ADVERTISEMENT

ಆಧುನಿಕ ಕೃಷಿ ಉಪಕರಣ ಬಳಸಿ: ರಾಜಕುಮಾರ

ಕೃಷಿ ಉತ್ಸವ, ವಸ್ತುಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:20 IST
Last Updated 22 ನವೆಂಬರ್ 2025, 6:20 IST
ಯಾದಗಿರಿ ತಾಲ್ಲೂಕಿನ ಮೈಲಾಪುರದಲ್ಲಿ ಶುಕ್ರವಾರ ನಡೆದ ಕೃಷಿ ಉತ್ಸವದಲ್ಲಿ ಸಹ ಪ್ರಾಧ್ಯಾಪಕ ಶ್ಯಾಮರಾವ್ ಕುಲಕರ್ಣಿ ಮಾತನಾಡಿದರು 
ಯಾದಗಿರಿ ತಾಲ್ಲೂಕಿನ ಮೈಲಾಪುರದಲ್ಲಿ ಶುಕ್ರವಾರ ನಡೆದ ಕೃಷಿ ಉತ್ಸವದಲ್ಲಿ ಸಹ ಪ್ರಾಧ್ಯಾಪಕ ಶ್ಯಾಮರಾವ್ ಕುಲಕರ್ಣಿ ಮಾತನಾಡಿದರು    

ಯಾದಗಿರಿ: ‘ರೈತರು ಕೃಷಿ ಸಂಬಂಧಿತ ನೂತನ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು ಅವುಗಳನ್ನು ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ಹೇಳಿದರು.

ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ಶುಕ್ರವಾರ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ‘ಕೃಷಿ ಉತ್ಸವ’ ಹಾಗೂ ‘ಕೃಷಿ ವಸ್ತುಪ್ರದರ್ಶನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೊಸ ಬಗೆಯ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು ಕೃಷಿ ಮಾಡಬೇಕು. ಒಂದೇ ಬೆಳೆಯನ್ನು ಬೆಳೆಯುವ ಬದಲು ಮಿಶ್ರ ಬೆಳೆಗಳನ್ನು ಬೆಳೆದರು ಉತ್ತಮ ಆದಾಯ ಗಳಿಸಬಹುದು. ಬೆಳೆದ ಬೆಳೆಯನ್ನು ನೇರವಾಗಿ ಮಾರುಕಟ್ಟೆಗೆ ಮಾರಾಟ ಮಾಡಬಾರದು. ಅದಕ್ಕೆ ಮೌಲ್ಯ ವರ್ಧನೆ ಸೇರ್ಪಡೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು’ ಎಂದು ಸಲಹೆ ನೀಡಿದರು.

ADVERTISEMENT

‘ಮಣ್ಣಿನ ಗುಣಮಟ್ಟ ಮತ್ತು ಫಲವತ್ತತೆ ಬೆಳೆ ಉತ್ಪಾದನೆಗೆ ಆಧಾರಸ್ತಂಭವಾಗಿದೆ. ಮಣ್ಣು ಆರೋಗ್ಯವಾಗಿ ಇದ್ದರೆ ಇಳುವರಿ ಉತ್ತಮವಾಗಿ ಬರುತ್ತದೆ. ಮಣ್ಣಿನ ಪೋಷಕಾಂಶದ ಸಂರಕ್ಷಣೆಗೆ ಆದ್ಯತೆ ಕೊಡುವುದು ಅವಶ್ಯ’ ಎಂದರು.

‘ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ಕಾಡುತ್ತಿದೆ. ತಂತ್ರಜ್ಞಾನ, ಯಂತ್ರೋಪಕರಣಗಳ ಬಳಕೆಯಿಂದ ಕೂಲಿಕಾರರ ಕೊರತೆ ದೂರಾಗಲಿದೆ. ಬಿತ್ತನೆ, ಔಷಧಿ ಸಿಂಪರಣೆ, ಬೆಳೆಗಳಿಗೆ ರಸಗೊಬ್ಬರ ನೀಡುವಂತಹ ಡ್ರೋನ್‌ಗಳು ಬಳಕೆಯಲ್ಲಿವೆ’ ಎಂದು ಹೇಳಿದರು.

ಕೃಷಿ ಮಹಾವಿದ್ಯಾಲಯದ ಡೀನ್ ಶ್ಯಾಮರಾವ್ ಜಹಗಿರದಾರ್ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಕೃಷಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ಸು ಸಾಧಿಸಬಹುದು’ ಎಂದರು.

ಸಹ ಪ್ರಾಧ್ಯಾಪಕ ಶ್ಯಾಮರಾವ್ ಕುಲಕರ್ಣಿ ಮಾತನಾಡಿ, ‘ಇಂತಹ ಕೃಷಿ ವಸ್ತು ಪ್ರದರ್ಶನದಿಂದ ಆಧುನಿಕ ಕೃಷಿ ತಂತ್ರಜ್ಞಾನಗಳು ರೈತರಿಗೆ ಪರಿಚಯವಾಗಿ, ನಿತ್ಯದ ಕಾರ್ಯದಲ್ಲಿ ಸಹಕಾರಿ ಆಗುತ್ತವೆ. ಹೊಸ ಬಗೆಯ ಕೃಷಿ ಪದ್ಧತಿ ಬಗ್ಗೆಯೂ ಅರಿವು ಮೂಡುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಶರಣಪ್ಪ ಪೂಜಾರ, ಗಿರಿ ಮಲ್ಲಪ್ಪ ಪೂಜಾರ, ಗ್ರಾಮ ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಿ.ಕೆ., ಪಂಚಾಯಿತಿ ಉಪಾಧ್ಯಕ್ಷ ನಾಗಣ್ಣಗೌಡ, ಬಿಜೆಪಿ ಮುಖಂಡ ಶ್ರೀಧರ ಸಾಹುಕಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಾತ್ಯಕ್ಷಿಕೆ ಮುಖೇನ ಮಾಹಿತಿ  

ಸಮಗ್ರ ಕೃಷಿ ಪದ್ಧತಿ ಸಮಗ್ರ ಕೀಟ ನಿರ್ವಹಣೆ ಸಮಗ್ರ ರೋಗ ನಿರ್ವಹಣೆ ಸಮಗ್ರ ಕಳೆ ನಿರ್ವಹಣೆ ಭತ್ತದಲ್ಲಿ ಆಧನಿಕ ಪದ್ಧತಿಗಳ ಅಳವಡಿಸಿ ಸಾವಯವ ಕೃಷಿ ಅರಣ್ಯ ಕೃಷಿ ಹೈ ಟೆಕ್ ತೋಟಗಾರಿಕೆ ರೇಷ್ಮೆ ಹುಳು ಸಾಕಾಣಿಕೆ ಜಲನಯನ ನಿರ್ವಹಣೆ ಮಣ್ಣಿನ ಹೊದಿಕೆ ಸೇರಿದಂತೆ ಇತರೆ ಕೃಷಿ ಚಟುವಟಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ರೈತರು ಹಾಗೂ ವಿದ್ಯಾರ್ಥಿಗಳಿ ಮಾಹಿತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.