ADVERTISEMENT

ಪ್ರಜಾವಾಣಿ ಫೋನ್‌ ಇನ್‌: ಅಧಿಕೃತ ಮಾರಾಟಗಾರರಿಂದ ಬೀಜ, ಗೊಬ್ಬರ ಖರೀದಿಸಿ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಆಬಿದ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 16:22 IST
Last Updated 18 ಮೇ 2022, 16:22 IST
ಆಬಿದ್‌ ಎಸ್‌.ಎಸ್‌.
ಆಬಿದ್‌ ಎಸ್‌.ಎಸ್‌.   

ಯಾದಗಿರಿ: ಜಂಟಿ ಕೃಷಿ ನಿರ್ದೇಶಕ ಆಬಿದ್‌ ಎಸ್‌.ಎಸ್‌. ಅವರೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲದೆ ಹೊರಜಿಲ್ಲೆಗಳಿಂದಲೂ ಓದುಗರ ಕರೆಗಳು ಬಂದವು.

ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು, ಕೃಷಿ ಪರಿಕರಗಳ ಲಭ್ಯತೆ, ಬಿತ್ತನೆ ಬೀಜ, ರಸಗೊಬ್ಬರ ಖರೀದಿಸುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮಗಳು, ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ಸಿಗುವ ಸೌಲಭ್ಯಗಳು, ಪಿಎಂ ಕಿಸಾನ್‌ ಸೇರಿದಂತೆ ಸಹಕಾರ ಇಲಾಖೆ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ರೈತರು ಕೇಳಿದರು. ಅವರ ಪ್ರಶ್ನೆಗಳಿಗೆ ಜಂಟಿ ನಿರ್ದೇಶಕರು ಸಾವಧಾನವಾಗಿ ಉತ್ತರಿಸಿ ಮಾಹಿತಿ ನೀಡಿದರು.

ಜಿಲ್ಲೆಯು ತೆಲಂಗಾಣ ಗಡಿಯನ್ನು ಹೊಂದಿದ್ದರಿಂದ ಆ ಭಾಗದಿಂದ ಕಡಿಮೆ ಬೆಲೆಗೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುತ್ತಾರೆ. ಹೀಗಾಗಿ ಅಧಿಕೃತ (ಪರವಾನಗಿ) ಹೊಂದಿದ ಮಳಿಗೆಗಳಿಂದ ಮಾತ್ರ ಬಿತ್ತನೆ ಬೀಜ ರಸಗೊಬ್ಬರ ಖರೀದಿ ಮಾಡಿ. ನೂರಿನ್ನೂರು ಕಡಿಮೆ ಬೆಲೆಯ ಆಸೆಗೆ ಬಿದ್ದು ನಕಲಿ ಬೀಜ, ರಸಗೊಬ್ಬರ ಖರೀದಿ ಮಾಡಬೇಡಿ. ಇದರಿಂದ ರೈತರಿಗೆ ನಷ್ಟವಾಗಲಿದೆ ಎಂದು ಆಬಿದ್‌ ಎಸ್‌.‌ಎಸ್‌. ತಿಳಿಸಿದರು.

ADVERTISEMENT

l ಕೃಷಿ ಇಲಾಖೆಯಿಂದ ವಿತರಿಸುವ ಸ್ಪ್ರಿಂಕ್ಲರ್‌ಗೆ ಫಲಾನುಭವಿಯಾಗಿ ಆಯ್ಕೆಯಾಗಿದ್ದೇನೆ. ಸರ್ಕಾರದಿಂದ ಪ್ರೋತ್ಸಾಹಧನ ಜಮೆಯಾದರೂ ನನಗೆ ಇನ್ನೂ ಪರಿಕರಗಳನ್ನು ನೀಡುತ್ತಿಲ್ಲ. ಕೃಷಿ ಹೊಂಡಕ್ಕೆ ರಿಯಾಯ್ತಿ ಬೇಕಾಗಿದೆ.
- ಅಶೋಕ, ಮಾಧ್ವಾರ

ಸಂಬಂಧಿಸಿದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕ ಮಾಡಿ. ಕೃಷಿ ಹೊಂಡ ಸಹಾಯಧನ ಯೋಜನೆ ನಾಲ್ಕು ವರ್ಷಗಳಿಂದ ನಿಂತಿದೆ.

l ಕೃಷಿ ಚಟುವಟಿಕೆಗಳಲ್ಲಿ ಯಾವ ಬೀಜ, ರಸಗೊಬ್ಬರ ಖರೀದಿ ಮಾಡಬೇಕು?
–ಮಲ್ಲಪ್ಪ, ಯಕ್ತಾಪುರ

ಯಾವುದೇ ಕಾರಣಕ್ಕೂ ಖುಲ್ಲಾ ಬೀಜ, ರಸಗೊಬ್ಬರ ಖರೀದಿ ಮಾಡಬೇಡಿ. ನಿಮ್ಮ ಭಾಗಕ್ಕೆ ಯಾವ ಬೆಳೆ ಸೂಕ್ತವಾಗಿದೆ ಅದನ್ನು ಬೆಳೆಯಿರಿ.

l ಜಿಲ್ಲೆಯ ಕೆಲ ಕಡೆ ಕೃತಕ ರಸಗೊಬ್ಬರ ಅಭಾವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ.
–ಮಲ್ಲಿಕಾರ್ಜುನ ಸತ್ಯಂಪೇಟೆ

ಈಗಾಗಲೇ ವಡಗೇರಾ ತಾಲ್ಲೂಕಿನಲ್ಲಿ ನಕಲಿ ರಸಗೊಬ್ಬರ ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಅಧಿಕೃತ ಖರೀದಿದಾರರಿಂದಲೇ ಖರೀದಿ ಮಾಡಬೇಕು. ರಸಗೊಬ್ಬರ ಕೃತಕ ಅಭಾವ ಸೃಷ್ಟಿಸುವವರ ಬಗ್ಗೆ ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ನಾವು ಕ್ರಮ ಕೈಗೊಳ್ಳಲು ಸಾಧ್ಯ.

l ಡಿಸಿಸಿ ಬ್ಯಾಂಕ್‌ನಿಂದ ಕೆಲವರಿಗೆ ಸಾಲ ಮನ್ನಾ ಆಗಿದೆ. ತಮಗೆ ಬೇಕಾದವರಿಗೆ ಮಾತ್ರ ಸಾಲ ಕೊಡುತ್ತಿದ್ದಾರೆ. ಮಾಹಿತಿಯೂ ಕೊಡುತ್ತಿಲ್ಲ.
–ಶಾಂತಯ್ಯ ಗುತ್ತೇದಾರ, ಏವೂರ

ಪ್ರಾಥಮಿಕ ಪತ್ತಿನ ಸಹಕಾರ ಸಂಘ ಸಹಕಾರ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ದೂರು ನೀಡಿ.

l ಎಲ್ಲಿ ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಬೇಕು. ಒಂದು ಜಿಲ್ಲೆ ಒಂದು ಉತ್ಪನ್ನ ಏನಿದು?
–ರಾಘವೇಂದ್ರ ಭಕ್ರಿ, ಸುರಪುರ

ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ ಮತ್ತು ರಸಗೊಬ್ಬರ ಖರೀದಿ ಮಾಡಬೇಕು. ಪಾಕೇಟ್‌ ಸೀಲ್‌ ಆಗಿರುವುದನ್ನು ಮಾತ್ರ ಖರೀದಿ ಮಾಡಬೇಕು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಯಲ್ಲಿ ಶೇಂಗಾ ಬೆಳೆ ಆಯ್ಕೆಯಾಗಿದೆ. ಶೇಂಗಾವನ್ನು ಮೌಲ್ಯವರ್ಧಿತ ಮಾಡಲು ₹ 10 ಲಕ್ಷ ಸಬ್ಸಿಡಿ ಇದೆ.

l 2022–23ನೇ ಸಾಲಿಗೆ ಯಾವ ರೀತಿ ಸಿದ್ಧತೆ ಮಾಡಿಕೊಂಡಿದ್ದೀರಿ?
–ಅಶೋಕ ಮಲ್ಲಾಬಾದಿ, ಶಹಾಪುರ

ಕೃಷಿ ಇಲಾಖೆಯಿಂದ ಈಗಾಗಲೇ ರಸಗೊಬ್ಬರ, ಬಿತ್ತನೆ ಬೀಜ ಸಂಗ್ರಹ ಮಾಡಿಕೊಳ್ಳಲಾಗಿದೆ. ಶೇಂಗಾ ಮೌಲ್ಯವರ್ಧಿತ ಮಾಡಲು ಜಿಲ್ಲೆಯಲ್ಲಿ ಮೂವರಿಗೆ ಸಾಲ ವಿತರಣೆ ಮಾಡಲಾಗಿದೆ.

l ಈ ಮೊದಲು ಭತ್ತ ಬೆಳೆಯುತ್ತಿದ್ದೆವು. ಆದರೆ, ಸರ್ಕಾರ ಭತ್ತ ಬೆಳೆಯುವುದನ್ನು ನಿಲ್ಲಿಸಿ ಇತರೆ ಬೆಳೆ ಬೆಳೆಯುವಂತೆ ಹೇಳುತ್ತಿದೆ. ಈಗ ಯಾವ ಬೆಳೆ ಬೆಳೆಯಬೇಕು? ಅದಕ್ಕೆ ಕೃಷಿ ಇಲಾಖೆಯಿಂದ ಏನೇನು ಸೌಲಭ್ಯ ಸಿಗುತ್ತದೆ?
- ತೇಜಪ್ಪ, ಬೆಂಗಳೂರು

ಮಣ್ಣಿನ ಸವಕಳಿ ಹಾಗೂ ಜಮೀನು ಬಂಜರು ಆಗುವುದನ್ನು ತಪ್ಪಿಸಲು ಸರ್ಕಾರ ಭತ್ತ ಬೆಳೆಯುವುದನ್ನು ನಿಷೇಧಿಸಿದೆ. ಭತ್ತದ ಬದಲಿಗೆ ಶೇಂಗಾ, ಹೆಸರು, ಜೋಳ, ತೊಗರಿ, ಸೂರ್ಯಕಾಂತಿ ಬೆಳೆಯಬಹುದು. ಮಿಶ್ರ ಬೆಳೆಯಿಂದ ಹೆಚ್ಚು ಆದಾಯ ಪಡೆಯಬಹುದು. ಈಗಾಗಲೇ ನಮ್ಮ ಇಲಾಖೆಯಿಂದ ಬಿತ್ತನೆ ಬೀಜ, ಲಘುಪೋಷಕಾಂಶಗಳು, ಔಷಧ ವಿತರಣೆ ಮಾಡಲಾಗುತ್ತಿದೆ. ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ನಮ್ಮ ಕಚೇರಿಗೆ ಬಂದರೆ ನಿಮಗೆ ಸಂಪೂರ್ಣ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುವುದು.

l ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಜನಸಂಖ್ಯೆ ನಮ್ಮಲ್ಲಿ ಹೆಚ್ಚಿದೆ. ಆದ್ದರಿಂದ ಜನಸಂಖ್ಯೆಗೆ ಅನುಗುಣವಾಗಿ ತಾಡಪಾಲ್ ವಿತರಣೆ ಮಾಡಲು ಸಾಧ್ಯವೇ?
- ಪರಮಣ್ಣ, ಕಕ್ಕೇರಾ

ಇಲ್ಲ, ಸರ್ಕಾರ ನೀಡಿದ ಮಾರ್ಗದರ್ಶಿ ಸೂಚನೆಗಳಂತೆ ಜಿಲ್ಲೆಗೆ ವಿತರಣೆಯಾದ ತಾಡಪಾಲ್‌ಗಳನ್ನು ಮೂರೂ ತಾಲ್ಲೂಕುಗಳಿಗೆ ಹಂಚಿಕೆ ಮಾಡಲಾಗುತ್ತದೆ. ನೀವು ಮನವಿ ಪತ್ರ ನೀಡಿದರೆ ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತದೆ.

l ಕೃಷಿ ಇಲಾಖೆ ನೀಡಿದ ಡಿಎಪಿ, ಯೂರಿಯಾ ಬೆಲೆಯ ಪಟ್ಟಿಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಮಳೆಯಾದರೆ ಇನ್ನೂ ಹೆಚ್ಚಿನ ಹಣ ಕೇಳುತ್ತಾರೆ. ಇದಕ್ಕೆ ಏನು ಮಾಡಬೇಕು?
- ನಾಗರಾಜ, ಕಮಲಾಪುರ, ಕಲಬುರಗಿ ಜಿಲ್ಲೆ

ನಿಮ್ಮ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿ. ಯಾವ ಅಂಗಡಿ, ಯಾವ ಕಂಪನಿಯ ಡಿಎಪಿ ಎಷ್ಟು ಪಡೆದಿದ್ದಾರೆ ಎನ್ನುವ ಮಾಹಿತಿ ನೀಡಿದರೆ, ಅವರು ಕಾನೂನು ಕ್ರಮ ಕೈಗೊಳ್ಳುತ್ತಾರೆ. ನಿಮ್ಮ ಜಿಲ್ಲೆಯ ಕೃಷಿ ಇಲಾಖೆಯ ಕಚೇರಿಗೆ ಭೇಟಿ ನೀಡಿಯೂ ದೂರು ನೀಡಬಹುದು.

l ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಂತಿನ ಹಣ ಜಮೆಯಾಗುತ್ತಿಲ್ಲ ಏಕೆ?
- ಶಫೀಕ್ ಅಹ್ಮದ್, ಸುರಪುರ

ಯೋಜನೆಯ ಎಲ್ಲ ಫಲಾನುಭವಿಗಳ ಮರು ಪರಿಶೀಲನೆ ನಡೆಯುತ್ತಿರುವ ಕಾರಣ ಈಗಿನ ಕಂತಿನ ಹಣ ಸ್ವಲ್ಪ ತಡವಾಗಿದೆ. ಈ ಕುರಿತು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ನಿಮ್ಮ ಆಧಾರ್ ಕಾರ್ಡ್ ನೀಡಿ ಮಾಹಿತಿ ಪಡೆಯಬಹುದು.

l ರೈತರ ಅನುಕೂಲಕ್ಕಾಗಿ ಕೃಷಿ ಹೊಂಡ ನಿರ್ಮಿಸಲು ಅವಕಾಶವಿದ್ದರೂ ಅದಕ್ಕೆ ತಾಲ್ಲೂಕು ಪಂಚಾಯಿತಿಯಿಂದ ಬೇಗ ಒಪ್ಪಿಗೆ ಸಿಗುತ್ತಿಲ್ಲ. ಕೃಷಿ ಇಲಾಖೆಯಿಂದ ಕೃಷಿ ಹೊಂಡ ನಿರ್ಮಿಸಲು ಅನುಮತಿ ನೀಡಿ.
- ವಿಶ್ವನಾಥ ಬಾಗಲಿ, ರಾಮಸಮುದ್ರ

ಕೃಷಿ ಇಲಾಖೆಯಿಂದ ಕೃಷಿ ಹೊಂಡ ನಿರ್ಮಿಸಲು ಈಗ ಅವಕಾಶವಿಲ್ಲ. ಆ ಯೋಜನೆಯನ್ನು ನಿಲ್ಲಿಸಲಾಗಿದೆ. ನೀವು ನರೇಗಾದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದು. ಅನುಮತಿ ನೀಡುವ ಕುರಿತು ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳೊಡನೆ ಮಾಹಿತಿ ಪಡೆಯುತ್ತೇನೆ.

l ಹಳ್ಳಿಗಳಲ್ಲಿ ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿಯಿಲ್ಲ. ಏನೇನು ಸೌಲಭ್ಯಗಳಿವೆ ಮತ್ತು ಹಂಚುತ್ತಿರುವುದು ಹೇಗೆ?
- ಪ್ರಕಾಶ, ಸುರಪುರ., ಮರಿಲಿಂಗ ಪೂಜಾರಿ, ಬಂದಳ್ಳಿ

ಬಿತ್ತನೆ ಬೀಜ, ಸ್ಪ್ರಿಂಕ್ಲರ್, ತಾಡಪಾಲ್, ಲಘುಪೋಷಕಾಂಶಗಳು, ಔಷಧ ವಿತರಣೆ ಮಾಡಲಾಗುವುದು. ಎಲ್ಲ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಈ ಕುರಿತು ಭಿತ್ತಿಪತ್ರಗಳು, ಕೃಷಿರಥ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಬಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ವಿತರಣೆ ಮಾಡಲಾಗುವುದು.

l ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲಿಟ್ಟು ನಕಲಿ ಹತ್ತಿ ಬೀಜ ಮಾರಾಟವನ್ನು ಮಾಡುತ್ತಾರೆ. ಅದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ?
- ಸೋಮಶೇಖರ್‌, ಯಾದಗಿರಿ

ಜಿಲ್ಲೆಯು ಗಡಿ ಭಾಗವಾಗಿದ್ದರಿಂದ ಬೇರೆಡೆಯಿಂದ ಬಂದು ಕಳಪೆ ಬೀಜ ಮಾರಾಟ ಮಾಡುತ್ತಾರೆ. ಆದರೆ, ನೀವು ಹೇಳಿದಂತೆ ಕಿರಾಣಿ ಅಂಗಡಿ ಅಥವಾ ಹೋಟೆಲ್‌ಗಳಲ್ಲಿ ಮಾರಾಟ ಮಾಡುವ ಕುರಿತು ನಮಗೆ ಮಾಹಿತಿಯಿಲ್ಲ. ನೀವು ಮಾರಾಟದ ಸ್ಥಳವನ್ನು ನಿಖರವಾಗಿ ಹೇಳಿದರೆ ಕ್ರಮ ಕೈಗೊಳ್ಳುತ್ತೇವೆ. ಬೇಕಾದರೆ ನೀವು ನನಗೆ ಕರೆ ಮಾಡಿ ಹೇಳಬಹುದು.

l ನಮ್ಮದು ಒಂದು ಎಕರೆ ಜಮೀನಿದೆ. ಕೋಳಿ, ಕುರಿ ಸಾಕಾಣಿಕೆ ಮತ್ತು ತರಕಾರಿ ಬೆಳೆಯುವ ಚಿಂತನೆಯಿದೆ. ನಿಮ್ಮಿಂದ ಯಾವ ಸೌಲಭ್ಯ ಸಿಗುತ್ತದೆ?
- ಮಲ್ಲಿಕಾರ್ಜುನ, ಯಾದಗಿರಿ

ಕೋಳಿ ಮತ್ತು ಕುರಿ ಸಾಕಾಣಿಕೆಗೆ ಪಶು ಸಂಗೋಪನಾ ಇಲಾಖೆ ಮತ್ತು ತರಕಾರಿ ಬೆಳೆಯಲು ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಸೌಲಭ್ಯ ಸಿಗುತ್ತವೆ. ನಮ್ಮ ಇಲಾಖೆ ಕೃಷಿಗೆ ಮಾತ್ರ ಸೀಮಿತ. ನೀವು ಆ ಇಲಾಖೆಗಳಲ್ಲಿ ಮಾಹಿತಿ ಪಡೆದುಕೊಳ್ಳಿ ಮತ್ತು ನಿಮ್ಮ ಜಮೀನಿನಲ್ಲಿ ಯಾವುದು ಸರಿಹೊಂದುತ್ತದೆ ಎನ್ನುವುದನ್ನು ನೋಡಿದ ನಂತರ ತೀರ್ಮಾನಿಸಿ.

l ಕೃಷಿ ಇಲಾಖೆಯಿಂದ ಜನತೆಗೆ ಮಾಹಿತಿ ಸಿಗುತ್ತಿಲ್ಲ. ಮಾಹಿತಿ ನೀಡಲು ಏನು ಕ್ರಮ ಕೈಗೊಂಡಿದ್ದೀರಿ? ಮಾಹಿತಿ ಕೊರತೆಯಿಂದ ಕೃಷಿಯಂತ್ರಧಾರೆ ರೈತರಿಗೆ ಸರಿಯಾಗಿ ಲಭ್ಯವಾಗುತ್ತಿಲ್ಲ ಏನು ಮಾಡಬೇಕು?
- ವಾಲ್ಮೀಕಿ, ಕೊಳ್ಳೂರು (ಎಂ)

ಕೃಷಿ ಮಾಹಿತಿ ಆಂದೋಲನದ ಮೂಲಕ ಎಲ್ಲ ರೈತರಿಗೂ ಕೃಷಿ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಲಾಗುವುದು. ಕೃಷಿ ಯಂತ್ರಧಾರೆಗೆ ಸಂಬಂಧಿಸಿದಂತೆ ಸ್ವಲ್ಪ ತೊಂದರೆಯಾಗುತ್ತಿದೆ ನಿಜ. ಅದರೆ, ಅದು ನೇರವಾಗಿ ಇಲಾಖೆಯೇ ನಿರ್ವಹಿಸುತ್ತಿಲ್ಲ, ಎನ್‌ಜಿಒ ಸಂಸ್ಥೆಗಳು ನಿರ್ವಹಿಸುತ್ತಿವೆ. ಅದರ ಲಾಭವನ್ನು ಪಡೆಯುವ ಕುರಿತೂ ಜನತೆಗೆ ಮಾಹಿತಿ ನೀಡಲಾಗುತ್ತದೆ.

***

ಏಕಬೆಳೆ ಬಿಡಿ, ಮಿಶ್ರಬೆಳೆ ಬೆಳೆಯಿರಿ

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಮಿಶ್ರ ಬೆಳೆ ಬೆಳೆಯುತ್ತಿದ್ದರು. ಇದರಿಂದ ಒಂದರಲ್ಲಿ ನಷ್ಟವಾದರೂ ಮತ್ತೊಂದರಲ್ಲಿ ಲಾಭ ಸಿಗುತ್ತಿತ್ತು. ಆದರೆ, ಈಗ ಎಲ್ಲ ಕಡೆಯೂ ಏಕ ಬೆಳೆ ಬೆಳೆಯುವುದರಿಂದ ಮಣ್ಣಿನ ಸಾಂದ್ರತೆಯೂ ಕುಸಿಯುತ್ತದೆ.

ಹೆಸರು ಜೊತೆ ಶೇಂಗಾ, ತೊಗರಿ ಬೆಳೆ ನಡುವೆ ಸಜ್ಜೆ, ಜಮೀನು ದಂಡೆಗಳಲ್ಲಿ ಔಡಲ, ಕುಸುಬೆ ಬೆಳೆಯಬಹುದು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಲಿದೆ. ಯಾವುದೇ ಒಂದೇ ಬೆಳೆಯನ್ನು ಬೆಳೆಯದೇ ಮಿಶ್ರಬೆಳೆ ಬೆಳೆಯುವುದರಿಂದ ಲಾಭವಾಗಲಿದೆ.
***
ಕೃಷಿ ಯಂತ್ರಧಾರೆ ಯೋಜನೆ

ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೃಷಿ ಇಲಾಖೆಯಿಂದ ಕೃಷಿ ಯಂತ್ರಧಾರೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಬಾಡಿಗೆ ಆಧಾರಿತ ಯಂತ್ರಗಳು ಇಲ್ಲಿ ಸಿಗುತ್ತವೆ. ಬಿತ್ತನೆಯಿಂದ ಹಿಡಿದು ಕಳೆ ಕೀಳುವುದು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬೇಕಾಗಿರುವ ಯಂತ್ರಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ.
***
ಕೃಷಿ ಪರಿಕರಗಳ ಲಭ್ಯತೆ

ಕೃಷಿ ಇಲಾಖೆಯಿಂದ ವಿವಿಧ ಯಂತ್ರೋಪಕರಣಗಳು ರಿಯಾಯ್ತಿ ದರದಲ್ಲಿ ಲಭ್ಯವಿವೆ.

ಯಂತ್ರೀಕರಣ, ತುಂತುರು, ಸೂಕ್ಷ್ಮ ನೀರಾವರಿ, ಶೀಲಿಂಧ್ರ ನಾಶಕ, ಸಸ್ಯ ಸಂರಕ್ಷಣಾ ಔಷಧಿ, ಎತ್ತು ಚಾಲಿತ ಕೂರಿಗೆ, ನೇಗಿಲು ಸೇರಿದಂತೆ ಇನ್ನಿತರ ಪರಿಕರಗಳು ಸಿಗುತ್ತವೆ.

ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ 90ರಷ್ಟು ರಿಯಾಯ್ತಿ ದರದಲ್ಲಿ ಸಿಗುತ್ತವೆ. ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಶೇ 90ರಷ್ಟು ರಿಯಾಯ್ತಿ ಇದೆ.

ಬಿತ್ತನೆ ಬೀಜದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ 75ರಷ್ಟು, ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಸಬ್ಸಿಡಿ ಇದೆ.
***
‘ರೈತಶಕ್ತಿ’ ಹೊಸ ಯೋಜನೆ

ಈ ವರ್ಷದಿಂದ ಸರ್ಕಾರ ‘ರೈತಶಕ್ತಿ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಡೀಸೆಲ್‌ ದರವೆಂದು ಹಣ ನೀಡುತ್ತಿದೆ.

ಒಂದು ಎಕರೆಗೆ ಕನಿಷ್ಠ ₹250, ಗರಿಷ್ಠ ಐದು ಎಕರೆಗೆ ₹1,250 ವರ್ಷಕ್ಕೆ ಸರ್ಕಾರ ಹಣ ನೀಡುತ್ತಿದೆ. ಇದಕ್ಕಾಗಿ ಅರ್ಜಿ ಹಾಕುವ ಅವಶ್ಯವಿಲ್ಲ. ಕೃಷಿ ಇಲಾಖೆಯವರು ಸಿದ್ಧಪಡಿಸಿದ ಫ್ರೂಟ್ (Farmer Registration and Unified Benificiary Information System (FRUITS)) ಇದರಿಂದಲೇ ಹಣ ಜಮಾ ಮಾಡಲಾಗುತ್ತಿದೆ. ಫ್ರೂಟ್ ತಂತ್ರಾಂಶದಲ್ಲಿ ನೋಂದಣಿ ಮಾಡಲು ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಾಯಿಸಬಹುದು.

ಪಾಸ್‌ಬುಕ್‌, ಪಹಣಿ, ಆಧಾರ್‌ ಕಾರ್ಡ್‌ ಮೂಲಕ ಈ ತಂತ್ರಾಂಶದಲ್ಲಿ ನೋಂದಣಿ ಮಾಡಿದರೆ ಸಾಕು.
***
ರಸಗೊಬ್ಬರ ದರ (₹ಗಳಲ್ಲಿ 50 ಕೆಜಿ)

ಯೂರಿಯಾ;266
ಡಿಎಪಿ;1,350
ಕಾಂಪ್ಲೆಕ್ಸ್‌;1,470
ಎಂಒಪಿ;1,700

***

ಫೋನ್‌ಇನ್‌ನಿರ್ವಹಣೆ: ಬಿ.ಜಿ.ಪ್ರವೀಣಕುಮಾರ, ರಾಜಕುಮಾರ ನಳ್ಳಿಕರ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.