ADVERTISEMENT

ಇಷ್ಟದ ಕಲೆ ಕೈ ಹಿಡಿದಾಗ..ಅನನ್ಯ ಪೆನ್ಸಿಲ್ ಕಲಾವಿದ ಮಹೇಶ..

ಅಶೋಕ ಸಾಲವಾಡಗಿ
Published 1 ಜೂನ್ 2025, 5:40 IST
Last Updated 1 ಜೂನ್ 2025, 5:40 IST
ಮಹೇಶ ಯಾದವ
ಮಹೇಶ ಯಾದವ   

ಸುರಪುರ: ಬಡತನ, ತಂದೆಯ ಅನಾರೋಗ್ಯ, ವಲಸೆ, ಗಾರೆ ಕೆಲಸ, ಕಲಿತಿದ್ದು ಕೇವಲ ಪಿಯುಸಿ; ಆದರೂ ಈತ ಅಪ್ರತಿಮ ಕಲಾವಿದ.     

ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದ ಮಹೇಶ ಯಾದವ ಪೆನ್ಸಿಲ್ ಕಲಾವಿದನಾಗಿ ಬೆಳೆದ ಕಥೆಯೇ ರೋಚಕ. 

ಮಹೇಶ ಅವರ ತಂದೆ ಶೇಖಪ್ಪ ಕೂಲಿ ಕಾರ್ಮಿಕ. ಹಾಗೂ ಹೀಗೂ ಮಗನನ್ನು ಪಿಯುಸಿವರೆಗೆ ಕಲಿಸಿದರು. ಮುಂದೆ ಓದಿಸುವುದು ಆಗುವುದಿಲ್ಲ. ನನಗೂ ದುಡಿಯಲು ಆರೋಗ್ಯ ನೆರವಿಗೆ ಬರುತ್ತಿಲ್ಲ ಅಂದಾಗ, ಮಹೇಶ ಮುಖ ಮಾಡಿದ್ದು ಬೆಂಗಳೂರಿನತ್ತ.

ADVERTISEMENT

ಮೊದಲು ಗಾರೆ ಕೆಲಸ ಮಾಡಿದ ಮಹೇಶನಿಗೆ ಅದು ಸರಿ ಕಾಣದಂತಾಗಿ ಕಾರ್ಖಾನೆಯಲ್ಲಿ ಕೆಲಸಕ್ಕೆ ಹುಡುಕಾಟ ನಡೆಸಿದ. ಕೊನೆಗೂ ಒಂದು ಕಂಪನಿಯಲ್ಲಿ ತಿಂಗಳಿಗೆ ₹15 ಸಾವಿರದ ವೇತನದ ಕೆಲಸ ದೊರೆಯುತ್ತದೆ. 

ಮಹಾನಗರ ಬೆಂಗಳೂರಿನಲ್ಲಿ ಈ ಸಂಬಳ ಏತಕ್ಕೂ ಸಾಲುವುದಿಲ್ಲ ಎಂಬ ಕೊರಗು. ಅಷ್ಟು ಇಷ್ಟು ಹಣ ಉಳಿಸಿ ಹಣ ಹೆತ್ತವರಿಗೆ ಕಳಿಸುತ್ತಿರುವ ನೆಮ್ಮದಿ ಇದ್ದರೂ ಮುಖದಲ್ಲಿ ನಗು ಇರಲಿಲ್ಲ.

ಇದನ್ನು ಗಮನಿಸಿದ ಸಹೋದ್ಯೋಗಿ ಶಾರದಾ ಅವರು, ‘ಚಿಂತೆ ಮರೆಯಲು ಇಷ್ಟವಾದ ಕಲೆಯಲ್ಲಿ ತೊಡಗಿಕೋ’ ಎಂದು ಮಹೇಶನಿಗೆ ಸಲಹೆ ನೀಡಿದರು. ಪೆನ್ಸಿಲ್ ಕಲೆಯಲ್ಲಿ ಪರಿಣಿತೆಯಾದ ಶಾರದಾ ಅವರನ್ನೇ ಮಹೇಶ ಗುರುವಾಗಿ ಸ್ವೀಕರಿಸಿ ಕಳೆದ ಒಂದು ವರ್ಷದಿಂದ ಈ ಕಲೆಯಲ್ಲಿ ನಿಷ್ಠೆಯಿಂದ ತೊಡಗಿಕೊಂಡು ಯಶ ಸಾಧಿಸಿದ್ದಾರೆ. 

ಮಹೇಶ ನಿತ್ಯ ಚಿತ್ರ ಬಿಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬರುವ ಅಭಿಪ್ರಾಯಗಳಿಂದ ಖುಷಿ ಪಡುತ್ತಾರೆ. ಇದರಿಂದ ಮತ್ತಷ್ಟು ಚಿತ್ರ ಬಿಡಿಸುವ ಹುಮ್ಮಸ್ಸು ಬರುತ್ತಿದೆ. ಈಗ ಮಹೇಶ ಅವರು ಲವಲವಿಕೆಯಿಂದ ಇದ್ದಾರೆ. ಕೆಲಸದಲ್ಲೂ ಉತ್ಸಾಹ ಇದೆ. ಇದರಿಂದ ವೇತನದಲ್ಲೂ ಏರಿಕೆಯಾಗಿದೆ.
ಈಗಾಗಲೇ 500ಕ್ಕೂ ಹೆಚ್ಚು ಚಿತ್ರ ಬಿಡಿಸಿದ್ದಾರೆ. ದೇವರು, ಸ್ವಾತಂತ್ರ್ಯ ಹೋರಾಟಗಾರರು, ದಾರ್ಶನಿಕರು, ರಾಜಕೀಯ ಮುಖಂಡರು, ಸಿನಿಮಾ ನಟರ ಚಿತ್ರಗಳು ಸೇರಿವೆ. ಐದರಿಂದ ಹತ್ತು ನಿಮಿಷದಲ್ಲಿ ಒಂದು ಚಿತ್ರಬಿಡಿಸುವ ಚಾತುರ್ಯ ರೂಢಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಮಹೇಶ ಈ ಕಲೆಯಲ್ಲಿ ಜನಪ್ರಿಯರಾಗುತ್ತಿದ್ದಾರೆ. ತಾಲ್ಲೂಕಿನ ಅನೇಕರು ತಮ್ಮ, ತಮ್ಮ ಮಕ್ಕಳ ಚಿತ್ರಗಳನ್ನು ಬಿಡಿಸಿಕೊಡಲು ಹೇಳುತ್ತಿದ್ದಾರೆ.

ಅಂದವಾದ ಚಿತ್ರ ಬಿಡಿಸಿ ಅದಕ್ಕೆ ಫ್ರೇಮ್ ಹಾಕಿಸಿ ಉಡುಗೊರೆ ಕೊಡುವ ಸಂಪ್ರದಾಯ ಈಗ ಬೆಳೆಯುತ್ತಿದೆ. ಸುರಪುರದಲ್ಲಿ ಚಿತ್ರಕಲೆಯ ಸ್ಟುಡಿಯೋ ಆರಂಭಿಸುವ ಕನಸು ಮಹೇಶ ಅವರಿಗೆ ಇದೆ. ಅವರಿಗೆ ಪ್ರೋತ್ಸಾಹ ಮತ್ತು ಹಣದ ನೆರವಿನ ಅವಶ್ಯಕತೆ ಇದೆ.

ಹಣ ತರುತ್ತಿರುವ ಕಲೆ: ಚಿತ್ರಗಳನ್ನು ಬಿಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದರಿಂದ ಹಲವರು ಅಭಿಪ್ರಾಯ ಹಾಕುತ್ತಾರೆ. ಅಭಿಪ್ರಾಯ ಹಾಕಿದವರ ಚಿತ್ರವನ್ನು ಬಿಡಿಸಿ ಮಹೇಶ ಅವರಿಗೆ ಮರಳಿ ಹಾಕುತ್ತಾರೆ. ಕೆಲವರು ಖುಷಿ ಪಟ್ಟು ₹ 500 ರಿಂದ ಒಂದು ಸಾವಿರದÀವರೆಗೆ ಹಣ ಕಳುಹಿಸಿದ ಉದಾಹರಣೆ ಇವೆ. ಇದೂ ಮಹೇಶ ಅವರಿಗೆ ಸಾಕಷ್ಟು ನೆರವಾಗಿದೆ. ಅಂದಹಾಗೆ ಹಣದ ನಿರೀಕ್ಷೆ ಮಾಡಿ ಚಿತ್ರ ಕಳಿಸುವ ಪರಿಪಾಠ ಮಹೇಶ ಅವರಿಗೆ ಇಲ್ಲ.

ಹನುಮಂತ ದೇವರು
ಪ್ರತಿ ಮನುಷ್ಯನಿಗೆ ವೃತ್ತಿಯ ಜತೆ ಯಾವುದಾದರೂ ಒಂದು ಕಲೆಯ ಪ್ರವೃತ್ತಿ ಇರಲೇಬೇಕು. ಇದು ಆತನ ವ್ಯಕ್ತಿತ್ವ ರೂಪಿಸುತ್ತದೆ. ಇದಕ್ಕೆ ನಾನೇ ನಿದರ್ಶನ
ಮಹೇಶ ಯಾದವ ಪೆನ್ಸಿಲ್ ಕಲಾವಿದ
ಅಲ್ಪ ಸಮಯದಲ್ಲಿ ಮಹೇಶ ಅನನ್ಯ ಪೆನ್ಸಿಲ್ ಕಾಲವಿದನಾಗಿ ಬೆಳೆದಿದ್ದು ಅನುಕರಣೀಯ. ಈ ಕಲಾವಿದನಿಗೆ ನಮ್ಮ ಗೆಳೆಯರ ಬಳಗದಿಂದ ಎಲ್ಲ ನೆರವು ನೀಡಲಾಗುವುದು
ಕನಕಪ್ಪ ವಾಗಣಗೇರಿ ಸಾಹಿತಿ

ಏನಿದು ಪೆನ್ಸಿಲ್ ಕಲೆ?

ಗ್ರಾಫೈಟ್ ಉಪಕರಣಗಳನ್ನು ಬಳಸಿ ರೇಖಾ ಚಿತ್ರಗಳನ್ನು ಬಿಡಿಸುವುದಕ್ಕೆ ಪೆನ್ಸಿಲ್ ಕಲೆ ಎನ್ನುತ್ತಾರೆ. 16ನೇ ಶತಮಾನದಲ್ಲಿ ಗ್ರಾಫೈಟ್ ಗಣಿಗಾರಿಕೆ ಆರಂಭವಾದ ನಂತರ ಕಲಾವಿದರು ಚಿತ್ರಕಲೆಯಲ್ಲಿ ಗ್ರಾಫೈಟ್ ಬಳಸಲು ಆರಂಭಿಸಿದರು. 19ನೇ ಶತಮಾನದಲ್ಲಿ ಫ್ರಾನ್ಸ್ ದೇಶದ ಎಡ್ಗರ್ ಡೇಗಿಸ್ ಈ ಕಲೆಯಲ್ಲಿ ಅದ್ಭುತ ಸಾಧನೆ ಮಾಡಿದರು. ಅವರಿಂದ ಈ ಕಲೆ ಪ್ರವರ್ಧಮಾನಕ್ಕೆ ಬಂತು. ಪರಿಪೂರ್ಣ ಸ್ಕೆಂಚಿಂಗ್ ಈ ಕಲೆಯ ಜೀವಾಳ. ಈಗ ಪೆನ್ಸಿಲ್‍ನೊಂದಿಗೆ ಬ್ಲೆಂಡಿಂಗ್ ಸ್ಟಾಂಪ್‍ಗಳು ಎರೇಜರ್ ಶೀಲ್ಡ್‍ಗಳು ಗ್ರಾಫೈಟ್ ಸ್ಟಿಕ್‍ಗಳು ಆಯ್ದ ಬಣ್ಣಗಳನ್ನು ಬಳಸಲಾಗುತ್ತದೆ. ಈ ಕಲೆ ಶೇಡಿಂಗ್ ಮತ್ತು ದೃಶ್ಯ ಕಲಾ ಅಭಿವ್ಯಕ್ತಿಯ ಒಂದು ವಿಧಾನ. ಈ ಕಲೆ ಈಗ ನಮ್ಮ ದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.