ADVERTISEMENT

‘ಶೇ 4ರಷ್ಟು ಮಾತ್ರ ಸಕ್ರಮಕ್ಕೆ ಇಂಟರ್‌ನೆಟ್‌ ಬಳಕೆ’

ಸೈಬರ್ ಸೆಕ್ಯೂರಿಟಿ, ಇ-ಆಡಳಿತ ಕುರಿತು ವಿಶೇಷ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 6:36 IST
Last Updated 25 ಫೆಬ್ರುವರಿ 2021, 6:36 IST
ಯಾದಗಿರಿಯಲ್ಲಿ ಹಮ್ಮಿಕೊಂಡಿದ್ದ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಶೇಷ ಕಾರ್ಯಾಗಾರವನ್ನು ಸಸಿಗೆ ನೀರೆರೆಯುವ ಮೂಲಕ ಅಧಿಕಾರಿಗಳು ಉದ್ಘಾಟಿಸಿದರು
ಯಾದಗಿರಿಯಲ್ಲಿ ಹಮ್ಮಿಕೊಂಡಿದ್ದ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಶೇಷ ಕಾರ್ಯಾಗಾರವನ್ನು ಸಸಿಗೆ ನೀರೆರೆಯುವ ಮೂಲಕ ಅಧಿಕಾರಿಗಳು ಉದ್ಘಾಟಿಸಿದರು   

ಯಾದಗಿರಿ: ‘ಜಗತ್ತಿನಲ್ಲಿ ಅಂತರ್ಜಾಲವನ್ನು ಕೇವಲ ಶೇ 4ರಷ್ಟು ಮಾತ್ರ ಸಕ್ರಮ ಕಾರ್ಯಗಳಿಗೆ ಬಳಸುತ್ತಿದ್ದು, ಇನ್ನುಳಿದ ಶೇ 96 ರಷ್ಟು ಅಕ್ರಮವಾಗಿ ಬಳಸುತ್ತಿದ್ದಾರೆ. ಹ್ಯಾಕಿಂಗ್ ತಡೆಗಟ್ಟಲು ಒಟಿಪಿ ಕ್ರಮ ಬಳಸುತ್ತಿರುವುದು ನಮ್ಮ ದೇಶ ಮಾತ್ರ’ ಎಂದು ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ವಿವೇಕ ಹೊನಗುಂಟಿಕರ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರ, ಆಡಳಿತ ಸಂಸ್ಥೆ ಮೈಸೂರು, ಬೆಂಗಳೂರಿನ ಇ-ಆಡಳಿತ ಕೇಂದ್ರ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ, ಸಹಯೋಗದೊಂದಿಗೆ ಎನ್‍ಇಜಿಡಿ ಸಾಮರ್ಥ್ಯಭಿವೃದ್ಧಿ ಯೋಜನೆಯಡಿ ಆಯೋಜಿಸಿದ್ದ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಅಂತರ್ಜಾಲದಲ್ಲಿ ಉಚಿತವಾಗಿ ಸಿಗುವ ಆ್ಯಪ್ ಮತ್ತು ಸಾಫ್ಟ್‌ವೇರ್‌ಗಳ ಬಳಕೆಯಿಂದ ಅನುಮತಿಯಿಲ್ಲದೇ ಮಾಹಿತಿ ಕದಿಯುವ (ಹ್ಯಾಕಿಂಗ್) ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ತಿಳಿಸಿದರು.

‘ಇಂದಿನ ದಿನಗಳಲ್ಲಿ ಹ್ಯಾಕಿಂಗ್ ಮತ್ತು ಹ್ಯಾಕರ್ಸ್ ಕಾನೂನು ಬಾಹಿರವಾಗಿ ತೀರಾ ಖಾಸಗಿ ವಿಷಯಗಳನ್ನು ಕದಿಯುತ್ತಿದ್ದು, ಇದನ್ನು ತಡೆಯಲು ಮೊಬೈಲ್ ಮತ್ತು ಕಂಪ್ಯೂಟರ್‌ಗಳಲ್ಲಿ ಅಂತರ್ಜಾಲ ಬಳಸಿ ಇನ್‍ಸ್ಟಾಲ್ ಮಾಡಿಕೊಳ್ಳುವ ಆ್ಯಪ್ ಮತ್ತು ಸಾಫ್ಟ್‌ವೇರ್‌ಗಳಿಂದ ವೈರಸ್ ಇನ್‍ಸ್ಟಾಲ್ ಆಗುತ್ತದೆ. ಹೀಗಾಗಿ ಹ್ಯಾಕಿಂಗ್ ಮಾಡಲು ಹ್ಯಾಕರ್ಸ್‌ಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಸಾಮಾಜಿಕ ಜಾಲತಾಣಗಳ ಮೂಲಕ ನೋಟಿಫಿಕೇಷನ್‌ಗಳನ್ನು ಕಳುಹಿಸಿ ನಮ್ಮ ಗಮನ ಸೆಳೆಯಲು ಆಮಿಷಯೊಡ್ಡಿ ಹಣ ಸೇರಿದಂತೆ ನಮ್ಮ ಮಾಹಿತಿಗಳನ್ನು ಕದಿಯುತ್ತಾರೆ. ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ’ ಸಲಹೆ ನೀಡಿದರು.

ಅಬಕಾರಿ ಇಲಾಖೆ ಉಪ ಆಯುಕ್ತ ಶಿವನಗೌಡ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಅಂಬೋಜಿ ನಾಯ್ಕೊಡಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಜಿತ್ ನಾಯಕ್, ಡಿಸ್ಟ್ರಿಕ್ಟ್ ಇನ್ಫಾರಮಿಟಿಕ್ ಅಧಿಕಾರಿ ಶ್ರೀನಿವಾಸರಾವ ಕುಲಕರ್ಣಿ, ಕಲಬುರ್ಗಿ ವಿಭಾಗ ಇ-ಆಡಳಿತ ಸಂಸ್ಥೆಯ ಹಿರಿಯ ಬೋಧಕರು ಕವಿತಾ ಎಂ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.