ಗುರುಮಠಕಲ್ (ಯಾದಗಿರಿ ಜಿಲ್ಲೆ): ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮದ ಪ್ರಚಾರ ಪತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ‘ಹಸ್ತ’ದ ಗುರುತಿನ ಚಿಹ್ನೆಯನ್ನು ತೆಗೆಯಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಗುರುವಾರ ಪತ್ರ ಬರೆದಿದ್ದಾರೆ.
‘ಡಿಜಿಟಲೀಕರಣ ಕಾರ್ಯಕ್ರಮದ ಭಿತ್ತಿ ಪತ್ರದಲ್ಲಿ ಹಸ್ತ ಚಿಹ್ನೆಯ ಬೆರಳುಗಳಲ್ಲಿ ಕಾರ್ಯಕ್ರಮದ ಐದು ವಿಶೇಷತೆಗಳನ್ನು ವಿವರಿಸಲಾಗಿದೆ. ಇದು ಪಕ್ಷದ ಪ್ರಚಾರದಂತೆ ಕಾಣುತ್ತಿರುವುದಕ್ಕೆ ನನ್ನ ಆಕ್ಷೇಪವಿದೆ. ಸರ್ಕಾರದ ಕಾರ್ಯಕ್ರಮಗಳು ಒಂದು ಪಕ್ಷಕ್ಕೆ ಸೀಮಿತವಾಗಬಾರದು. ಆದ್ದರಿಂದ ಕಾರ್ಯಕ್ರಮದ ಭಿತ್ತಿ ಪತ್ರಗಳಲ್ಲಿರುವ ಹಸ್ತದ ಚಿಹ್ನೆಯನ್ನು ತೆಗೆಯಬೇಕು’ ಎಂದು ಕಂದಕೂರ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ಕಂದಾಯ ಇಲಾಖೆಯ ದಾಖಲೆಗಳು, ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ಸರ್ಕಾರ ಮುಂದಾಗಿದ್ದಕ್ಕೆ ಸ್ವಾಗತವಿದೆ. ಆದರೆ, ಈ ಕಾರ್ಯಕ್ಕೆ ಬಳಸುತ್ತಿರುವ ಚಿಹ್ನೆಯು ಕಾಂಗ್ರೆಸ್ ಪಕ್ಷದ ಚಿಹ್ನೆಯಂತೆ ಕಾಣುತ್ತಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಬಳಸಿರುವ ಚಿಹ್ನೆಗೆ ವಿರೋಧವಿದೆ’ ಎಂದು ಗುರುವಾರ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಾಸಕರು ಹೇಳಿದರು.
ಶರಣಗೌಡ ಕಂದಕೂರ ಅವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.