ADVERTISEMENT

ಯಾದಗಿರಿ‍: ಗ್ರಾಮ ಪಂಚಾಯಿತಿ ನೌಕರರ 9ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ

ಪಂಚಾಯಿತಿಗಳ ಆರ್ಥಿಕ ಸಬಲತೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:18 IST
Last Updated 13 ಸೆಪ್ಟೆಂಬರ್ 2025, 5:18 IST
ಯಾದಗಿರಿಯಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ನೌಕರರ 9ನೇ ರಾಜ್ಯ ಸಮ್ಮೇಳನ ಅಂಗವಾಗಿ ನಡೆದ ಮೆರವಣಿಗೆ
ಯಾದಗಿರಿಯಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ನೌಕರರ 9ನೇ ರಾಜ್ಯ ಸಮ್ಮೇಳನ ಅಂಗವಾಗಿ ನಡೆದ ಮೆರವಣಿಗೆ   

ಯಾದಗಿರಿ: ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ–1993ರ ಅನ್ವಯ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸಿ, ಸಂವಿಧಾನಿಕವಾಗಿ ಪಂಚಾಯಿತಿ ವ್ಯವಸ್ಥೆಯು ಬಲಿಷ್ಠವಾಗಲು ಗ್ರಾಮ ಪಂಚಾಯಿತಿಗಳ ಆರ್ಥಿಕ ಸಬಲತೆಯ  ಅವಶ್ಯವಿದೆ ಎಂಬ ಅಭಿಪ್ರಾಯವು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ರಾಜ್ಯ ಸಮ್ಮೇಳನದಲ್ಲಿ ವ್ಯಕ್ತವಾಯಿತು.

ನಗರದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಸಂಯೋಜಿತ ಮೂರು ದಿನ ನಡೆಯುವ ಗ್ರಾಮ ಪಂಚಾಯಿತಿ ನೌಕರರ 9ನೇ ರಾಜ್ಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ಸಿಕ್ಕಿತು.  ನಾನಾ ಜಿಲ್ಲೆಗಳಿಂದ ಬಂದಿದ್ದ ನೂರಾರು ಪ್ರತಿನಿಧಿಗಳು ಸಿಐಟಿಯು ಬಾವುಟ ಹಿಡಿದು ಹಳೇ ಬಸ್ ನಿಲ್ದಾಣದಿಂದ ಸಮ್ಮೇಳನ ನಡೆಯುವ ಕೆಇಬಿ ಕಲ್ಯಾಣ ಮಂಟಪದ ವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಘೋಷಣೆಗಳನ್ನು ಕೂಗಿದರು.

ಸಮ್ಮೇಳನ ಉದ್ಘಾಟಿಸಿ  ಮಾತನಾಡಿದ ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ, ‘ಗ್ರಾಮ ಪಂಚಾಯಿತಿಗಳು ದೇಶದ ಬೆನ್ನೆಲುಬು. ಹಣಕಾಸಿನ ನೆರವಿಲ್ಲದೆ ಪಂಚಾಯಿತಿಗಳ ಸಬಲೀಕರಣ ಮಾಡುವುದು ಸಾಧ್ಯವಿಲ್ಲ. 15ನೇ ಹಣಕಾಸು ಆಯೋಗದಡಿ ಕೇಂದ್ರ ಸರ್ಕಾರವು ಅನುದಾನ ಹಂಚಿಕೆ ಮಾಡುವ ವಿಧಾನ ಹಾಗೂ ಮಾಪನಗಳು ಸರಿಯಾಗಿ ಇಲ್ಲ. ಇದರಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ಸಾವಿರಾರು ಕೋಟಿ ರೂಪಾಯಿ ಅನುದಾನ ಕೈತಪ್ಪಿ ಹೋಗುತ್ತಿದೆ’ ಎಂದರು.

ADVERTISEMENT

‘ಕಾರ್ಮಿಕ ಇಲಾಖೆಯೂ ಕನಿಷ್ಠ ವೇತನದಡಿ ನೋಟಿಫಿಕೇಷನ್ ಹೊರಡಿಸಬೇಕಿದೆ. ಆದರೆ, ಖಾಸಗಿ ಕಂಪನಿಯ ಶಕ್ತಿಗಳು ನೋಟಿಫಿಕೇಷನ್ ಹೊರಡಿಸದಂತೆ ಅಡ್ಡಿಯಾಗಿ ನಿಂತಿವೆ. ವೈಜ್ಞಾನಿಕವಾಗಿ ಬೆಲೆ ಏರಿಕೆ ಆಧಾರದ ಮೇಲೆ ವೇತನ ಮಾಡುವಂತೆ ನ್ಯಾಯಾಲಯವೂ ಸೂಚಿಸಿದೆ. ಮೂರ್ನಾಲ್ಕು ಬಾರಿ ಸಭೆಯಾದರೂ ಅದು ಅನುಷ್ಠಾನಕ್ಕೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗ್ರಾ.ಪಂ ಸಬಲೀಕರಣದ ಭಾಗವಾಗಿ ನಾಲ್ಕು ವರ್ಷವಾದರೂ ನೌಕರರ ವೇತನ ಹೆಚ್ಚಿಸಿಲ್ಲ. ಪ್ರತಿ ತಿಂಗಳ ವೇತನವೂ ಸರಿಯಾಗಿ ಕೊಡುವುದಿಲ್ಲ. ಗ್ರಾಮೀಣಾಭಿವೃದ್ಧಿಯ ಸಚಿವರು ಪಂಚಾಯಿತಿಗಳ ಸಬಲೀಕರಣದ ತೀರ್ಮಾನ ಮಾಡುವ ಬಗ್ಗೆ ಬದ್ಧತೆ ತೋರಬೇಕು. ಪಂಚಾಯಿತಿಗಳನ್ನೇ ನಂಬಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ನೌಕರರ ಸಂಕಷ್ಟಗಳನ್ನೂ ಅರ್ಥೈಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಮಾತನಾಡಿ, ‘ಸರ್ಕಾರಗಳು ಜನರ ಮಧ್ಯದಲ್ಲಿ ಜಾತಿ ಮತ್ತು ಧರ್ಮದ ವಿಷ ಬೀಜ ಬಿತ್ತಿ ಭಾವನೆಗಳನ್ನು ಒಡೆಯುವ ಕೆಲಸ ಮಾಡುತ್ತಿದೆ. ಜನರನ್ನು ವಿಂಗಡಿಸುವ ಕೆಲಸವೂ ಮಾಡುತ್ತದೆ. ಆದರೆ, ಗ್ರಾಮ ಪಂಚಾಯಿತಿ ನೌಕರರು ಜನರ ಕೊಂಡಿಯಾಗಿ ಕೆಲಸ ಮಾಡುತ್ತಿದೆ’ ಎಂದರು.

ನೌಕರರ ಸಂಘದ ರಾಜ್ಯ ಅಧ್ಯಕ್ಷ ಎಂ.ಬಿ. ನಾಡಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯಾದಗಿರಿ ತಾಲ್ಲೂಕು ಪಂಚಾಯಿತಿ ಇಒ ಮಹಾದೇವ ಬಾಬಳಗಿ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಪ್ಪ ಆನೆಗುಂದಿ, ಸಂಘದ ಖಜಾಂಚಿ ಆರ್‌.ಎಸ್.ಬಸವರಾಜ, ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ಜಿಲ್ಲಾ ಅಧ್ಯಕ್ಷ ಬಸವರಾಜ ದೊರೆ, ಸಿಐಟಿಯು ಜಿಲ್ಲಾ ಮುಖಂಡ ಜೈಲಾಲ್ ತೋಟದ್, ಪ್ರಮುಖರಾದ ಐ.ನಿ. ಇಳಿಗೇರ, ಗೈಬುಖಾನ್, ಶೋಭಾ ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಶುಕ್ರವಾರ ನಡೆದ ರಾಜ್ಯ ಗ್ರಾಮ ಪಂಚಾಯಿತಿ ನೌಕರರ 9ನೇ ರಾಜ್ಯ ಸಮ್ಮೇಳನದಲ್ಲಿ ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿದರು
ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ₹ 31 ಸಾವಿರ ನಿಗದಿ ಮಾಡಿ  ಜಾರಿಗೆ ತರಲು ರಾಜ್ಯ ಸರ್ಕಾರವು ವಿಳಂಬ ಮಾಡುತ್ತಿದೆ.
– ಎಸ್.ವರಲಕ್ಷ್ಮಿ, ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ

‘ಯೋಜನೆಗಳು ಜನರಿಗೆ ಮುಟ್ಟಿಸುವರು’

‘ಸರ್ಕಾರದ ಯಾವುದೇ ಯೋಜನೆಗಳು ತಳಮಟ್ಟದ ಫಲಾನುಭವಿಗಳಿಗೆ ಮುಟ್ಟಿಸುವವರು ಗ್ರಾಮ ಪಂಚಾಯಿತಿಯ ನೌಕರರು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಾಡಿಯಾ ಹೇಳಿದರು.

‘ಸಿಇಒ ಇಒ ಪಿಡಿಒಗಳು ಕೆಲ ವರ್ಷಗಳ ಬಳಿಕ ವರ್ಗಾವಣಿಯಾಗಿ ಹೋಗುತ್ತಾರೆ. ಆದರೆ ಪಂಚಾಯಿತಿಯ ನೌಕರರು ಅಲ್ಲಿಯೇ ಇದ್ದು ಸ್ಥಳೀಯರಾಗಿದ್ದುಕೊಂಡು ಜನರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಹೀಗಾಗಿ ಗ್ರಾಮೀಣ ಭಾಗದ ಮತ್ತು ಪಂಚಾಯಿತಿಯ ಅಭಿವೃದ್ಧಿಯಲ್ಲಿ ನೌಕರರ ಪತ್ರ ಮಹತ್ವದಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.