ಗುರುಮಠಕಲ್: ಬಡವರು ಆರ್ಥಿಕವಾಗಿ ಸಬಲರಾಗಲು ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ ಎಂದು ತಾಲ್ಲೂಕು ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ ಹೇಳಿದರು.
ತಾಲ್ಲೂಕಿನ ಜೈಗ್ರಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗೊರನೂರು ಗ್ರಾಮದಲ್ಲಿ ‘ದುಡಿಯೋಣ ಬಾ’ ಅಭಿಯಾನ ಉದ್ದೇಶಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಬಿತ್ತನೆಗೆ ಬೀಜ ಖರೀದಿಸಲು ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ಸಿಕ್ಕಂತಾಗುತ್ತದೆ. ಅದಕ್ಕಾಗಿ ಎಲ್ಲರೂ ಪ್ರತಿನಿತ್ಯ ಬಂದು ಉದ್ಯೋಗ ಖಾತ್ರಿ ಕೆಲಸದಲ್ಲಿ ತೊಡಗಿಸಿಕೊಳ್ಳಿ ಎಂದರು.
ಬೇಸಿಗೆ ಕಾಲದಲ್ಲಿ ಮಹಾನಗರಗಳಿಗೆ ವಲಸೆ ಹೋಗುವುದು ತಡೆಗಟ್ಟಲು ನಿಮ್ಮೂರಲ್ಲಿಯೇ ದುಡಿಯೋಣ ಬಾ ಎಂಬ ಅಭಿಯಾನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಯಾರು ಗುಳೆ ಹೋಗಬಾರದು ಎಂದರು.
ಜೈಗ್ರಾಮ್ ಪಿಡಿಒ ಸೈಯದ್ ಅಲಿ ಮಾತನಾಡಿ, ಒಂದು ಕುಟುಂಬಕ್ಕೆ 100 ದಿನಗಳ ಕೆಲಸ ಪುರುಷ, ಮಹಿಳೆಗೂ ಸಮಾನ ಕೂಲಿ ದರ ₹370. ಅರ್ಜಿ ಸಂಖ್ಯೆ 6 ರಲ್ಲಿ ಕೆಲಸಕ್ಕಾಗಿ ಕೂಡಿ ಬೇಡಿಕೆ ಸಲ್ಲಿಸಿ. ನೀವು ಅರ್ಜಿ ಸಲ್ಲಿಸಿ 15 ದಿನಗಳ ಒಳಗೆ ಕೆಲಸ ಕೊಡಬೇಕು. ಇಲ್ಲದಿದ್ದರೆ ನೀವು ಮನೆಯಲ್ಲಿ ಕುಳಿತರು ನಿರುದ್ಯೋಗ ಭತ್ಯೆ ಕೊಡಲಾಗುತ್ತದೆ. ಕೆಲಸ ಮುಗಿದ ತಕ್ಷಣ ಹೊಸ ಕೆಲಸಕ್ಕಾಗಿ ಕೂಲಿ ಬೇಡಿಕೆ ಸಲ್ಲಿಸಿ ಎಂದು ಸಲಹೆ ನೀಡಿದರು.
ಕೂಲಿಕಾರರು ದುಡ್ಡು ಬರಲಿಲ್ಲ ಎಂದು ಚಿಂತಿಸಬೇಡಿ, ಸರ್ಕಾರದ ದುಡ್ಡು ಎಲ್ಲಿಗೂ ಹೋಗುವುದಿಲ್ಲ. ನಿಮ್ಮ ದುಡ್ಡು ನಿಮ್ಮ ಖಾತೆಗೆ ಜಮೆ ಆಗುತ್ತದೆ ಎಂದರು.
ಐಇಸಿ ತಾಲ್ಲೂಕು ಸಂಯೋಜಕ ರಾಘವೇಂದ್ರ ಮಾತನಾಡಿ, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಕೆಲಸದಲ್ಲಿ ಶೇಕಡ 50ರಷ್ಟು ರಿಯಾಯಿತಿ ಇದೆ. 18 ವರ್ಷ ಮೇಲ್ಪಟ್ಟವರು ಕೆಲಸಕ್ಕೆ ಬನ್ನಿ. ಜಾಬ್ ಕಾರ್ಡ್ ಇಲ್ಲದವರು ಜಾಬ್ ಕಾರ್ಡ್ ಮಾಡಿಸಬೇಕು. ಏಕೀಕೃತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಕೂಲಿ ಬೇಡಿಕೆ ಸಲ್ಲಿಸಬಹುದು ಎಂದು ತಿಳಿಸಿದರು.
ಎನ್‌ಆರ್‌ಎಲ್‌ಎಂವಲಯ ಮೇಲ್ವಿಚಾರಕ ಶೇಖರ್ ಮಾತನಾಡಿ, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಜೀವ ವಿಮಾ ಯೊಜನೆಗಳ ಸಮಗ್ರ ಮಾಹಿತಿ ಮತ್ತು ಲಾಭದ ಕುರಿತು ತಿಳಿಸಿದರು. ಈ ಜೀವ ವಿಮೆಗಳು ಮಾಡಿಸುವಂತೆ ಕೂಲಿಕಾರರಿಗೆ ಅರಿವು ಮೂಡಿಸಲಾಯಿತು.
ನಂತರ ಕೂಲಿಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ದಪ್ಪ ಸ್ವಾಮಿ, ಉಪಾಧ್ಯಕ್ಷ ಶೇಖರ್ ಸದಸ್ಯ ದಾನಪ್ಪ, ಡಿಇಒ ರಾಮು, ಬಿಎಫ್ಟಿ ಯೆಂಕಣ್ಣ, ಸಿಎಚ್ಒ ಚೇತನ್, ಆರೋಗ್ಯ ನಿರೀಕ್ಷಣಾಧಿಕಾರಿ ಸಾಬಣ್ಣ ಸೇರಿದಂತೆ ಮೇಟಿಗಳು ಮತ್ತು ಕೂಲಿಕಾರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.