ADVERTISEMENT

ವೈಭವದ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:51 IST
Last Updated 26 ಅಕ್ಟೋಬರ್ 2025, 7:51 IST
ಕೆಂಭಾವಿಯ ಉತ್ತರಾದಿ ಮಠದಲ್ಲಿ ಶನಿವಾರ ಸತ್ಯಪ್ರಮೋದತೀರ್ಥರ ಆರಾಧನೆ ಅಂಗವಾಗಿ ವೈಭವದ ಪಲ್ಲಕ್ಕಿ ಉತ್ಸವ ನಡೆಯಿತು
ಕೆಂಭಾವಿಯ ಉತ್ತರಾದಿ ಮಠದಲ್ಲಿ ಶನಿವಾರ ಸತ್ಯಪ್ರಮೋದತೀರ್ಥರ ಆರಾಧನೆ ಅಂಗವಾಗಿ ವೈಭವದ ಪಲ್ಲಕ್ಕಿ ಉತ್ಸವ ನಡೆಯಿತು   

ಕೆಂಭಾವಿ: ಪಟ್ಟಣದ ಉತ್ತರಾದಿಮಠದ ಯತಿಚತುಷ್ಟಯರ (ಜಯ ತೀರ್ಥರು, ರಘೂತ್ತಮ ತೀರ್ಥರು, ರಾಘವೇಂದ್ರ ತೀರ್ಥರು, ಸತ್ಯಪ್ರಮೋದ ತೀರ್ಥರು) ವೃಂದಾವನ ಸನ್ನಿಧಾನದಲ್ಲಿ ಉತ್ತರಾದಿ ಮಠದ ಸತ್ಯಪ್ರಮೋದ ತೀರ್ಥರ ಆರಾಧನಾ ಮಹೋತ್ಸವ ಬಹು ವಿಜೃಂಬಣೆಯಿಂದ ನೆರವೇರಿತು.

ಆರಾಧನೆ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಸುಪ್ರಭಾತ, ಅಷ್ಟೊತ್ತರ, ವಿಷ್ಣು ಸಹಸ್ರನಾಮ, ಸುಂದರಕಾಂಡ ಪಾರಾಯಣ, ಪಂಚಾಮೃತ, ವಿಶೇಷ ಅಲಂಕಾರ, ಸಂಗೀತ, ಭಜನೆ, ಪ್ರವಚನ, ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಸತ್ಯಪ್ರಮೋದ ತೀರ್ಥರ 28ನೇ ಆರಾಧನಾ ಮಹೋತ್ಸವದ ನಿಮಿತ್ತ ಶನಿವಾರ ಉಪನ್ಯಾಸ ನೀಡಿದ ಕಲಬುರಗಿಯ ಮಾಧವಾಚಾರ್ಯರು, ‘ಮಹಾತ್ಮರ, ಯತಿಗಳ ಆರಾಧನೆಯಲ್ಲಿ ಜ್ಞಾನಕಾರ್ಯ ಮಾಡುವುದು ಅತೀ ಅವಶ್ಯ. ಜ್ಞಾನಕಾರ್ಯ ಮಾಡದೆ ಆರಾಧನೆಗಳಿಗೆ ಮಹತ್ವ ಬರುವುದಿಲ್ಲ’ ಎಂದರು.

ADVERTISEMENT

‘ಗುರುಗಳ ಮತ್ತು ಭಗವಂತನ ಮಹಿಮೆಗಳನ್ನು ಕೇಳಬೇಕಾದರೆ ಜ್ಞಾನಕಾರ್ಯ ಏರ್ಪಡಿಬೇಕು. ಸತ್ಯಪ್ರಮೋದ ತೀರ್ಥರು ಉತ್ತರಾದಿ ಮಠದ ಮಹಾನ ಚೇತನರು. ಹಲವು ಗ್ರಂಥಗಳ ರಚನೆ ಹಾಗೂ ದೇಶದಲ್ಲಿ ನೂರಾರು ವಿದ್ವಾಂಸರನ್ನು ತಯಾರಿಸಿದ ಕೀರ್ತಿ ಸತ್ಯಪ್ರಮೋದ ತೀರ್ಥರಿಗೆ ಸಲ್ಲುತ್ತದೆ’ ಎಂದರು.

ರಾಯಚೂರಿನ ಮುಕುಂದಾಚಾರ್ಯ ಗುರುಗಳ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉತ್ತರಾರಾಧನೆಯ ದಿನವಾದ ಶನಿವಾರ ಪಲ್ಲಕ್ಕಿ ಮೆರವಣಿಗೆ ನಾಡಿಗೇರ ಹನುಮಂತ ದೇವರ ದೇವಸ್ಥಾನಕ್ಕೆ ಹೋಗಿ ಬರುವ ಮೂಲಕ ಮೂರು ದಿನಗಳ ಆರಾಧನಾ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಮೋಹನರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ ಹಾಗೂ ವಾಮನರಾವ ದೇಶಪಾಂಡೆ ಅನ್ನ ಸಂತರ್ಪಣೆ ಸೇವೆ ಮಾಡಿದರು.

ಜಯ ಸತ್ಯಪ್ರಮೋದ ಸೇವಾ ಸಂಘದ ಕಾರ್ಯಕರ್ತರು, ಪ್ರಮೋದಿನ ಮಹಿಳಾ ಭಜನಾ ಮಂಡಳಿಯ ಕಾರ್ಯಕರ್ತರು ಹಾಗೂ ಸತ್ಯಪ್ರಮೋದ ಯುವ ಸೇನೆಯ ಪದಾಧಿಕಾರಿಗಳು ಸೇರಿದಂತೆ ಹಲವು ಭಕ್ತರು ಆರಾಧನೆಯಲ್ಲಿ ಭಾಗವಹಿಸಿದ್ದರು.