ADVERTISEMENT

ಮೂಲಸೌಕರ್ಯಗಳ ಪೂರೈಕೆಗೆ ಸೂಚನೆ: ಶಾಸಕ ತುನ್ನೂರು

ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 8:10 IST
Last Updated 25 ಫೆಬ್ರುವರಿ 2026, 8:10 IST
ಯಾದಗಿರಿ ನಗರದ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ(ಯುಡಾ)ದ ಕಚೇರಿಯಲ್ಲಿ ಮಂಗಳವಾರ ನಗರಾಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು
ಯಾದಗಿರಿ ನಗರದ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ(ಯುಡಾ)ದ ಕಚೇರಿಯಲ್ಲಿ ಮಂಗಳವಾರ ನಗರಾಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು   

ಯಾದಗಿರಿ: ‘ಸದ್ಯ ನಮ್ಮದು ಬೆಳೆಯುತ್ತಿರುವ ನಗರವಾದ್ದರಿಂದ ಹೊಸ ಬಡಾವಣೆಗಳು ಹೆಚ್ಚುತ್ತಿವೆ. ಎಲ್ಲಾ ಬಡಾವಣೆಗಳಲ್ಲೂ ಕಡ್ಡಾಯವಾಗಿ ಮೂಲ ಸೌಕರ್ಯಗಳ ಕಲ್ಪಿಸುವಂತೆ ಲೇಔಟ್‌ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಜರುಗಿದ ನಗರಾಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಾರಣ ತಿಳಿಸದೆ ಮತ್ತು ಪೂರ್ವಾನುಮತಿಯಿಲ್ಲದೆ ಸಭೆಗೆ ಗೈರಾದವರಿಗೆ ಶೋಕಾಸ್ ನೋಟೀಸ್ ನೀಡುವಂತೆ ತಾಕೀತು ಮಾಡಿದರು.

‘ಪ್ರಾಧಿಕಾರದಲ್ಲಿ 1980ರಿಂದ ವಿವಿಧ ಬಡಾವಣೆಗಳು, ಲೇಔಟ್‌ಗಳ ದಾಖಲೆಗಳಿವೆ. ಆ ದಾಖಲೆಗಳು ಸಕಾಲಕ್ಕೆ ಸುಲಭವಾಗಿ ಸಿಗುವಂತಾಗಲು ಅಧಿಕಾರಿಗಳು ಕೂಡಲೇ  ದಾಖಲೆಗಳನ್ನು ಡಿಜಟಲೀಕರಣ ಆರಂಭಿಸಬೇಕು’ ಎಂದರು.

ADVERTISEMENT

ಸಭೆಯಲ್ಲಿ, ಹೊಸ ಬಡಾವಣೆಗಳ ನಿರ್ಮಾಣದ ಅನುಮತಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಸದಸ್ಯರು, ಆಯುಕ್ತರು ಮತ್ತು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿದ ನಂತರ ತಾತ್ಕಾಲಿಕ ಮತ್ತು ಅಂತಿಮ ಅನುಮೋದನೆ ನೀಡಲಾಯಿತು.

ಯೂಡಾ ಆಯುಕ್ತ ಉಮೇಶ ಚವ್ಹಾಣ್ ಮಾತನಾಡಿ, ಡಿಜಿಟಲೀಕರಣಕ್ಕೆ ಕನಿಷ್ಟ 5 ರಿಂದ 6 ತಿಂಗಳ ಸಮಯಾವಕಾಶ ಅವಶ್ಯವೆಂದು ತಿಳಿಸದ್ದಕ್ಕೆ, ತಿಂಗಳಲ್ಲಿ ಕಾರ್ಯ ಪೂರ್ಣಗೊಳಿಸುವಂತೆ ಶಾಸಕ ತುನ್ನೂರು ಹೇಳಿದರು.

2025ರ ಅಕ್ಟೋಬರ್ 10ರಂದು ಜರುಗಿದ ಸಭೆಯ ನಡುವಳಿಗಳ ಕಾರ್ಯಗತಗೊಳಿಸುವ, 2026-27ನೇ ಸಾಲಿನ ಬಜೆಟ್ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಲು ನಿರ್ಧರಿಸಲಾಯಿತು.

ಕರ್ನಾಟಕಮುನ್ಸಿಪಲ್ ಡಾಟಾ ಸೊಸೈಟಿಯ ವಾರ್ಷಿಕ ವಂತಿಕೆ ಮತ್ತು ಸದಸ್ಯತ್ವ ಶುಲ್ಕ ಪಾವತಿ ಕುರಿತು, ನಗರ ಮತ್ತು ತಾಲ್ಲೂಕು ಯುಡಾ ವ್ಯಾಪ್ತಿಯ 17 ಪ್ರದೇಶಗಳಲ್ಲಿನ ಜಮೀನುಗಳನ್ನು ವಸತಿ ಸೇರಿದಂತೆ ಇತರೆ ಉದ್ದೇಶದ ಬಳಕೆಗೆ ಪರವಾನಿಗೆಗೆ ಸಲ್ಲಿಕೆಯಾದ ಅರ್ಜಿಗಳ ಕುರಿತು ಚರ್ಚಿಸಲಾಯಿತು.

ಯುಡಾ ಸದಸ್ಯರಾದ ವಿಶ್ವನಾಥ ಕೋರಿ, ಭೀಮಬಾಯಿ ವಿಶ್ವನಾಥ, ಖಾಜಾ ಕಲಿಂಉದ್ದಿನ್ ಜೈನಾ, ಮಂಜುನಾಥ ಮಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ, ಟಿಪಿಎಂ ಶರಣಪ್ಪ ಸೇರಿದಂತೆ ಜೆಸ್ಕಾಂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.