ADVERTISEMENT

ಶಿಥಿಲಾವಸ್ಥೆ ತಲುಪಿದ ಮುರಕನಾಳ ಶಾಲೆ

ಜೀವಭಯದಲ್ಲಿ ವಿದ್ಯಾರ್ಥಿಗಳು; ಪೋಷಕರ ಆತಂಕ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 5:56 IST
Last Updated 22 ಸೆಪ್ಟೆಂಬರ್ 2024, 5:56 IST
ಕೆಂಭಾವಿ ಸಮೀಪದ ಮುರಕನಾಳ ಸರ್ಕಾರಿ ಶಾಲೆಯ ಕಟ್ಟಡದ ಚಾವಣಿಯ ಪದರು ಕಿತ್ತು ಬಂದಿದೆ
ಕೆಂಭಾವಿ ಸಮೀಪದ ಮುರಕನಾಳ ಸರ್ಕಾರಿ ಶಾಲೆಯ ಕಟ್ಟಡದ ಚಾವಣಿಯ ಪದರು ಕಿತ್ತು ಬಂದಿದೆ   

ಕೆಂಭಾವಿ: ಸಮೀಪದ ಮುರಕನಾಳ ಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲಿ ಪಾಠ ಕೇಳುವಂತಾಗಿದೆ.

ಶಾಲೆಯಲ್ಲಿ ಸದ್ಯ ಎರಡು ಕೋಣೆಗಳಿದ್ದು, ಎರಡೂ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಚಾವಣಿಯ ಪದರು ಅಲ್ಲಲ್ಲಿ ಕಿತ್ತು ಬಂದಿದ್ದು, ವಿದ್ಯುತ್ ತಂತಿಗಳು ಜೋತಾಡುತ್ತಿವೆ. ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಒಟ್ಟು 27 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

1998ರಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಹಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲಿ ಪಾಠ ಕೇಳುವಂತಾಗಿದೆ. ಶಾಲೆಯ ದುಸ್ಥಿತಿ ಕಂಡ ಪಾಲಕರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಲು ಮುಂದಾಗಿದ್ದು, ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಪೋಷಕರು ಹೇಳಿದರು. 

ADVERTISEMENT

‘ಶಾಲಾ ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಸ್ಥಳಾವಕಾಶವಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ನಿರ್ಲಕ್ಷ್ಯ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಮ್ಮ ಗ್ರಾಮದ ಮಕ್ಕಳು ಶಿಥಿಲಾವಸ್ಥೆಯ ಕಟ್ಟಡದಲ್ಲಿ ಓದು ಕಲಿಯಬೇಕಿದೆ’ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದರು.

‘ಶಾಲಾ ಕಟ್ಟಡ ನಿರ್ಮಾಣವಾಗಿ 25 ವರ್ಷ ಗತಿಸಿದ್ದು, ಸದ್ಯ  ಶಾಲೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ. ಆದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ’  ಎಂದು ಎಸ್‍ಡಿಎಂಸಿ ಅಧ್ಯಕ್ಷ ನೀಲಕಂಠ ಮೇಟಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಮತಕ್ಷೇತ್ರಕ್ಕೆ ಒಳಪಡುವ ಮುರಕನಾಳದಲ್ಲಿ ಶಾಲಾ ಕೋಣೆ ನಿರ್ಮಾಣಕ್ಕೆ ಸಚಿವರು ಮುಂದಾಗಬೇಕು. ಆ ಮೂಲಕ ಮಕ್ಕಳ ಹೆಚ್ಚಿನ ದಾಖಲಾತಿ ಆಗುವಂತೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೆಂಭಾವಿ ಸಮೀಪದ ಮುರಕನಾಳ ಸರ್ಕಾರಿ ಶಾಲೆ
ಶಾಲೆಯ ಕಟ್ಟಡ ಶಿಥಿಲವಾಗಿರುವ ಕುರಿತು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಇದುವರೆಗೂ ಕ್ರಮ ಜರುಗಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು.
ನೀಲಕಂಠ ಮೇಟಿ ಎಸ್‍ಡಿಎಂಸಿ ಅಧ್ಯಕ್ಷ
ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಲಾ ಆವರಣದಲ್ಲಿ ಸ್ಥಳಾವಕಾಶವಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
ಶ್ರೀಶೈಲ ಪಾಸೋಡಿ ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.