ADVERTISEMENT

ನೂತನ ನ್ಯಾಯಾಲಯ ಸಂಕೀರ್ಣ ತ್ವರಿತ ನ್ಯಾಯ ದೊರಕಿಸಲು ನೆರವು: ಮುಖ್ಯನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:59 IST
Last Updated 20 ಸೆಪ್ಟೆಂಬರ್ 2025, 5:59 IST
<div class="paragraphs"><p>ಯಾದಗಿರಿಯಲ್ಲಿ ಶುಕ್ರವಾರ&nbsp;ಜಿಲ್ಲೆಯ&nbsp;ಹೊಸ&nbsp;ನ್ಯಾಯಾಲಯ&nbsp;ಸಂಕೀರ್ಣ ಹಾಗೂ ಬಾರ್ ಅಸೋಸಿಯೇಷನ್‌ ಕಟ್ಟಡದ ಶಿಲಾಫಲಕವನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ವಿಭು ಭುಕ್ರು ಅವರು ಉದ್ಘಾಟಿಸಿದರು. ಹೈಕೋರ್ಟ್‌ನ ನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಧೀಶರು ಉಪಸ್ಥಿತರಿದ್ದರು.</p></div>

ಯಾದಗಿರಿಯಲ್ಲಿ ಶುಕ್ರವಾರ ಜಿಲ್ಲೆಯ ಹೊಸ ನ್ಯಾಯಾಲಯ ಸಂಕೀರ್ಣ ಹಾಗೂ ಬಾರ್ ಅಸೋಸಿಯೇಷನ್‌ ಕಟ್ಟಡದ ಶಿಲಾಫಲಕವನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ವಿಭು ಭುಕ್ರು ಅವರು ಉದ್ಘಾಟಿಸಿದರು. ಹೈಕೋರ್ಟ್‌ನ ನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಧೀಶರು ಉಪಸ್ಥಿತರಿದ್ದರು.

   

ಯಾದಗಿರಿ: ‘ನ್ಯಾಯಾಲಯಕ್ಕೆ ನ್ಯಾಯ ಕೋರಿ ಬರುವ ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯ ದೊರಕಿಸುವಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಬಹು ಉಪಯುಕ್ತವಾಗಲಿದೆ’ ಎಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ವಿಭು ಭುಕ್ರು ಹೇಳಿದರು.

ನಗರದ ಸೇಡಂ ಬೈಪಾಸ್ ರಸ್ತೆಯ ಸಮೀಪದಲ್ಲಿ ಶುಕ್ರವಾರ ಜಿಲ್ಲಾ ನ್ಯಾಯಾಲಯ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ನ್ಯಾಯವಾದಿಗಳ (ಬಾರ್ ಅಸೋಸಿಯೇಷನ್) ಸಂಘ ಆಯೋಜಿಸಿದ್ದ ಜಿಲ್ಲೆಯ ಹೊಸ ನ್ಯಾಯಾಲಯ ಸಂಕೀರ್ಣ ಹಾಗೂ ಬಾರ್ ಅಸೋಸಿಯೇಷನ್‌ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಜಿಲ್ಲೆಯಲ್ಲಿ ಹೊಸ ನ್ಯಾಯಾಲಯದ ಸಂಕೀರ್ಣವು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಯಾದಗಿರಿ ಜಿಲ್ಲೆಗೆ ಇದೊಂದು ಸಂತಸದ ಕ್ಷಣವಾಗಿದೆ. ಕಾನೂನು ಬಂಧುಗಳು ಮತ್ತು ದಾವೆ ಹೂಡುವವರು ಸುಗಮವಾಗಿ ಕಾರ್ಯನಿರ್ವಹಿಸಲು ಹೊಸ ಕಟ್ಟಡವು ನೆರವಾಗಲಿದೆ. ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಸಹ ಅನುಕೂಲಕರವಾಗಲಿದೆ’ ಎಂದರು.

‘ನ್ಯಾಯ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಈಗ ಲಭ್ಯವಾಗಿರುವ ಮೂಲಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಸುಗಮ ನ್ಯಾಯಾಲಯ ಕಲಾಪಗಳಿಗೂ ಇದು ಸಹಾಯವಾಗಲಿದೆ’ ಎಂದು ಹೇಳಿದರು.

ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಸ್.ಹೇಮಲೇಖಾ ಮಾತನಾಡಿ, ‘ಜಿಲ್ಲಾ ನ್ಯಾಯಾಲಯಕ್ಕೆ ಹೊಸ ಕಟ್ಟಡ ನಿರ್ಮಾಣವು ನ್ಯಾಯಾಂಗದಲ್ಲಿ ಒಂದು ಹೊಸ ಮೈಲಿಗಲ್ಲು ಆಗಲಿದೆ. ಹೊಸ ಕಟ್ಟಡದಿಂದಾಗಿ ಸಮಾಜ ಹಾಗೂ ನಾಗರಿಕರಿಗೆ ನ್ಯಾಯದಾನ, ಪಾರದರ್ಶಕ ಸೇವೆ ಕಲ್ಪಿಸಲು ನೆರವಾಗಲಿದೆ’ ಎಂದರು.

‘ಯಾದಗರಿಯ ಆಡಳಿತಾತ್ಮಕ ನ್ಯಾಯಾಧೀಶರಾದ ತಕ್ಷಣವೇ ಜಿಲ್ಲೆಗೆ ಸುಸಜ್ಜಿತ ನ್ಯಾಯಾಲಯದ ಸಂಕೀರ್ಣ ದೊರೆತಿರುವುದು ಸಂತಸ ತಂದಿದೆ. ಉದ್ಘಾಟನೆಯಾಗಿರುವ ನ್ಯಾಯಾಲಯದ ಹೊಸ ಸಂಕೀರ್ಣವು ನ್ಯಾಯ ಮತ್ತು ಸಾಮಾಜಿಕ ಸೇವೆಗೆ ಮೀಸಲಾಗಿರಲಿದೆ’ ಎಂದು ಹೇಳಿದರು. 

‘ಭಾರತದ ನ್ಯಾಯಾಂಗವು ದೇಶದ ಸಂವಿಧಾನದ ರಕ್ಷಕ ಹಾಗೂ ನಾಗರಿಕರ ಹಕ್ಕುಗಳನ್ನು ಕಾಪಾಡುತ್ತಿದೆ. ಹೊಸ ಸಂಕೀರ್ಣವು ಜನಸ್ನೇಹಿಯಾದ ವಾತಾವರಣದೊಂದಿಗೆ ನ್ಯಾಯದಾನ ಮಾಡಲಿದೆ’ ಎಂದರು. 

ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್, ಅಶೋಕ್ ಕಿಣಗಿ, ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಮತ್ತು ಸೆಕ್ಯುರಿಟಿಸ್ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷ ಪಿ.ಎಸ್. ದಿನೇಶ್ ಕುಮಾರ್, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ., ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಸಿಇಒ ಲವೀಶ್ ಒರಾಡಿಯಾ, ಬಾರ್ ಅಸೋಸಿಯೇಷನ್ ​​ಅಧ್ಯಕ್ಷ ಆರ್.ಎಸ್. ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

₹ 35.5 ಕೋಟಿ ವೆಚ್ಚದಲ್ಲಿ ನಿರ್ಮಾಣ 
ವಕೀಲರ ಸಂಘವನ್ನು ಹೊಂದಿರುವ ಹೊಸ ನ್ಯಾಯಾಲಯ ಸಂಕೀರ್ಣವನ್ನು 10 ಎಕರೆಯಲ್ಲಿ ₹ 35.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ನಿರ್ಮಾಣದ ಹೊಣೆಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿತ್ತು. ಎಂಟು ನ್ಯಾಯಾಲಯ ಸಭಾಂಗಣಗಳನ್ನು ಹೊಂದಿದೆ. ಇದರಲ್ಲಿ ಪ್ರಧಾನ ಜಿಲ್ಲೆಯ ನ್ಯಾಯಾಲಯ ಸಭಾಂಗಣಗಳೂ ಸೇರಿವೆ. ಹೆಚ್ಚುವರಿ ನ್ಯಾಯಾಧೀಶರಿಗೂ ಸಹ ನ್ಯಾಯಾಲಯ ಸಭಾಂಗಣಗಳಿವೆ. ಬಾರ್ ಅಸೋಸಿಯೇಷನ್ ​​ಕಟ್ಟಡ ವಾಹನ ಪಾರ್ಕಿಂಗ್ ಕ್ಯಾಂಟೀನ್ ಉದ್ಯಾನ ಶೌಚಾಲಯಗಳನ್ನು ಸಹ ಸಂಕೀರ್ಣದಲ್ಲಿ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.