
ಶಹಾಪುರ: ‘ನಗರದ ಹೆದ್ದಾರಿ ಅಕ್ಕಪಕ್ಕದಲ್ಲಿ ಚರಂಡಿ ಮೇಲೆ ಅನಧಿಕೃತವಾಗಿ ಡಬ್ಬಾ, ಚಹಾದಂಗಡಿ, ಬಟ್ಟೆ ಅಂಗಡಿ ಸ್ಥಾಪಿಸಿರುವುದು ಕಂಡು ಬಂದಿದೆ. ಮಳೆಗಾಲ ಆರಂಭವಾಗಿದ್ದರಿಂದ ಚರಂಡಿ ಸ್ವಚ್ಛಗೊಳಿಸಲು ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ ಸ್ವಚ್ಛತೆ ಇಲ್ಲವಾಗಿದೆ. ಯಾರೇ ಆಗಲಿ ಅನಧಿಕೃತವಾಗಿ ಸ್ಥಾಪಿಸಿದ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಬೇಕು’ ಎಂದು ಪೌರಾಯುಕ್ತ ರಮೇಶ ಬಡಿಗೇರ ಚರಂಡಿ ಮೇಲೆ ಅನಧಿಕೃತವಾಗಿ ಡಬ್ಬಾ ಅಂಗಡಿ ಸ್ಥಾಪಿಸಿದ ವ್ಯಕ್ತಿಗಳಿಗೆ ತಾಕೀತು ಮಾಡಿದ್ದಾರೆ.
‘ನಗರದ ಕೆ.ಇ.ಬಿಯಿಂದ ಹೊಸ ಬಸ್ ನಿಲ್ದಾಣದ ಹೆದ್ದಾರಿಗೆ ಹೊಂದಿಕೊಂಡು ಚರಂಡಿ ನಿರ್ಮಿಸಲಾಗಿದೆ. ಅದರ ಮೇಲೆ ಡಬ್ಬಾ ಹಾಗೂ ಪಾದಚಾರಿಯ ಸ್ಥಳವನ್ನು ಸಹ ಅತಿಕ್ರಮಿಸಿಕೊಂಡಿರುವುದು ಸರಿಯಲ್ಲ. ಸಾರ್ವಜನಿಕ ಉದ್ದೇಶಕ್ಕಾಗಿ ನಾವು ತೆರವು ಕಾರ್ಯವನ್ನು ಅನಿವಾರ್ಯವಾಗಿ ನಡೆಸಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.
‘ಅಲ್ಲದೆ ನಗರದಲ್ಲಿ ವ್ಯಾಪಾರ ನಡೆಸುವ ವ್ಯಾಪಾರಸ್ಥರು ತಮ್ಮ ಅಂಗಡಿಯ ಪರವಾನಗಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇಲ್ಲದೆ ಹೋದರೆ ನಾವೇ ಪತ್ತೆ ಹಚ್ಚಿ ದಂಡ ವಿಧಿಸಬೇಕಾಗುತ್ತದೆ’ ಎಂದು ಹೇಳಿದರು.
ನಗರಸಭೆಯ ಪರಿಸರ ಎಂಜಿನಿಯರ್ ಹರೀಶ ಸಜ್ಜನಶೆಟ್ಟಿ, ಹಿರಿಯ ಎಂಜಿನಿಯರ್ ನಾನಾ ಸಾಹೇಬ್ ಮಡಿವಾಳಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.