ADVERTISEMENT

ಬಯಸ್ಸಿದ್ದೆ ಒಂದು; ಸಿಕ್ಕಿದ್ದೆ ಇನ್ನೊಂದು

ರಾಜ್ಯ ನೀತಿ ಆಯೋಗದ ಅಧ್ಯಕ್ಷರಾಗಿ ಶರಣಬಸಪ್ಪ ದರ್ಶನಾಪುರ ನೇಮಕ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 19:46 IST
Last Updated 22 ಡಿಸೆಂಬರ್ 2018, 19:46 IST
ಶರಣಬಸಪ್ಪ ದರ್ಶನಾಪುರ
ಶರಣಬಸಪ್ಪ ದರ್ಶನಾಪುರ   

ಯಾದಗಿರಿ: ‘ಸಚಿವ ಸ್ಥಾನದ ಆಕಾಂಕ್ಷಿ ಇದ್ದೆ. ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಕಾಂಗ್ರೆಸ್‌ ನೀತಿ ಆಯೋಗದ ಹೊಣೆ ಹೊರೆಸಿದೆ. ಬಯಸಿದ್ದೆ ಒಂದು, ಸಿಕ್ಕಿದ್ದು ಇನ್ನೊಂದು’ ಎಂದು ಶಹಾಪುರ ಮತಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ಶನಿವಾರ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದ್ದು ಹೀಗೆ.

ಶರಣಬಸಪ್ಪ ದರ್ಶನಾಪುರ 1994ರಲ್ಲಿ ಜನತಾ ದಳದ ಅಭ್ಯರ್ಥಿಯಾಗಿ ಮೊದಲ ಬಾರಿ ಗೆಲುವು ಸಾಧಿಸುವುದರ ಮೂಲಕ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಸಚಿವ ಸಂಪುಟದಲ್ಲಿ ಇಂಧನ ಸಚಿವರಾಗಿದ್ದರು. ಅತ್ಯಂತ ಕಿರಿಯ ಸಚಿವರೆಂಬ ಹೆಗ್ಗಳಿಕೆಗೂ ದರ್ಶನಾಪುರ ಅವರು ಪಾತ್ರರಾಗಿದ್ದರು.

1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಶಿವಶೇಖರಪ್ಪಗೌಡ ಶಿರವಾಳ ವಿರುದ್ಧ ಸೋಲು ಕಂಡಿದ್ದರು. 2004ರಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿ, ಮತ್ತಷ್ಟೂ ರಾಜಕೀಯ ಹೆಜ್ಜೆ ಗುರುತುಗಳನ್ನು ಗಟ್ಟಿಗೊಳಿಸುತ್ತಾ ಸಾಗಿದರು. 2006ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ದುಡಿದ ಅನುಭವ ಅವರಿಗೆ ಇದೆ.

ADVERTISEMENT

2008ರಲ್ಲಿ ಕಾಂಗ್ರೆಸ್‌ ಸೇರಿ ಮತ್ತೆ ಶಾಸಕರಾದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಗುರು ಪಾಟೀಲ್ ಶಿರವಾಳ ವಿರುದ್ಧ ಸೋಲು ಅನುಭವಿಸಿದರು. 2018ರಲ್ಲಿ ಮತ್ತೆ ಶಾಸಕರಾಗಿದ್ದಾರೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಎರಡು ಬಾರಿ ಸಚಿವ, ನಾಲ್ಕು ಬಾರಿ ಶಾಸಕರಾಗಿರುವ ಅನುಭವಿ ರಾಜಕಾರಣಿಗೆ ಕಾಂಗ್ರೆಸ್ ನೀತಿ ಆಯೋಗದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದೆ ಎಂಬು ಮಾತುಗಳು ಜಿಲ್ಲೆಯ ಕಾಂಗ್ರೆಸ್‌ ನಾಯಕರಲ್ಲಿ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.