ADVERTISEMENT

ಶಂಕಿತ, ಖಚಿತ ಕೊರೊನಾ ಪ್ರಕರಣ ಪತ್ತೆ ಇಲ್ಲ

ಚೆಕ್‌ಪೋಸ್ಟ್‌ಗಳಲ್ಲಿ 25,789 ಪ್ರಯಾಣಿಕರ ತಪಾಸಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 17:18 IST
Last Updated 23 ಮಾರ್ಚ್ 2020, 17:18 IST

ಯಾದಗಿರಿ: ಯಾದಗಿರಿ ತಾಲ್ಲೂಕಿನಲ್ಲಿ 23, ಶಹಾಪುರ ತಾಲ್ಲೂಕಿನಲ್ಲಿ 16 ಹಾಗೂ ಸುರಪುರ ತಾಲ್ಲೂಕಿನಲ್ಲಿ 19 ಸೇರಿದಂತೆ ಮಾರ್ಚ್ 23ರವರೆಗೆ ಜಿಲ್ಲೆಯಲ್ಲಿ ಒಟ್ಟು 58 ಜನ ದುಬೈ, ಕತಾರ್‌, ಸೌದಿ, ಮದಿನಾ ಪ್ರವಾಸದಿಂದ ಜಿಲ್ಲೆಗೆ ಮರಳಿ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.ಯಾವುದೇ ರೋಗಲಕ್ಷಣಗಳು ಕಂಡುಬಂದಿರುವುದಿಲ್ಲ. ಇವರಿಗೆ ಹೋಮ್ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ವಿದೇಶಗಳಿಂದ ಬಂದವರನ್ನು ದಿನಕ್ಕೆ 2 ಬಾರಿ 14 ದಿನಗಳ ಕಾಲ ವೈದ್ಯಕೀಯ ತಂಡ ಭೇಟಿ ನೀಡಿ ತಪಾಸಣೆ ನಡೆಸುತ್ತದೆ. ಇವರ ಕುಟುಂಬದ ಸದಸ್ಯರ ಮೇಲೆಯೂ ನಿಗಾ ವಹಿಸಲಾಗಿದೆ. ಶಹಾಪುರ ಆಸ್ಪತ್ರೆಯಲ್ಲಿ ಒಬ್ಬರನ್ನು ಪ್ರತ್ಯೇಕವಾಗಿರಿಸಿ, ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಶಂಕಿತ ಅಥವಾ ಖಚಿತ ಕೊರೊನಾ ವೈರಸ್ ಪ್ರಕರಣ ಪತ್ತೆ ಆಗಿಲ್ಲ. ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡಬಾರದು ಎಂದು ಮನವಿ ಮಾಡಿದ್ದಾರೆ.

ADVERTISEMENT

ಆರೋಗ್ಯ ಸಹಾಯವಾಣಿ-104ಕ್ಕೆ ಬರುವ ಕರೆಗಳಿಗಾಗಿ 3 ಸಿಬ್ಬಂದಿ ಮೀಸಲಿರಿಸಿದೆ. ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ 08473-253950 ಗೆ 3 ಕರೆಗಳು ಸ್ವೀಕೃತವಾಗಿವೆ ಎಂದು ಅವರು ತಿಳಿಸಿದ್ದಾರೆ.

25,789 ಪ್ರಯಾಣಿಕರ ತಪಾಸಣೆ:‌ಜಿಲ್ಲಾಡಳಿತದ ವತಿಯಿಂದ ಕೊರೊನಾ ವೈರಸ್ ತಡೆಗೆ ಜಿಲ್ಲೆಯಲ್ಲಿ ಸ್ಥಾಪಿಸಿರುವ 6 ಚೆಕ್‍ಪೋಸ್ಟ್, ಸ್ಕ್ರೀನಿಂಗ್ ಸೆಂಟರ್, ಮಾಹಿತಿ ಡೆಸ್ಕ್‌ಗಳಲ್ಲಿ ಇಲ್ಲಿಯವರೆಗೆ 25,789 ಜನರನ್ನು ತಪಾಸಣೆ ಮಾಡಲಾಗಿದೆ.

ಯಾದಗಿರಿ ನಗರದ ರೈಲು ನಿಲ್ದಾಣ, ಜಿಲ್ಲಾ ನ್ಯಾಯಾಲಯ, ಹೊಸ ಬಸ್ ನಿಲ್ದಾಣ ಹಾಗೂ ಯರಗೋಳ, ಗುರುಮಠಕಲ್ ಸಮೀಪದ ಇಟಗಾಲ್ ಕ್ರಾಸ್, ಮುಡಬೂಳ ಗ್ರಾಮಗಳಲ್ಲಿ ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಜನರನ್ನು ತಪಾಸಣೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.