ADVERTISEMENT

ಕಾಳಜಿ ಕೇಂದ್ರಗಳಿಗೆ ಬರಲೊಪ್ಪದ ಜನ

ಪ್ರವಾಹ ಏರಿಕೆ ಗೊಂದಲ; ಅಧಿಕಾರಿಗಳಿಗೂ ಮಾಹಿತಿ ಕೊರತೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:13 IST
Last Updated 19 ಅಕ್ಟೋಬರ್ 2020, 16:13 IST
ವಡಗೇರಾ ನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ನೆಲೆಸಿರುವ ಎನ್‌ಡಿಆರ್‌ಎಫ್‌ ಹಾಗೂ ಈಜು ಮುಳುಗು ತಜ್ಞರ ತಂಡ
ವಡಗೇರಾ ನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ನೆಲೆಸಿರುವ ಎನ್‌ಡಿಆರ್‌ಎಫ್‌ ಹಾಗೂ ಈಜು ಮುಳುಗು ತಜ್ಞರ ತಂಡ   

ಶಹಾಪುರ/ವಡಗೇರಾ: ಭೀಮಾ ನದಿಗೆ ಬಿಡುವ ನೀರಿನ ಪ್ರಮಾಣದ ಬಗ್ಗೆ ನಿಖರವಾದ ಮಾಹಿತಿ ಕೊರತೆಯಿಂದ ತಾಲ್ಲೂಕಿನ ಭೀಮಾ ನದಿ ದಂಡೆಯ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ.

ಸೋಮವಾರ ಭೀಮಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದರೂ ಗ್ರಾಮಸ್ಥರು ಕಿವಿಗೊಡುತ್ತಿಲ್ಲ. ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ.

ನಾಲ್ಕು ದಿನದ ಹಿಂದೆ ಭೀಮಾ ನದಿಗೆ 8 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತದೆ ಎಂದು ಜಿಲ್ಲಾಡಳಿತ ಸೂಚಿಸಿತ್ತು. ಅದರಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸಿತ್ತು. ತಾಲ್ಲೂಕು ಆಡಳಿತದ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಸುರಕ್ಷಿತ ಸ್ಥಳಕ್ಕೆ ಜನರನ್ನು ಕರೆ ತಂದರು. ಆದರೆ ಭೀಮಾ ನದಿಗೆ ಪ್ರವಾಹ ಬರಲಿಲ್ಲ. ಇದರಿಂದ ರೋಸಿ ಹೋದ ಗ್ರಾಮಸ್ಥರು ಮರಳಿ ಗೂಡಿಗೆ ಸೇರಿದ್ದರು.

ADVERTISEMENT

ಸೋಮವಾರ ಮಧ್ಯಾಹ್ನದಿಂದ ಭೀಮಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ತಾಲ್ಲೂಕು ಆಡಳಿತ ಸಿಬ್ಬಂದಿ ಹಾಲಗೇರಾ, ನಾಯ್ಕಲ್, ಬಬಲಾದ ಗಡ್ಡೆಸೂಗೂರ, ಕುಮನೂರ ಅರ್ಜುಣಗಿ, ಕಂದಳ್ಳಿ, ಬೂದಿನಾಳ, ಬೆನಕನಹಳ್ಳಿ, ಶಿವನೂರ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಬಸ್ ಕಳುಹಿಸಿ ಆಯಾ ಸಮೀಪದ ಕಾಳಜಿ ಕೇಂದ್ರಗಳಿಗೆ ಬರುವಂತೆ ಮಾಡಿದರು.

ಎನ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ, ಕಂದಾಯ ಇಲಾಖೆಯ ಅಧಿಕಾರಿಗಳು ಜನರ ಮನವೊಲಿಸಲು ಮುಂದಾದರೂ, ಗ್ರಾಮಸ್ಥರು ಮಾತ್ರ ಬರಲು ಒಪ್ಪುತ್ತಿಲ್ಲ. ‘ಇದು ನಮಗೆ ದೊಡ್ಡ ತಲೆ ನೋವಾಗಿದೆ. ಸರಿಯಾದ ಮಾಹಿತಿ ನೀಡದ ಕಾರಣ ಈಗ ಬೆಲೆ ತೆತ್ತುವಂತೆ ಆಗಿದೆ’ ಎಂದು ಅಧಿಕಾರಿ ಒಬ್ಬರು ತಿಳಿಸಿದರು.

‘ನೀರಿನ ಮಟ್ಟ ಹೆಚ್ಚಾಗುವ ಮೊದಲೇ ಸುರಕ್ಷಿತ ಸ್ಥಳಕ್ಕೆ ಆಗಮಿಸಬೇಕು. ಇಲ್ಲದೆ ಹೋದರೆ ಸಂಕಷ್ಟ ತಪ್ಪಿದ್ದಲ್ಲ. ತುಸು ತೊಂದರೆಯಾದರೂ ಚಿಂತೆ ಬೇಡ. ಸುರಕ್ಷಿತ ಸ್ಥಳಕ್ಕೆ ತೆರಳುವುದು ಮುಖ್ಯವಾಗಿದೆ’ ಎಂದು ರೋಜಾ ಗ್ರಾಮದ ಯುವಕ ರಫೀಕ ತಿಳಿಸಿದರು.

ಶಹಾಪುರ ತಾಲ್ಲೂಕಿನ ಹುರಸಗುಂಡಗಿ, ಅಣಬಿ, ರೋಜಾ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಅಲ್ಲದೆ ಆಯಾ ಗ್ರಾಮದ ಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಹಶೀಲ್ದಾರ್ ಜಗನ್ನಾಥರಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.