ವಡಗೇರಾ: ಜಮೀನುಗಳಲ್ಲಿ ಒಂದೇ ಬೆಳೆ ಬೆಳೆಯದೆ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಣಪತಿ ಹೇಳಿದರು.
ಪಟ್ಟಣದ ಕಲಿಕೆ ಟ್ರಸ್ಟ್ ಕಚೇರಿಯ ಮುಂಭಾಗದಲ್ಲಿ ಕಲಿಕೆ ಟಾಟಾ ಟ್ರಸ್ಟ್ ಟೆಸ್ಕೊ ಜೀವನೋಪಾಯ ಕಾರ್ಯಕ್ರಮ ಮತ್ತು ಕೃಷಿ ಇಲಾಖೆ ಸಂಯೋಗದಲ್ಲಿ ಆಯೋಜಿಸಿದ್ದ ತೋಟಗಾರಿಕೆ ಬೆಳೆಯ ತರಬೇತಿ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹಲವಾರು ಸೌಲಭ್ಯಗಳು ಹಾಗೂ ರಿಯಾಯಿತಿ ದರದಲ್ಲಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಯೋಜನೆಗಳು ಇವೆ. ಅವುಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತೋಟಗಾರಿಗೆ ಇಲಾಖೆಯ ತಾಲ್ಲೂಕು ಸಹಾಯಕ ಅಧಿಕಾರಿ ಶ್ರೀಮಂತ ಮಾತನಾಡಿ, ತೋಟಗಾರಿಕೆ ಮಾಡುವುದರಿಂದ ಸಾಕಷ್ಟು ಲಾಭ ಪಡೆಯಬಹುದು. ಅದಕ್ಕೆ ನಿರ್ದಿಷ್ಟ ಸ್ಥಳ ಅಥವಾ ಜಮೀನು ಬೇಕಾಗಿಲ್ಲ. ಮನೆಯ ಹಿತ್ತಲಲ್ಲಿಯೇ ಕೈತೋಟ ಮಾಡಿ ವಿವಿಧ ರೀತಿಯ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆದು ಆದಾಯ ಗಳಿಸಬಹುದು ಎಂದು ಹೇಳಿದರು.
ಕಲಿಕೆ ಜೀವನೋಪಾಯ ಕಾರ್ಯಕ್ರಮ ಅಧಿಕಾರಿಗಳಾದ ಸಾಯಿ ಶ್ರೀಕಾಂತ್ ರೆಡ್ಡಿ ಅವರು ಕಲಿಕೆ ಜೀವನೋಪಾಯ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
ಕೃಷಿ ತಜ್ಞ ಕಿರಣ ಕಸರೆಡ್ಡಿ ಅವರು ತೋಟಗಾರಿಕೆ ಬೆಳೆಗಳಾದ ಮಾವು, ನಿಂಬೆ ಹಾಗೂ ಪೇರಲ(ಜಂಪಲ್) ಬೆಳೆಯ ಬೇಸಾಯ ಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿದರು.
ಇದೇ ಸಂದರ್ಭದಲ್ಲಿ ಸಣ್ಣ, ಅತಿಸಣ್ಣ ರೈತರಿಗೆ ವಿವಿಧ ಬಗೆಯ ಒಂದು ಸಾವಿರ ತೋಟಗಾರಿಕೆ ಸಸಿಗಳನ್ನು ವಿತರಿಸಲಾಯಿತು.
ಅನುರಾಧಾ, ಸುಧಾರಾಣಿ, ಅರುಣಕುಮಾರ ಗುಬ್ಬಿ, ಹಸನ, ರಜಾಕ ಹಾಗೂ ಕ್ಷೇತ್ರ ಸಹಾಯಕರಾದ ಕುಮಾರ್ ಎಸ್.ತೆಳಿಗೇರಿ, ಮೊಮ್ಮದ ರಫಿ ಉಪಸ್ಥಿತರಿದ್ದರು.
ಜೀವನೋಪಾಯ ಕಾರ್ಯಕ್ರಮದ ಹಿರಿಯ ಸಂಯೊಜಕರಾದ ಶಾಂತಗೌಡ ಬಿರಾದಾರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.