ADVERTISEMENT

ಭೀಮಾ ನೀರು ನಿರ್ವಹಣೆ: ಪುರಸಭೆಗೇ ಇರಲಿ

ಗುರುಮಠಕಲ್‌ ಪುರಸಭೆ: ಸರ್ವ ಸದಸ್ಯರ ತುರ್ತು ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 13:51 IST
Last Updated 9 ಫೆಬ್ರುವರಿ 2021, 13:51 IST
ಗುರುಮಠಕಲ್ ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ ಸರ್ವ ಸದಸ್ಯರ ತುರ್ತು ಸಭೆ ಜರುಗಿತು
ಗುರುಮಠಕಲ್ ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ ಸರ್ವ ಸದಸ್ಯರ ತುರ್ತು ಸಭೆ ಜರುಗಿತು   

ಗುರುಮಠಕಲ್: ‘ಯಾದಗಿರಿಯ ಭೀಮಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಪುರಸಭೆಯೇ ಅದರ ನಿರ್ವಹಣೆ ಮಾಡಬೇಕು. ಟೆಂಡರ್ ನೀಡುವುದು ಬೇಡ’ ಎಂದು ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಪುರಸಭೆ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.

ಭೀಮಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಗುರುಸಣಗಿ ಜಾಕ್ವೆಲ್, ಡಬ್ಲ್ಯೂಟಿಪಿ ಅರಕೇರಾ (ಶುದ್ಧೀಕರಣ ಘಟಕ), ಧರ್ಮಾಪುರದ ಮಧ್ಯಂತರ ನೀರೆತ್ತುವ ಘಟಕಗಳ ನಿರ್ವಹಣೆಗೆ ಗ್ರಾಮೀಣ ನೀರು ಸರಬರಾಜು ಇಲಾಖೆ ಟೆಂಡರ್ ಕರೆಯಬೇಕು. 5 ವರ್ಷಗಳವರೆಗೆ ಏಜೆನ್ಸಿಗಳಿಗೆ ಒಪ್ಪಿಸಬೇಕು ಎಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಪುರಸಭೆ ಸದಸ್ಯರು ವಿರೋಧಿಸಿದ್ದು, ಠರಾವು ಹೊರಡಿಸಲಾಗಿದೆ.

ಕೂಡಲೇ ಸರ್ಕಾರಕ್ಕೆ ಈ ಕುರಿತು ಮನವಿ ಪತ್ರವನ್ನು ನೀಡಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ ಸದಸ್ಯರು,‘ಯೋಜನೆ ಪೂರ್ಣಗೊಂಡು ಪುರಸಭೆಗೆ ಒಪ್ಪಿಸಿದ ನಂತರ ಇಲ್ಲಿಯವರೆಗೂ ಪುರಸಭೆಯೇ ನಿರ್ವಹಿಸಿದೆ. ಈಗ ಗ್ರಾಮೀಣ ನೀರು ಸರಬರಾಜು ಇಲಾಖೆಯ ಮೂಲಕ ಟೆಂಡರ್ ಕರೆಯುವಂತೆ ಆದೇಶ ನೀಡಿದ್ದು, ಒಪ್ಪಲು ಸಾಧ್ಯವಿಲ್ಲ ಎಂದರು.

ADVERTISEMENT

ಒಟ್ಟು 9 ಮಿಲಿಯನ್‌ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣಕ್ಕೆ 4 ಹಾಗೂ ಗ್ರಾಮೀಣ ಪ್ರದೇಶಕ್ಕೆ 5 ಮಿಲಿಯನ್ ಲೀಟರ್‌ ನೀರು ಹಂಚಿಕೆ ಮಾಡಲಾಗುತ್ತಿದೆ. ಆದರೂ, ಕಳೆದ ಏಳು ವರ್ಷಗಳಿಂದ ನೀರು ಸರಬರಾಜಿನ ವಿದ್ಯುತ್ ಬಿಲ್ ಪಾವತಿ, ಜಾಕ್ವೆಲ್ ಸ್ವಚ್ಛತೆ ಸೇರಿ ಸಂಪೂರ್ಣ ನಿರ್ವಹಣೆಯನ್ನು ಪುರಸಭೆಯಿಂದ ಮಾಡಲಾಗುತ್ತಿದೆ. ಮುಂದೆಯೂ ನಾವೇ ಮಾಡಲಿದ್ದೇವೆ. ಒಂದು ವೇಳೆ ಏಜೆನ್ಸಿಗಳ ಮೂಲಕ ನಿರ್ವಹಿಸಬೇಕು ಎನ್ನುವುದಾದರೆ, ಪುರಸಭೆಯೇ ಟೆಂಡರ್ ಮೂಲಕ ಏಜೆನ್ಸಿಗಳನ್ನು ಗುರುತಿಸಲಿ ಎಂದು ಸದಸ್ಯರು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭೀಮಮ್ಮ ಮುಕುಡಿ, ಸದಸ್ಯರಾದ ರವೀಂದ್ರರೆಡ್ಡಿ ಶೇರಿ, ಬಾಬು ತಲಾರಿ, ಕೃಷ್ಣಾ ಮೇದಾ, ಮೋಯಿನೂದ್ಧೀನ್, ಬಾಲಪ್ಪ ದಾಸರಿ, ಸಿರಾಜ್ ಚಿಂತಕುಂಟಿ, ನವಾಜರೆಡ್ಡಿ ಗವಿನೋಳ, ಪಾಪಿರೆಡ್ಡಿ ಬುರುಜು, ಅನ್ವರ್, ನವಿತಾ ಕಂದೂರ, ಲಕ್ಷ್ಮೀಬಾಯಿ ಜೀತ್ರಿ, ನರ್ಮದಾ ಆವಾಂಗಪುರ, ಆಶನ್ನ ಬುದ್ಧ, ಅಶೋಕ ಕಲಾಲ್, ನರಸಪ್ಪ ಗಡ್ಡಲ್, ಪಾರ್ವತಮ್ಮ ಲಿಕ್ಕಿ, ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಲೆಕ್ಕಾಧಿಕಾರಿ ಅನೀಲ್ ಯರಗಲ್, ನೈರ್ಮಲ್ಯಾಧಿಕಾರಿಗಳಾದ ರಾಮುಲು, ಪ್ರಶಾಂತ, ಪರಶುರಾಮ ಬಸವರಾಜ ಹಾಗೂ ಅಶೋಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.