ಹೋರುಂಚ (ಯರಗೋಳ): ಗ್ರಾಮದಲ್ಲಿ ಕಳೆದ 15 ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮದ ರಸ್ತೆ ಮೇಲೆ ಮಳೆ ನೀರು ಸಂಗ್ರಹವಾಗಿ ರಸ್ತೆಗಳು ಕೆಸರುಮಯವಾಗಿವೆ. ಗ್ರಾಮಸ್ಥರಿಗೆ ದಿನನಿತ್ಯದ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಗ್ರಾಮಸ್ಥರು ಸೇರಿ ಭಾನುವಾರ ಕೆಸರು ಗದ್ದೆಯಾದ ರಸ್ತೆ ಮೇಲೆ ಭತ್ತ ನಾಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು.
ಅಲ್ಲಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೋರುಂಚ ಗ್ರಾಮದಲ್ಲಿ ನಾಲ್ಕು ಜನ, ತಾಂಡದಲ್ಲಿ ಇಬ್ಬರು ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರಿದ್ದು, 800 ಜನಸಂಖ್ಯೆ ಇದೆ. ಸಾರ್ವಜನಿಕರು ನಿತ್ಯದ ಕೆಲಸ ಕಾರ್ಯಗಳಿಗೆ ಯಾದಗಿರಿ ಬರಬೇಕಾದರೆ ಹೋರುಂಚ -ಅಲ್ಲಿಪುರ ಮಾರ್ಗವಾಗಿ ಬರುತ್ತಾರೆ. ಹೋರುಂಚ ತಾಂಡದಿಂದ ಹೋರುಂಚ ಗ್ರಾಮಕ್ಕೆ 3 ಕಿಲೋಮೀಟರ್ ಅಂತರವಿದ್ದು, ರಸ್ತೆ ಮೇಲಿನ ಡಾಂಬರ್ ಸಂಪೂರ್ಣ ಕಿತ್ತು ಹೋಗಿದ್ದು, ತಗ್ಗುಗಳು ಬಿದ್ದು ಮಳೆ ನೀರು ಸಂಗ್ರಹವಾಗುತ್ತಿದೆ.
‘ಬೈಕ್, ಆಟೊಗಳ ಮೂಲಕ ಪ್ರಯಾಣಿಸುವಾಗ ಹಲವು ಬಾರಿ ಅಪಘಾತಗಳು ಸಂಭವಿಸಿವೆ. ಇದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಭಯಪಡುತ್ತಿದ್ದು, ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಾದ ಅನಿವಾರ್ಯತೆ ಇದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ರಸ್ತೆ ದುರಸ್ತಿ ಮಾಡುತ್ತಿಲ್ಲ’ ಎನ್ನುವುದು ಗ್ರಾಮಸ್ಥರು.
ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಮೇಲೆ ಗ್ರಾಮಸ್ಥರು ಭತ್ತ ನಾಟಿ ಮಾಡುವ ದೃಶ್ಯಗಳು ಹರಿದಾಡುತ್ತಿವೆ.
ಹದಗೆಟ್ಟ ರಸ್ತೆಯ ಸ್ಥಳ ವೀಕ್ಷಣೆ ಮಾಡಿ ಗ್ರಾಮ ಪಂಚಾಯತಿ ಅನುದಾನದಲ್ಲಿ ಇತಿಮಿತಿಯಲ್ಲಿ ದುರಸ್ತಿ ಮಾಡಲಾಗುವುದುಶರಣಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.