ADVERTISEMENT

ಸಂಸದ ಆದರ್ಶ ಗ್ರಾಮ: ಕೊಳ್ಳೂರು (ಎಂ) ಗ್ರಾಮ ಪಂಚಾಯಿತಿಗೆ ಡಿಎಸ್‌ ಭೇಟಿ

ಕೊಳ್ಳೂರು (ಎಂ) ಗ್ರಾಮ ಪಂಚಾಯಿತಿಗೆ ಡಿಎಸ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 3:54 IST
Last Updated 27 ನವೆಂಬರ್ 2020, 3:54 IST
ಯಾದಗಿರಿ ವಿಧಾನಸಭಾ ಕ್ಷೇತ್ರದ ಕೊಳ್ಳೂರು (ಎಂ) ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು
ಯಾದಗಿರಿ ವಿಧಾನಸಭಾ ಕ್ಷೇತ್ರದ ಕೊಳ್ಳೂರು (ಎಂ) ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು   

ಯಾದಗಿರಿ: ಜಿಲ್ಲೆಯ 2020-21ನೇ ಸಾಲಿನ ಸಂಸದ ಆದರ್ಶ ಗ್ರಾಮವಾಗಿ ಆಯ್ಕೆಯಾಗಿರುವ ಯಾದಗಿರಿ ವಿಧಾನಸಭಾ ಕ್ಷೇತ್ರದ (ಶಹಾಪುರ ತಾಲ್ಲೂಕು) ಕೊಳ್ಳೂರು (ಎಂ) ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪೂರ್ವಭಾವಿಯಾಗಿ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಕೊಳ್ಳೂರು (ಎಂ) ಗ್ರಾಮ ಪಂಚಾಯಿತಿಯು ನಾಲ್ಕು ಗ್ರಾಮಗಳನ್ನೊಳಗೊಂಡ ಗ್ರಾಮ ಪಂಚಾಯಿತಿ ಆಗಿದ್ದು, ಈ ನಾಲ್ಕು ಗ್ರಾಮಗಳನ್ನೊಳಗೊಂಡಂತೆ ‘ಸಂಸದರ ಆದರ್ಶ ಗ್ರಾಮ ಪಂಚಾಯಿತಿ’ ಅನುಷ್ಠಾನಗೊಳಿಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ನಾಲ್ಕು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಬೇಕಾದ ಕಾಮಗಾರಿಗಳು, ಯೋಜನೆಗಳನ್ನು ಗ್ರಾಮಸ್ಥರ ಸಮ್ಮಖದಲ್ಲಿ ಸಾಮಾಜಿಕ ನಕ್ಷೆಯ ಮೂಲಕ ಗುರುತಿಸಿ, ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಪಿಡಿಒ ಅವರಿಗೆ ಸೂಚಿಸಲಾಯಿತು.

ಇಲಾಖಾವಾರು ಕಾಮಗಾರಿಗಳನ್ನು ಗುರುತಿಸಿ, ಆಯಾ ಇಲಾಖೆಗಳ ಅನುದಾನದಡಿ ಸಂಸದ ಆದರ್ಶ ಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿರುವುದರಿಂದ ನಾಲ್ಕು ಗ್ರಾಮಗಳ ಅಭಿವೃದ್ಧಿಗೆ 'ಸಮಗ್ರ ಕ್ರಿಯಾಯೋಜನೆ' ತಯಾರಿಸಲು ಸೂಚಿಸಲಾಯಿತು.

ADVERTISEMENT

ಕೊಳ್ಳೂರು (ಎಂ‌) ಪಿಡಿಒ ಸಿದ್ರಾಮಪ್ಪ ಸಂಸದ ಆದರ್ಶ ಗ್ರಾಮ ಯೋಜನೆಯಡಿ ಮನರೇಗಾ ಮತ್ತಿತರ ಯೋಜನೆಯಡಿ ತೆಗೆದುಕೊಳ್ಳಬಹುದಾದ ಅವಶ್ಯಕ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಜಿಪಂಯ‌ ಯೋಜನಾ ನಿರ್ದೇಶಕ ಗುರುನಾಥ ಗೌಡಪ್ಪನವರ, ಶಹಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಕ ಅಧಿಕಾರಿ ಜಗನ್ನಾಥ ಮೂರ್ತಿ, ಪಂಚಾಯಿತಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.