ಸುರಪುರ: ನಗರಕ್ಕೆ ನೀರು ಪೂರೈಸುವ ತಾಲ್ಲೂಕಿನ ಕಂಪಾಪುರ ಜಾಕ್‍ವೆಲ್‍ಗೆ ತಹಶೀಲ್ದಾರ್ ಕೆ. ವಿಜಯಕುಮಾರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಗುರುವಾರ ಭೇಟಿ ನೀರಿನ ಸಂಗ್ರಹಣೆ ಪ್ರಮಾಣ ಪರಿಶೀಲಿಸಿದರು.
ನದಿ ಹರಿಯುವಿಕೆ, ಜಾಕ್‍ವೆಲ್‍ನಲ್ಲಿನ ನೀರು ಸಂಗ್ರಹ, ಸಂಗ್ರಹದ ನೀರು ಎಷ್ಟು ದಿನಗಳವರೆಗೂ ಸಾಕಾಗಬಹುದು. ನೀರು ನಿಲುಗಡೆ, ಸಂಗ್ರಹಣೆ ಸೇರಿ ನೀರು ಹಿಡಿದಿಟ್ಟುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಿದರು. ಯಾವುದೇ ಕಾರಣಕ್ಕೂ ಜಾಕ್‍ವೆಲ್‍ನಲ್ಲಿ ನೀರಿನ ಪ್ರಮಾಣ ಇಳಿಮುಖವಾಗದಂತೆ ನೋಡಿಕೊಳ್ಳಬೇಕು ಎಂದು ಜಾಕವೆಲ್ ನಿರ್ವಹಣೆಯ ಅಧಿಕಾರಿಗಳಿಗೆ ಸೂಚಿಸಿದ ತಹಶೀಲ್ದಾರ್, ಅನಧಿಕೃತ ಪಂಪಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಿದರು.
‘ಬೇಸಿಗೆಯಲ್ಲಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಸಿದ್ಧತೆಗಳನ್ನು ಮಾಡಕೊಳ್ಳಲಾಗುತ್ತಿದೆ. ವಿವಿಧ ಇಲಾಖೆಯ ಅಧಿಕಾರಿಗಳ ಜತೆಯಲ್ಲಿ ಕಂಪಾಪುರ ಜಾಕ್‍ವೆಲ್‍ಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಲಾಗಿದೆ. ಜಾಕ್‍ವೆಲ್‍ನಲ್ಲಿ ಸುಮಾರು ಇನ್ನೂ ಒಂದು ತಿಂಗಳಾಗುವಷ್ಟು ನೀರಿದೆ. ಮುಂದಿನ ದಿನಗಳಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಕೃಷ್ಣಾ ನದಿಗೆ ನೀರು ಬಿಡಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ನಗರಸಭೆಯ ಪ್ರಭಾರ ಪೌರಾಯುಕ್ತ ಶಾಂತಪ್ಪ ಹೊಸೂರು, ಜಲಮಂಡಳಿ ಎ.ಇ.ಶಂಕರಗೌಡ, ಜೆಸ್ಕಾಂ ಎಇಇ, ಕೆಬಿಜೆಎನ್‌ಎಲ್, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.