ಯಾದಗಿರಿ: ಗುರುಮಠಕಲ್‌ನಲ್ಲಿನ ₹ 1.21 ಕೋಟಿ ಮೌಲ್ಯದ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಆರೋಪ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಸಿಐಡಿ ತಂಡದ ಅಧಿಕಾರಿಗಳು, ಶುಕ್ರವಾರ ಗುರುಮಠಕಲ್‌ನಲ್ಲಿರುವ ಎರಡು ರೈಸ್ ಮಿಲ್‌ಗಳಿಗೆ ತೆರಳಿ ಸ್ಥಳ ಮಹಜರ್ ಮಾಡಿದ್ದಾರೆ.
ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ಹಾಗೂ ತನಿಖಾ ತಂಡದ ಮುಖ್ಯಸ್ಥರಾಗಿರುವ ಸಿಐಡಿ ಎಸ್‌ಪಿ ಎಂ.ಡಿ. ಶರತ್ ಅವರ ಮಾರ್ಗದರ್ಶನದಲ್ಲಿ ಸಿಐಡಿ ಇನ್‌ಸ್ಪೆಕ್ಟರ್‌ಗಳಾದ ಅನಿಲ್‌ಕುಮಾರ್, ಸಚಿನ್‌ಕುಮಾರ್, ಎಎಸ್‌ಐ ಹರ್ಷಕುಮಾರ್ ಹಾಗೂ ಹೆಡ್‌ಕಾನ್‌ಸ್ಟೆಬಲ್ ದಿನೇಶ ಅವರಿದ್ದ ತಂಡವು ತನಿಖೆಯನ್ನು ಕೈಗೆತ್ತಿಕೊಂಡಿದೆ.
ಎಲ್ಲ ಕಡೆಗಳಿಗೆ ನೋಟಿಸ್ ಕೊಟ್ಟು ತನಿಖೆಯನ್ನು ಆರಂಭಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗುರುಮಠಕಲ್ ತಹಶೀಲ್ದಾರ್ ಹಾಗೂ ಪಂಚರನ್ನು ಕರೆಯಿಸಿಕೊಂಡ ಅಧಿಕಾರಿಗಳು ಶ್ರೀಲಕ್ಷ್ಮಿ ವೆಂಕಟೇಶ್ವರ ರೈಸ್ ಮಿಲ್ ಹಾಗೂ ಶ್ರೀಲಕ್ಷ್ಮಿ ಬಾಲಾಜಿ ರೈಸ್ ಮಿಲ್‌ಗಳನ್ನು ಪರಿಶೀಲಿಸಲಾಗಿದೆ. ಭಾರತೀಯ ಆಹಾರ ನಿಗಮದ ಹೊರ ಜಿಲ್ಲೆಯಿಂದ ಅಧಿಕಾರಿಗಳನ್ನು ಕರೆತಂದು, ಮಿಲ್‌ಗಳಲ್ಲಿನ ಎಲ್ಲಾ ಲಾಟ್‌ಗಳ ಚೀಲಗಳಿಂದ ಅಕ್ಕಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಹೇಳಿವೆ.
ಮಿಲ್‌ನಲ್ಲಿ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಮಿಲ್‌ನಿಂದ ಯಾವೆಲ್ಲ ಲಾರಿಗಳಲ್ಲಿ ಅಕ್ಕಿಗಳನ್ನು ಸಾಗಿಸಲಾಗಿದೆ ಎಂಬುದರ ವಿವರ ಇದೆ. ಲಾರಿಗಳ ಎಂಟ್ರಿ ಮತ್ತು ಎಕ್ಸಿಟ್ ಎಲ್ಲಿ ಆಗಿತ್ತು? ಯಾವು ಪಾಯಿಂಟ್‌ನಿಂದ ಯಾವ ಪಾಯಿಂಟ್‌ಗೆ ಹೋಗಿವೆ ಎಂಬುದರ ಮಾಹಿತಿ ಕಲೆ ಹಾಕಲಾಗುತ್ತಿದೆ. ಜೊತೆಗೆ ಮಿಲ್‌ಗಳಲ್ಲಿ ದಾರಾ ಡಬಲ್ ಸ್ಟಾರ್, ಡೈನೆಸ್ಟಿ ಮತ್ತು ರಿಜ್ಸ್ ಮಾರ್ಕಾನಾ ಉತ್ಪನ್ನಗಳ ಹೆಸರಿನ ಅಕ್ಕಿಯ ಮೂಟೆಗಳು ಪತ್ತೆಯಾಗಿದ್ದವು. ಆ ಬ್ರ್ಯಾಂಡ್‌ಗಳ ಮುದ್ರಣದ ಚೀಲಗಳು ಎಲ್ಲಿಯವು ಎಂಬುದು ಪತ್ತೆಯಾಗಬೇಕಿದೆ ಎಂದಿವೆ.
ತೆಲಂಗಾಣ, ಪಂಜಾಬ್, ಹರಿಯಾಣ, ಗುಜರಾತ್ ರಾಜ್ಯಗಳ ಹೆಸರಿರುವ ಅಕ್ಕಿ ಮೂಟೆಗಳು ಮಿಲ್‌ಗಳಲ್ಲಿ ಪತ್ತೆಯಾಗಿವೆ. ಅವುಗಳು ಯಾವ ಮಿಲ್, ಗೋದಾಮುಗಳಿಗೆ ಸೇರಿದ್ದವು? ಅವುಗಳ ಹಿಂದೆ ಯಾರಿದ್ದಾರೆ? ಎಲ್ಲಿಂದ ಎಲ್ಲಿಗೆ ಪೂರೈಕೆ ಆಗುತ್ತಿತ್ತು? ಗುರುಮಠಕಲ್‌ಗೆ ಹೇಗೆ ಬಂದವು ಎಂಬ ಎಲ್ಲ ಆಯಾಮಗಳಿಂದ ತನಿಖೆ ಸಾಗುತ್ತಿರುವುದು ಗೊತ್ತಾಗಿದೆ.
ನಿರೀಕ್ಷಣಾ ಜಾಮೀನು ಅರ್ಜಿ ವಜಾ
ನಿರೀಕ್ಷಣಾ ಜಾಮೀನು ಕೋರಿ ಪ್ರಕರಣದ ಎ3 (ಚಂದ್ರಿಕಾ) ಮತ್ತು ಎ4 (ಲಕ್ಷ್ಮಿಬಾಯಿ) ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ ಎಂದು ಮೂಲಗಳಿಂದ ಗೊತ್ತಾಗಿದೆ. ಪಡಿತರ ಅಕ್ಕಿ ಅಕ್ರಮ ದಾಸ್ತಾನು ಆರೋಪದಡಿ ರೈಸ್ ಮಿಲ್‌ಗಳ ಮಾಲೀಕರಾದ ನರೇಂದ್ರ ರಾಠೋಡ ಮತ್ತು ಅಯ್ಯಪ್ಪ ರಾಠೋಡ ಹಾಗೂ ಚಂದ್ರಿಕಾ ಮತ್ತು ಲಕ್ಷ್ಮಿಬಾಯಿ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.