಸೇರಿಕೊಂಡು ಗುಂಡಾವರ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೂಡಲೇ ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

‘ಡಾ.ಲಕ್ಷ್ಮೀಕಾಂತ ಇನ್‌ ಸರ್ವಿಸ್‌ನಲ್ಲಿ ಪ್ಯಾಥಲಾಜಿ ಪಡೆದಿದ್ದು, ಇವರ ಸೇವೆ ಜಿಲ್ಲಾಸ್ಪತ್ರೆಯ ಪ್ರಯೋಗಶಾಲೆಯಲ್ಲಿ ಅವಶ್ಯವಿದೆ. ಆದರೆ, ಕಾರ್ಯಕ್ರಮ ಅಧಿಕಾರಿಯಾಗಿ ನಿರ್ವಹಿಸುತ್ತಿದ್ದು, ಜನರಿಗೆ ಸೇವೆ ವಂಚಿತವಾಗಿದೆ. ಎನ್‌ಎಚ್‌ಎಂ ಸಿಬ್ಬಂದಿ ವೇತನ ಪಡೆಯಲು ಹಣ ನೀಡಿದರೆ ಮಾತ್ರ ವೇತನ ನೀಡುವಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕಡತಗಳನ್ನು ನಾಪತ್ತೆ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ’ ಒತ್ತಾಯಿಸಿದರು.

‘ಡಾ.ಸಾಜೀದ್‌ ಅವರು ಹಣ ತೆಗೆದುಕೊಂಡು ಎಂಎಲ್‌ಎಚ್‌ಪಿ ಸಿಬ್ಬಂದಿಯ ವೇತನ ಪಾವತಿಸುತ್ತಾರೆ. ಇದರಿಂದ ಎಂಎಲ್‌ಎಚ್‌ಪಿಗಳು ಸರಿಯಾಗಿ ಕೆಲಸ ಮಾಡದೆ ಬೇಜಬ್ದಾರಿತನ ತೋರುತ್ತಾರೆ. ಕೂಡಲೇ ಮೂರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸರ್ಕಾರಿ ಹುದ್ದೆಯಲ್ಲಿ ಇದ್ದುಕೊಂಡೆ ತಮ್ಮ ಮೇಲಾಧಿಕಾರಿಗಳ ವಿರುದ್ಧ ಮಾಧ್ಯಮಗಳ ಎದುರು ಬಂದಿರುವುದು ಹಲವರಿಗೆ ಸೋಜಿಗವಾಗಿದೆ.

//ಮೂರು ಕೋಟ್‌ಗಳಿವೆ//

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.