ADVERTISEMENT

ಯಾದಗಿರಿ ಜಿಲ್ಲಾದ್ಯಂತ ಸಂಭ್ರಮದ ನಾಗರ ಪಂಚಮಿ

ನಾಗರಕಟ್ಟೆ, ಹುತ್ತಕ್ಕೆ ಹಾಲೇರೆದ ಮಹಿಳೆಯರು, ಸಿಹಿಯೂಟ ತಯಾರಿಸಿ ಹಬ್ಬಡ ಸಡಗರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 3:18 IST
Last Updated 14 ಆಗಸ್ಟ್ 2021, 3:18 IST
ಯಾದಗಿರಿ ನಗರದ ವಿಶ್ವಕರ್ಮ ಏಕದಂಡಗಿ ಮಠದ ಆವರಣದಲ್ಲಿ ನಾಗರ ಕಟ್ಟೆಯಲ್ಲಿ ಹಾಲೇರೆಯುವ ಮೂಲಕ ಸಂಭ್ರಮಿಸಿದರು
ಯಾದಗಿರಿ ನಗರದ ವಿಶ್ವಕರ್ಮ ಏಕದಂಡಗಿ ಮಠದ ಆವರಣದಲ್ಲಿ ನಾಗರ ಕಟ್ಟೆಯಲ್ಲಿ ಹಾಲೇರೆಯುವ ಮೂಲಕ ಸಂಭ್ರಮಿಸಿದರು   

ಯಾದಗಿರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಶ್ರಾವಣ ಮಾಸದ ನಾಗರ ಪಂಚಮಿ ಹಬ್ಬವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆಯೇ ಮನೆಯನ್ನು ಮಹಿಳೆಯರು ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧತೆ ಮಾಡಿಕೊಂಡರು.

ವಿವಿಧ ದೇಗುಲಗಳಲ್ಲಿರುವ ನಾಗರಟ್ಟೆಗಳಲ್ಲಿ ಕಲ್ಲು ನಾಗರ ಹಾವಿಗೆ ಹಾಲೇರೆದು ಮಹಿಳೆಯರು ಸಂಭ್ರಮಿಸಿದರು.

ADVERTISEMENT

ನಗರ ವಿವಿಧ ದೇವಸ್ಥಾನಗಳಲ್ಲಿರುವ ನಾಗರ ಕಟ್ಟೆಗಳಲ್ಲಿ ಕಲ್ಲಿನ ನಾಗಪ್ಪನಿಗೆ ಪೂಜೆ ಸಲ್ಲಿಸುವ ಮೂಲಕ ದೇವರಲ್ಲಿ ತಮ್ಮ ಇಚ್ಛೆಯನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ನಗರ ಪ್ರದೇಶಗಳಲ್ಲಿ ಮಹಿಳೆಯರು ನಾಗರ ಪಂಚಮಿ ಪೂಜೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಗ್ರಾಮೀಣ ಭಾಗದಲ್ಲಿ ವಿವಿಧ ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಮೂಲಕ ಪಂಚಮಿ ಹಬ್ಬವನ್ನು ಪುರುಷರು ವಿಶೇಷವಾಗಿ ಆಚರಿಸಿದರು.

ನಿಂಬೆ ಹಣ್ಣು ಎಸೆತ, ಕಲ್ಲು ಹೊತ್ತುಯುವುದು, ಜೋಳದ ಚೀಲ ಹೊತ್ತುಯುವುದು, ಮೊಸಂಬಿ ಹೊಡೆಯುವುದು, ತೆಂಗಿನಕಾಯಿ ಸುಲಿಯುವುದು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಾಗಿತ್ತು. ಗ್ರಾಮೀಣ ಭಾಗದ ರಸ್ತೆ ಭಾಗದಲ್ಲಿ ಪುರುಷರು ಸಂಭ್ರಮದಲ್ಲಿ ತೊಡಗಿದ್ದರು.

ವಿಶೇಷ ಸಿಹಿ ತಿಂಡಿ ತಯಾರಿ: ಪಂಚಮಿ ಹಬ್ಬದ ಅಂಗವಾಗಿ ವಿಶೇಷ ಸಿಹಿ ತಿಂಡಿ ತಯಾರಿ ಮಾಡಲಾಗಿತ್ತು. ಕರ್ಜಿಕಾಯಿ, ಶೇಂಗದ ಹುಂಡಿ, ಬೇಸನ್‌ ಹುಂಡಿ, ಕುದಿಸಿದ ಕಡಲೆ ಬೀಜ, ಶಂಕರ ಪಾಳೆ, ಗಾರಿಗೆ ಸೇರಿದಂತೆ ವಿವಿಧ ತಿಂಡಿ ತಯಾರಿಸಿ ನೆರೆ ಹೊರೆಯವನ್ನು ಆಹ್ವಾನಿಸಿ ಊಟ ಸವಿದು ಸಂಭ್ರಮಿಸಿದರು.

ಇನ್ನು ಮಹಿಳೆಯರು ಜೋಕಾಲಿ ಜೀಕುತ್ತಾ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ವಿಶೇಷವಾಗಿ ಹೊಸದಾಗಿ ವಿವಾಹವಾದ ಮಹಿಳೆಯರು ತವರು ಮನೆಗೆ ಆಗಮಿಸಿದ್ದರು. ದಂಪತಿ ಸೇರಿ ಕಲ್ಲು ನಾಗರ ಹಾವಿಗೆ ಹಾಲೇರೆದು ವಿಶೇಷ ಪೂಜೆ ಸಲ್ಲಿಸಿದರು.

****

5.50 ಕ್ವಿಂಟಲ್‌ ಜೋಳದ ಚೀಲ ಎಳೆದ ಯುವಕ
ಯಾದಗಿರಿ: ನಾಗರ ಪಂಚಮಿ ಅಂಗವಾಗಿ ಶಹಾಪುರ ತಾಲ್ಲೂಕಿನ ಗೋಗಿ ಪೇಟ ಗ್ರಾಮದ ಯುವಕ ಶ್ರೀಕಾಂತ ನಾಗಪ್ಪ ಬದ್ದೇಹಳ್ಳಿ 5.50 ಕ್ವಿಂಟಲ್‌ ಜೋಳದ ಚೀಲ ಬಂಡಿ ಸಮೇತ ಎಳೆದು ಗಮನ ಸೆಳೆದಿದ್ದಾರೆ.

ಗೋಗಿ ಪೇಟ ಗ್ರಾಮದ ಹನುಮಾನ ದೇವಸ್ಥಾನದಿಂದ ಶಹಾಪುರ ನಗರದ ಹನುಮಾನ ದೇವಸ್ಥಾನದ ವರೆಗೆ ಬಂಡಿ ಸಮೇತ ಜೋಳದ ಚೀಲ ಕಾಲ್ನಡಿಗೆಯಲ್ಲಿ ಎಳೆಯಬೇಕು ಎನ್ನುವ ಪಂದ್ಯ ಅಯೋಜಿಸಲಾಗಿತ್ತು.

ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಒಂಟಿಯಾಗಿ ಎಳೆದುಕೊಂಡು ಶಹಾಪುರ ನಗರದ ಹನುಮಾನ ಮಂದಿರಕ್ಕೆ ತಲುಪಿಸಬೇಕು. ವಿರಾಮ ಪಡೆಯಲು ಐದು ಸಾರಿ ಅವಕಾಶ ಪಡೆಯಬಹುದು ಎಂದು ಷರತ್ತು ಹಾಕಿ ಪಂದ್ಯ ಕಟ್ಟಲಾಗಿತ್ತು.

ಸವಾಲು ಸ್ವೀಕರಿಸಿದ ಯುವಕ ಶ್ರೀಕಾಂತ 12 ಕಿ.ಮೀ ದೂರವನ್ನು ಎರಡೂವರೆ ಗಂಟೆಯಲ್ಲಿ ತಲುಪಿದ್ದಾರೆ. ಬೆಳಿಗ್ಗೆ 7 ಗಂಟೆ 9.30 ಗಂಟೆಗೆಲ್ಲ ಶಹಾಪುರ ತಲುಪಿದ್ದರು.

ಶಹಾಪುರ ನಗರದ ಹನುಮಾನ್ ದೇವಸ್ಥಾನದ ಹೊರಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಎಳೆದುಕೊಂಡು ಹೋಗಿ ಸಾಧನೆ ಮಾಡಿದ್ದಾರೆ. ಪಂದ್ಯ ಗೆದ್ದ ಖುಷಿಯಲ್ಲಿ ಪರಸ್ಪರ ಬಣ್ಣವನ್ನು ಎರಚಿ ಸಂಭ್ರಮಿಸಿದರು.

‘ಈಚೆಗೆ ಜಮೀನು ಬಳಿ ಭಜನೆ ಆಯೋಜಿಸಲಾಗಿತ್ತು. ಅಲ್ಲಿ ಸೋದರ ಮಾವನವರು ಅಳಿಯನಿಗೆ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಯುವಕ ಪಂದ್ಯದಲ್ಲಿ ಜಯಗಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಬಸವರಾಜ ಹೇರುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶ್ರೀಕಾಂತ ಸಹೋದರ ಮಾವರಾದ ರವಿ, ಮಂಜಪ್ಪ ಬದ್ದೆಳ್ಳಿ ಗೋಗಿ ಯವರು 1 ತೊಲೆ ಬಂಗಾರ ಕಾಣಿಕೆಯಾಗಿ ನೀಡಿದ್ದಾರೆ. ಯುವಕನ ಸಾಧನೆಗೆ ಗೋಗಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.