ADVERTISEMENT

ನೆರೆ ಹೊರೆಯವರಿಗೆ ಸರ್ಕಾರಗಳ ಯೋಜನೆ ತಿಳಿಸಿ: ಸಚಿವ ಚವಾಣ್‌

ಯೋಜನೆಗಳ ಲಾಭ ಪ್ರತಿ ಅರ್ಹ ಫಲಾನುಭವಿಗಳಿಗೂ ಲಭಿಸಲಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 5:07 IST
Last Updated 1 ಜೂನ್ 2022, 5:07 IST
ಯಾದಗಿರಿ ಜಿಲ್ಲಾಡಳಿತ ಆಡಿಟೋರಿಯಂನಲ್ಲಿ ವಿವಿಧ ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಸಂವಾದ ನಡೆಸಿದರು
ಯಾದಗಿರಿ ಜಿಲ್ಲಾಡಳಿತ ಆಡಿಟೋರಿಯಂನಲ್ಲಿ ವಿವಿಧ ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಸಂವಾದ ನಡೆಸಿದರು   

ಯಾದಗಿರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದಿರುವ ಫಲಾನುಭವಿಗಳು, ಈ ಯೋಜನೆಗಳ ಬಗ್ಗೆ ಇತರರಿಗೂ ತಿಳಿಹೇಳಿ ಲಾಭ ದೊರಕಿಸಲು ಮತ್ತು ಅರಿವು ಮೂಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಕರೆ ನೀಡಿದರು.

ಭಾರತ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರ್ಣಗೊಳಿಸಿದ ಕಾರಣ ಮಂಗಳವಾರ ಹಿಮಾಚಲ ಪ್ರದೇಶದ ಸಿಮ್ಲಾದಿಂದ ವರ್ಚುವಲ್‌ ವೇದಿಕೆ ಮೂಲಕ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಆಯೋಜಿಸಿದ್ದ ನೇರ ಸಂವಾದಕ್ಕೂ ಮುನ್ನ,ಜಿಲ್ಲಾಡಳಿತ ಆಡಿಟೋರಿಯಂ ಸಭಾಂಗಣದಲ್ಲಿ ವಿವಿಧ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಕೇಂದ್ರ ಪುರಸ್ಕೃತ ಯೋಜನೆಗಳಾದ ಪ್ರಧಾನ ಮಂತ್ರಿ ಅವಾಸ್ ಯೋಜನೆ, ಪ್ರಧಾನ ಮಂತ್ರಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪೋಷಣಾ ಅಭಿಯಾನ ಯೋಜನೆ, ಪ್ರಧಾನಮಂತ್ರಿ ಮಾತೃವಂದನಾ ಸೇರಿ ವಿವಿಧ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಸಮಾಜದ ಅತ್ಯಂತ ಕಡು ಬಡ ವ್ಯಕ್ತಿಗೆ ಈ ಯೋಜನೆಯ ಲಾಭ ದೊರೆಯಬೇಕೆಂಬುದು ಪ್ರಧಾನಿಗಳ ಆಶಯವಾಗಿದೆ. ತಾವೆಲ್ಲರೂ ತಮ್ಮ ನೆರೆ ಹೊರೆಯ ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳ ಲಾಭ ದೊರಕಿಸುವಂತೆ ಅರಿವು ಮೂಡಿಸಬೇಕು. ಅಧಿಕಾರಿಗಳು ಇದರ ಲಾಭ ದೊರಕಿಸುವಂತೆ ಸಲಹೆ ನೀಡಿದರು.

ADVERTISEMENT

ಪ್ರಧಾನಿ ಅವರು ಪ್ರತಿ ಊರಲ್ಲಿ ಸ್ವಚ್ಛತೆಗಾಗಿ ಸ್ವಚ್ಛ ಭಾರತ್ ಮಿಷನ್, ಶೌಚಾಲಯಗಳ ಸೌಲಭ್ಯ, ಪ್ರತಿಯೊಬ್ಬರಿಗೂ ಮನೆ ಸೌಲಭ್ಯ, ಬಡವರ ಆರ್ಥಿಕ ಅಭಿವೃದ್ಧಿಗಾಗಿ ಈ ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರತಿ ಮನೆಗೆ ನೀರನ್ನು ತಲುಪಿಸಲು ಜಲ ಜೀವನ ಮಿಷನ್ ಯೋಜನೆ ಜಾರಿಗೊಳಿಸಿದ್ದಾರೆ. ಹೊರ ರಾಜ್ಯದಿಂದ ಬಂದವರಿಗೂ ಒಂದು ದೇಶ ಒಂದು ಪಡಿತರ ಚೀಟಿ ಸೌಲಭ್ಯ ಅಡಿಯಲ್ಲಿ ಸೌಲಭ್ಯ ದೊರಕಿಸಿರುವುದು ಹೆಮ್ಮೆಯ ವಿಷಯವಾಗಿದೆ. ಬಡವರಿಗೆ ಕೂಲಿಕಾರ್ಮಿಕರಿಗೆ ಇದು ಅತ್ಯಂತ ಉಪಯುಕ್ತವಾಗಿದೆ ಎಂದರು.

8 ವರ್ಷ ಪೂರ್ಣಗೊಳಿಸಿರುವ ಕೇಂದ್ರ ಸರ್ಕಾರ ಸದೃಢ ಭಾರತ, ಅಭಿವೃದ್ಧಿಪರ ಭಾರತ ಹಾಗೂ ವಿಶ್ವ ಗುರು ಮಾಡುವ ನಿಟ್ಟಿನಲ್ಲಿ ಪ್ರಧಾನಿಗಳು ಸಂಕಲ್ಪ ತೊಟ್ಟು ನೇರ ಹಣ ವರ್ಗಾವಣೆ ಮಾಡುವ ಮೂಲಕ ಈ ಯೋಜನೆ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಸಚಿವರು ಸಂತಸ ವ್ಯಕ್ತಪಡಿಸಿದರು.

ವಿದ್ಯುತ್‌ ವ್ಯತ್ಯಯ: ಪರದಾಟ
ಗರೀಬ್ ಕಲ್ಯಾಣ್ ಸಮ್ಮೇಳನ ಆರಂಭಕ್ಕೂ ಮುನ್ನಸುಮಾರು 10ರಿಂದ 15 ನಿಮಿಷಗಳ ಕಾಲ ವಿದ್ಯುತ್‌ ವ್ಯತ್ಯಯವಾಗಿತ್ತು. ಇದರಿಂದ ಸಭಾಂಗಣದಲ್ಲಿ ಸೇರಿದ್ದ ಫಲಾನುಭವಿಗಳು, ಅಧಿಕಾರಿಗಳು ಪರದಾಡಿದರು. ಆಗ ಬರುತ್ತದೆ ಈಗ ವಿದ್ಯುತ್‌ ಬರುತ್ತದೆ ಎಂದು ಎದುರು ನೋಡುವುದೇ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.