ADVERTISEMENT

ಶಹಾಪುರ | ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡದ ಸಚಿವ: ಶಾಸಕ ಶರಣಬಸಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:31 IST
Last Updated 25 ನವೆಂಬರ್ 2021, 16:31 IST
ಶರಣಬಸಪ್ಪ ದರ್ಶನಾಪುರ
ಶರಣಬಸಪ್ಪ ದರ್ಶನಾಪುರ   

ಶಹಾಪುರ: ‘ಅಕಾಲಿಕ ಮಳೆಯಿಂದ ಕೊಯ್ಲಿಗೆ ಬಂದಿದ್ದ ಭತ್ತ ನೆಲಕ್ಕುರುಳಿದೆ. ಹತ್ತಿ, ಮೆಣಸಿನಕಾಯಿ ಬೆಳೆಗೆ ಹಾನಿ ಆಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಗೆ ಒಬ್ಬ ಸಚಿವರು ಇಲ್ಲವೆ ಹಿರಿಯ ಅಧಿಕಾರಿಗಳು ಇಂದಿಗೂ ಭೇಟಿ ನೀಡದೆ ಸರ್ಕಾರ ರೈತರ ಬಗ್ಗೆ ನಿಷ್ಕಾಳಜಿ ತೋರಿಸುತ್ತಿದೆ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಆರೋಪಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸಕ್ತ ವರ್ಷ ವಾಡಿಕೆಗಿಂತ ಶೇ 72ರಷ್ಟು ಹೆಚ್ಚು ಮಳೆ ಹಾನಿಯಾಗಿದೆ. ಬೆಳೆ ಹಾನಿ ಪರಿಶೀಲನೆಗೆ ಒಂದು ತಂಡವೂ ಬಂದಿಲ್ಲ. ಮಳೆಯಿಂದ ಮನೆ, ಬೆಳೆ ಕಳೆದುಕೊಂಡ ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು’ ಎಂದು ಟೀಕಿಸಿದರು.

‘ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ಮೂಲಕ ಹಿಂಗಾರು ಬೆಳೆಗೆ ಮಾ.17ವರೆಗೆ ನೀರು ಹರಿಸುವ ನಿರ್ಣವನ್ನು ನೀರಾವರಿ ಸಲಹಾ ಸಮಿತಿ ತೆಗೆದುಕೊಂಡಿರುವುದು ಸರಿಯಲ್ಲ. ಕೊನೆ ಪಕ್ಷ ಮಾ.30ವರೆಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಕೈಗಾರಿಕೆ ನೀರು ಹರಿಸುವ ಮೊದಲು ರೈತ ಬೆಳೆಗೆ ಹೆಚ್ಚು ನೀರು ಕೊಡಿ’ ಎಂದರು.

ADVERTISEMENT

ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಕಳೆದ ಆರು ವರ್ಷದಿಂದ ಅಧಿಕಾರ ಅನುಭವಿಸಿದ ಬಿಜೆಪಿ ಅಭ್ಯರ್ಥಿ ಒಂದು ಸಲವು ಗ್ರಾಮ ಪಂಚಾಯಿತಿ ಸಮಸ್ಯೆಗಳ ಬಗ್ಗೆ ಸ್ಪಂದಿಸಲಿಲ್ಲ. ಶಾಸಕ ನಿಧಿಯನ್ನು ಕೇವಲ, ಮಂದಿರ, ಸಮುದಾಯ ಭವನ ಮುಂತಾದವುಗಳಿಗೆ ನೀಡಿದರು. ಆದರೆ ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಅನುದಾನ ಒದಗಿಸಲಿಲ್ಲ ಎಂದು ಅವರು ತಿಳಿಸಿದರು.

ಸದನದಲ್ಲಿ ಒಮ್ಮೆಯು ಸ್ಥಳೀಯ ಸಂಸ್ಥೆಯ ಸಮಸ್ಯೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಶಹಾಪುರ ಮತಕ್ಷೇತ್ರದಲ್ಲಿ 27 ಗ್ರಾಮ ಪಂಚಾಯಿತಿ, ನಗರ ಸಭೆ ಹೀಗೆ ಒಟ್ಟು 347 ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಮತವು ಕಾಂಗ್ರೆಸ್ ಅಭ್ಯರ್ಥಿಗೆ ಲಭಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.