ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಬ್ಬವನ್ನು ಮಂಗಳವಾರ ಆಚರಿಸಲಾಯಿತು.
ವಿವಿಧ ದೇಗುಲಗಳಲ್ಲಿರುವ ನಾಗರಟ್ಟೆಗಳಲ್ಲಿ ಕಲ್ಲು ನಾಗರ ಹಾವಿಗೆ ಹಾಲೇರೆದು ಮಹಿಳೆಯರು ಸಂಭ್ರಮಿಸಿದರು. ನೈವೇದ್ಯವಾಗಿ ವಿವಿಧ ಕಾಳುಗಳಿಂದ ತಯಾರಿಸಿ ಪದಾರ್ಥವನ್ನು ಹಂಚಲಾಯಿತು.
ತೆಂಗಿನಕಾಯಿ ಒಡೆದು, ಆಗರಬತ್ತಿ, ಕುಂಕುಮದಿಂದ ನಾಗಪ್ಪನಿಗೆ ಅಲಂಕಾರ ಮಾಡಲಾಗಿತ್ತು.
ಮಂಗಳವಾರ ಬೆಳಿಗ್ಗೆ ಮಹಿಳೆಯರು ನಾಗಬನ ಇರುವ ವಿವಿಧ ದೇಗುಲಕ್ಕೆ ತೆರಳಿ ಹಾಲೇರೆದರು. ಹುತ್ತ, ಕಲ್ಲು ನಾಗರ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಒಣಗೊಬ್ಬರಿಯಲ್ಲಿ ಬೆಲ್ಲ ಇಟ್ಟು ನಾಗಪ್ಪಗೆ ಮಹಿಳೆಯರು, ಮಕ್ಕಳು ಹಾಲೇರೆದರು. ತೆಂಗಿನಕಾಯಿ ಒಡೆದು ಭಕ್ತಿ ಸಮಪರ್ಕಿಸಿದರು.
ಪಂಚಮಿ ಅಂಗವಾಗಿ ವಿಶೇಷ ತಿನಿಸುಗಳನ್ನು ಮಹಿಳೆಯರು ತಯಾರಿಸಿದ್ದರು. ರವೆ ಹುಂಡಿ, ಕಡ್ಲೆಹುಂಡಿ, ಲಡ್ಡು, ಕಡಬು, ಒಗ್ಗರಣೆ ಅವಲಕ್ಕಿ, ಜೋಳದ ಪಾಪ್‌ಕಾರ್ನ್, ಕರ್ಜಿಕಾಯಿ, ಶೇಂಗದ ಹುಂಡಿ, ಬೇಸನ್ ಹುಂಡಿ, ಕುದಿಸಿದ ಕಡಲೆ ಬೀಜ, ಜೋಳದ ಸಿಹಿ ಹುಂಡಿ ಹೀಗೆ ವಿವಿಧ ಭಕ್ಷ್ಯಗಳನ್ನು ತಯಾರಿಸಿದ್ದರು. ಅಕ್ಕಪಕ್ಕದ ಮನೆಯವರು, ಬಂಧು ಬಳಗದವರಿಗೆ ಸಿಹಿ ಕಳುಸುವ ಮೂಲಕ ಹಬ್ಬವನ್ನು ಆಚರಿಸಿದರು.
ನಾಗರ ಪಂಚಮಿ ವೇಳೆ ಗ್ರಾಮೀಣ ಭಾಗದ ಅಂಗವಾಗಿ ಮಹಿಳೆಯರು, ಮಕ್ಕಳು ಪೂಜೆಯಲ್ಲಿ ತೊಡಗಿಸಿಕೊಂಡಿದ್ದರೆ ಪುರುಷರು ಸಾಹಸಮಯ ಆಟಗಳನ್ನು ಆಡಿ ಖುಷಿಪಟ್ಟರು.
ಗ್ರಾಮೀಣ ಪ್ರದೇಶದಲ್ಲಿ ವಿವಿಧ ಆಟಗಳಲ್ಲಿ ಗ್ರಾಮಸ್ಥರು ತೊಡಗಿಸಿಕೊಂಡಿದ್ದರು. ನಿಂಬೆಕಾಯಿ ಎಸೆಯುವುದು, ಬಲೂನ್ ಕಟ್ಟಿ ಅದನ್ನು ಒಡೆಯುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಿದರು. ಗ್ರಾಮೀಣ ಭಾಗದಲ್ಲಿ ವಿವಿಧ ಆಟಗಳನ್ನು ಆಯೋಜಿಲಾಸಲಾಗಿತ್ತು.
ಮೊದಲ ದಿನ ರೊಟ್ಟಿ ಪಂಚಮಿ, ಮರುದಿನ ನಾಗರ ಚೌತಿ, ಅದರ ಮರು ದಿನ ನಾಗರ ಪಂಚಮಿ ಹಬ್ಬ ಆಚರಿಸಿದರು. ನಗರದ ಲಕ್ಷ್ಮಿ ನಗರದ ಲಕ್ಷ್ಮಿ ದೇವಸ್ಥಾನ, ವಿಶ್ವಕರ್ಮ ಏಕದಂಡಗಿ ಮಠ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಹಿಳೆಯರು ಎಳ್ಳು ಹಚ್ಚಿ ತಯಾರಿಸಿದ ರೊಟ್ಟಿ, ಸಂಡಗಿ, ಕರ್ಚಿಕಾಯಿ, ಮಜ್ಜಿಗೆ ಮೆಣಸಿನಕಾಯಿ, ಚಪಾತಿ, ಕಡ್ಲೇಕಾಳು ಉಸುಲಿ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ತಂಬಿಟ್ಟು, ಶೇಂಗಾ, ಕಡ್ಲೆಚಟ್ನಿ ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಬಂಧು, ಬಳಗ ನೆರೆ ಹೊರೆಯವರಿಗೆ ಹಂಚಿ ಸಂಭ್ರಮಪಟ್ಟರು. ರಜೆ ಇರುವ ಕಾರಣ ಶಾಲಾ ಮಕ್ಕಳು ತಂದೆ ತಾಯಿಯೊಟ್ಟಿಗೆ ಸಂಭ್ರಮಿಸಿದರು.
ನಾಗಮೂರ್ತಿಗೆ ಅಭಿಷೇಕ:
ನಗರದ ವಿವಿಧ ಬಡಾವಣೆಗಳಲ್ಲಿರುವ ನಾಗರ ಕಟ್ಟೆಗೆ ಆಗಮಿಸಿದ್ದ ಮಹಿಳೆಯರು ಹೊಸ ಬಟ್ಟೆ ಧರಿಸಿ ನೈವೈದ್ಯ ಮತ್ತು ಹಾಲಿನಿಂದ ಅಭಿಷೇಕ ನೆರವೇರಿಸುವುದು ಕಂಡುಬಂತು. ಹೊಸದಾಗಿ ದಾಂಪತ್ಯಕ್ಕೆ ಕಾಲಿಟ್ಟ ಹೆಣ್ಣುಮಕ್ಕಳು ತವರು ಮನೆಗೆ ಬಂದು ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದರು.
ಪಂಚಮಿ ಹಬ್ಬದಲ್ಲಿ ಚಿಕ್ಕಮಕ್ಕಳು ಒಣ ಕೊಬ್ಬರಿ ಬಟ್ಟಲುಗಳನ್ನು ಬುಗರಿಯಂತೆ ಆಡಿಸಿ, ಅದು ತುಂಡಾದ ನಂತರ ತಿಂದು ಸಂತೋಷಪಟ್ಟರು. ದೊಡ್ಡವರು ಕಣ್ಣು ಕಟ್ಟಿಕೊಂಡು ಗುರಿ ಮುಟ್ಟುವ ಆಟ ಆಡಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.