ವಡಗೇರಾ: ಪಟ್ಟಣದಲ್ಲಿರುವ ಮೊರಾರ್ಜಿ ವಸತಿ ಶಾಲೆ ಪೂರ್ಣ ಕಾಂಪೌಂಡ್, ರಸ್ತೆ, ಒಳ ಚರಂಡಿ ಸೇರಿದಂತೆ ಸಮಸ್ಯೆಗಳಿಂದ ಬಳಲುತ್ತಿದೆ.
2010-11ನೇ ಸಾಲಿನಲ್ಲಿ ಪಟ್ಟಣದಲ್ಲಿ ಮೊರಾರ್ಜಿ ವಸತಿ ಶಾಲೆಯನ್ನು ಆರಂಭಿಸಲಾಗಿದೆ. ಈ ಶಾಲೆಯಲ್ಲಿ 6ನೇಯ ತರಗತಿಯಿಂದ 10ನೇಯ ತರಗತಿಯವರೆಗೆ 228 ವಿದ್ಯಾರ್ಥಿಗಳು ಇದ್ದಾರೆ.
12 ಜನ ಕಾಯಂ ಶಿಕ್ಷಕರು, ಒಬ್ಬರು ಅತಿಥಿ ಶಿಕ್ಷಕರು, 11 ಜನ ಹೊರಗುತ್ತಿಗೆ ಆಧಾರದ ಮೇಲೆ ಅಡುಗೆಯವರು ಹಾಗೂ ಇನ್ನಿತರರು ಕೆಲಸ ನಿರ್ವಹಿಸುತ್ತಿದ್ದಾರೆ.
ಸೋಲಾರ್ ವಾಟರ್ ಹೀಟರ್ ಇಲ್ಲ: ಶಾಲೆ ಅರಂಭವಾಗಿ 15 ವರ್ಷಗಳು ಗತಿಸುತ್ತಾ ಬಂದರೂ ಇಲ್ಲಿಯವರೆಗೂ ಸೋಲಾರ್ ವಾಟರ್ ಹೀಟರ್ ಅಳವಡಿಸದೆ ಇರುವುದರಿಂದ ವಸತಿ ಶಾಲೆಯ ಮಕ್ಕಳು ಯಾವುದೇ ಕಾಲವಿರಲಿ ತಣ್ಣಿರಿನಲ್ಲಿಯೇ ಸ್ನಾನ ಮಾಡಬೇಕು. ಸೋಲಾರ್ ವಾಟರ್ ಹಿಟರ್ ಅಳವಡಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಮರೀಚಿಕೆಯಾಗಿದ್ದ ಕಂಪ್ಯೂಟರ್ : ಕಳೆದ 15 ವರ್ಷಗಳ ಹಿಂದೆ ಈ ವಸತಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ನಿರ್ಮಿಸಲಾಗಿದೆ. ಕಂಪ್ಯೂಟರ್ ಶಿಕ್ಷಕರೂ ಇದ್ದಾರೆ. ಆದರೆ ಕಂಪ್ಯೂಟರ್‌ಗಳೇ ಇರಲಿಲ್ಲ. ಕಳೆದ 15 ದಿನಗಳ ಹಿಂದಷ್ಟೇ ತಾಲ್ಲೂಕು ಪಂಚಾಯಿತಿ ವತಿಯಿಂದ 8 ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ.
ಶಿಕ್ಷಕರ ವಸತಿ ಕೋಣೆಗಳು ಇಲ್ಲ: ಸರ್ಕಾರದ ನಿಯಮದ ಪ್ರಕಾರ ಎಲ್ಲಿ ವಸತಿ ಶಾಲೆ ಇರುತ್ತದೆಯೋ ಅಲ್ಲಿ ಕಡ್ಡಾಯವಾಗಿ ಶಿಕ್ಷಕರ ವಸತಿ ಕೋಣೆಗಳು ಇರಬೇಕು. ಆದರೆ ಈ ಶಾಲೆಯಲ್ಲಿ ವಸತಿ ಕೋಣೆಗಳು ಇಲ್ಲದೆ ಇರುವುದರಿಂದ ಶಿಕ್ಷಕರು ವಸತಿ ಶಾಲೆಯಲ್ಲಿ ಇರುವುದಿಲ್ಲ. ಸಂಜೆಯಾದರೆ ತಮ್ಮ ಮನೆಗಳಿಗೆ ತೆರಳುತ್ತಾರೆ.
ವಸತಿ ಕೋಣೆಗಳು ಇದ್ದರೆ ಶಿಕ್ಷಕರು ದಿನದ 24 ಗಂಟೆಗಳು ಶಾಲೆಯಲ್ಲಿಯೇ ಇದ್ದು ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದರು. ವಸತಿ ಶಾಲೆಗೆ ಎಲ್ಲಾ ಮೂಲಸೌಕರ್ಯ ಒದಗಿಸಿ ಕೊಟ್ಟರೆ ಇದೊಂದು ಮಾದರಿ ಶಾಲೆ ಆಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಕಳೆದ 15 ದಿನಗಳ ಹಿಂದೆ ತಾಲ್ಲೂಕು ಪಂಚಾಯಿತಿ ವತಿಯಿಂದ 8 ಕಂಪ್ಯೂಟರ್ ಗಳನ್ನು ಒದಗಿಸಿದ್ದಾರೆ. ಕನಿಷ್ಠ 25 ಕಂಪ್ಯೂಟರ್‌ಗಳು ಬೇಕು.–ಶಾಂತಾ ಸಜ್ಜನ, ಪ್ರಾಂಶುಪಾಲರು
ಹದಿನೈದು ವರ್ಷಗಳ ಹಿಂದೆ ಆರಂಭವಾದ ಮೊರಾರ್ಜಿ ವಸತಿ ಶಾಲೆಗೆ ಮೂಲ ಸೌಕರ್ಯ ಒದಗಿಸದೇ ಇರುವದು ದುರದೃಷ್ಟಕರ. ಕೂಡಲೇ ಸೌಕರ್ಯ ಒದಗಿಸಬೇಕು.–ಶಿವಕುಮಾರ ಕೊಂಕಲ್, ಬಿಜೆಪಿ ಯುವಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.