ಕೆಂಭಾವಿ: ಸಮೀಪದ ಮುದನೂರ (ಬಿ) ಗ್ರಾಮದ ಜನತಾ ಕಾಲೊನಿಯಲ್ಲಿ ಕಾಣಿಸಿಕೊಂಡಿದ್ದ ವಾಂತಿ–ಭೇದಿ ಪ್ರಕರಣ ಮತ್ತಷ್ಟು ಉಲ್ಬಣಗೊಂಡಿದ್ದು, ಶನಿವಾರ ಸಂಜೆವರೆಗೆ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 57 ತಲುಪಿದೆ.
ಶನಿವಾರ ಆರು ಮಕ್ಕಳು ಸೇರಿ 37 ಮಂದಿಗೆ ವಾಂತಿ–ಭೇದಿ ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಈವರೆಗೆ ಒಟ್ಟು 57 ಮಂದಿ ವಾಂತಿ–ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಆರೂ ಮಕ್ಕಳನ್ನು ಶಹಾಪುರ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರಿಗೆ ಕೆಂಭಾವಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
‘ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದ್ದು, ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲೆ ಇದ್ದು ನಿಗಾ ವಹಿಸಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿ.ಪಂ.ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಜಿಲ್ಲಾ ಕಾಲರಾ ಸರ್ವೇಕ್ಷಣಾಧಿಕಾರಿ ಡಾ. ಎಸ್. ಎಚ್. ಪಾಟೀಲ, ಟಿಎಚ್‍ಒ ಡಾ. ಆರ್.ವಿ.ನಾಯಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಆಡಳಿತ ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ, ಡಾ.ಪ್ರಿಯಾಂಕಾ ಪಾಟೀಲ, ಡಾ.ಸಿದ್ದು ನ್ಯಾಮಗೊಂಡ ಸೇರಿ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಹುಣಸಗಿ ಹಾಗೂ ಸುರಪುರ ತಾಲ್ಲೂಕು ಕೇಂದ್ರದ ಆರೋಗ್ಯ ಕೇಂದ್ರದ ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಗ್ರಾಮದಲ್ಲಿ ಬೀಡುಬಿಟ್ಟ ಆರೋಗ್ಯ ಸಿಬ್ಬಂದಿ:
ವಾಂತಿ ಭೇದಿ ಪ್ರಕರಣ ಬೆಳಕಿಗೆ ಬರುತ್ತಲೆ ಮುದನೂರ (ಬಿ) ಗ್ರಾಮದಲ್ಲಿ ಆರೋಗ್ಯ ಇಲಾಖೆ, ನೀರು ಸರಬರಾಜು ಮತ್ತು ನೈರ್ಮಲ್ಯ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು ಜನರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಇದೇ ವೇಳೆ ಗ್ರಾಮದಲ್ಲೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸಿರುವ ಆರೋಗ್ಯ ಇಲಾಖೆ ಪ್ರಕರಣ ಕಂಡು ಬಂದರೆ ಸ್ಥಳದಲ್ಲೆ ಪ್ರಾಥಮಿಕ ಚಿಕಿತ್ಸೆ ನೀಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಡಾ. ಆರ್. ವಿ. ನಾಯಕ ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಬಿಜೆಪಿ ಯುವ ಮುಖಂಡ ಹಣಮಂತ ನಾಯಕ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ನಂತರ ಮುದನೂರ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರು ಪೂರೈಕೆ ಸ್ಥಳವನ್ನು ವೀಕ್ಷಣೆ ಮಾಡಿದರು. ವೀರೇಶ ಚಿಂಚೋಳಿ, ಸಂಗಾರೆಡ್ಡಿ ಚೌಧರಿ, ವಿಜಯರೆಡ್ಡಿ ಚೌಧರಿ, ಕೃಷ್ಣಾರೆಡ್ಡಿ ಮುದನೂರ, ವೀರೇಶರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.