ADVERTISEMENT

ಬೀಳುವ ಸ್ಥಿತಿಯಲ್ಲಿ ನೀರಿನ ಟ್ಯಾಂಕ್

ಕಿಲ್ಲನಕೇರಾ: ಜೀವ ಭಯದಲ್ಲಿ ಶಾಲಾ ಮಕ್ಕಳು, ಶಿಕ್ಷಕರು

ಮಲ್ಲಿಕಾರ್ಜುನ ಅರಿಕೇರಕರ್
Published 20 ಏಪ್ರಿಲ್ 2021, 3:11 IST
Last Updated 20 ಏಪ್ರಿಲ್ 2021, 3:11 IST
ಸೈದಾಪುರ ಸಮೀಪದ ಕಿಲ್ಲನಕೇರಾ ಗ್ರಾಮದಲ್ಲಿ ಶಾಲೆ ಪಕ್ಕದಲ್ಲೇ ಶಿಥಿಲಗೊಂಡಿರುವ ನೀರಿನ ಟ್ಯಾಂಕ್ ಇರುವುದು
ಸೈದಾಪುರ ಸಮೀಪದ ಕಿಲ್ಲನಕೇರಾ ಗ್ರಾಮದಲ್ಲಿ ಶಾಲೆ ಪಕ್ಕದಲ್ಲೇ ಶಿಥಿಲಗೊಂಡಿರುವ ನೀರಿನ ಟ್ಯಾಂಕ್ ಇರುವುದು   

ಕಿಲ್ಲನಕೇರಾ (ಸೈದಾಪುರ): ಸಮೀಪದ ಕಿಲ್ಲನಕೇರಾ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಕಟ್ಟಡಕ್ಕೆ ಅಂಟಿಕೊಂಡಿರುವ ನೀರು ಸಂಗ್ರಹ ಟ್ಯಾಂಕ್ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಯಾವಾಗ ಬೇಕಾದರೂ ಕುಸಿದು ಬಿದ್ದು ಅಪಾಯವನ್ನು ಸೃಷ್ಟಿಸುವಂತಿದೆ.

ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಕುಡಿಯುವ ನೀರಿನ ಟ್ಯಾಂಕ್ ಕುಸಿದು ಬೀಳುವ ಹಂತ ತಲುಪಿದೆ. ಇದರಿಂದಾಗಿ ಶಾಲೆಗೆ ಆಗಮಿಸುವ ಶಿಕ್ಷಕರು ಮತ್ತು ಮಕ್ಕಳು ಹಾಗೂ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಭಯದಲ್ಲಿ ಕಾಲ ಕಳೆಯುವಂತಾಗಿದೆ. ಸಮರ್ಪಕ ನಿರ್ವಹಣೆ ಇಲ್ಲದೆಟ್ಯಾಂಕ್‍ನ ಸಿಮೆಂಟ್ ಕಿತ್ತು ಬೀಳುತ್ತಿದೆ. ನೀರಿನ ಟ್ಯಾಂಕ್‍ನ ಆಧಾರ ಸ್ತಂಭಗಳಲ್ಲಿರುವ ಕಬ್ಬಿಣದ ಸಲಾಕೆಗಳು ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಇದರಿಂದ ಯಾವುದೇ ಕ್ಷಣದಲ್ಲಾದರೂ ನೀರಿನ ಟ್ಯಾಂಕ್ ಶಾಲಾ ಕೋಣೆಗಳ ಮೇಲೆ ಕುಸಿದು ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯಿದೆ. ನೀರು ಸಂಗ್ರಹದ ತೊಟ್ಟಿಯ ಕೆಳಭಾಗ ಸಂಪೂರ್ಣ ಶಿಥಿಲಗೊಂಡಿದೆ. ಇಷ್ಟಾದರೂ ಇದೇ ನೀರಿನ ಟ್ಯಾಂಕ್‍ನಲ್ಲಿ ನೀರನ್ನು ಸಂಗ್ರಹಿಸಲಾಗುತ್ತಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ: ಶಿಥಿಲಗೊಂಡಿರುವ ನೀರಿನ ಟ್ಯಾಂಕನ್ನು ನೆಲಸಮಗೊಳಿಸಿ ನೂತನ ಟ್ಯಾಂಕ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಇಲ್ಲಿಯವರೆಗೂ ಯಾವುದೇ ರೀತಿಯ ಸೂಕ್ತ ಕ್ರಮವನ್ನು ತೆಗೆದುಕೊಳ್ಳದೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಧಿಕ ಗಾಳಿ ಮಳೆಯಿಂದ ಟ್ಯಾಂಕ್ ಕುಸಿದು ಬಿದ್ದು ಅಪಾಯ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಬಿರುಕು ಬಿಟ್ಟ ಟ್ಯಾಂಕನ್ನು ನೆಲಸಮಗೊಳಿಸಿ ನೂತನ ಟ್ಯಾಂಕ್‍ ನಿರ್ಮಾಣ ಮಾಡಿ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿ ವರ್ಷಗಳೇ ಕಳೆದಿವೆ. ಇಲ್ಲಿಯವರೆಗೂ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ಸಿಗದಿರುವುದು ಬೇಸರದ ಸಂಗತಿಯಾಗಿದೆ ಎನ್ನುತ್ತಾರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನ
ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.